ಸಿದ್ದಾಪುರ, ಮೇ 15: ಮಕ್ಕಳೊಂದಿಗೆ ಕೆರೆಯಲ್ಲಿ ಸ್ನಾನಕ್ಕೆ ತೆರಳಿದ ಬಾಲಕಿಯೊಬ್ಬಳು ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಹೊಸೂರು ಗ್ರಾಮದಲ್ಲಿ ನಡೆದಿದೆ.

ಹೊಸೂರು ಗ್ರಾಮದ ನಿವಾಸಿ ಪಿ ರಾಣಿ ಕಾರ್ಯಪ್ಪ ಎಂಬವರ ತೋಟದ ಲೈನ್ ಮನೆಯಲ್ಲಿ ತನ್ನ ಅಜ್ಜಿಯೊಂದಿಗೆ ವಾಸವಿದ್ದ ತುಳಸಿ (12) ಎಂಬ ಬಾಲಕಿಯು ಮೃತ ದುರ್ದೈವಿ. ಹೊಸೂರು ಗ್ರಾಮದ ರಾಣಿ ಕಾರ್ಯಪ್ಪನವರ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿರುವ ಹೊನ್ನಮ್ಮ ಎಂಬವರ ಮೊಮ್ಮಗಳಾದ ತುಳಸಿ ಮನೆಯ ಸಮೀಪದ ಮಕ್ಕಳೊಂದಿಗೆ ಆಟವಾಡಿ ನಂತರ ಮನೆಯ ಅನತಿ ದೂರದ ಕೆರೆಯೊಂದರಲ್ಲಿ ಸ್ನಾನಕ್ಕೆಂದು ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭ ಕಾಲುಜಾರಿ ತುಳಸಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಪೆÇಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಮೃತ ಬಾಲಕಿಯ ತಂದೆ ಒಂದು ವರ್ಷಗಳ ಹಿಂದೆಯಷ್ಟೇ ಮೃತಪಟ್ಟಿರುತ್ತಾರೆ. ತುಳಸಿಯು ಅಜ್ಜಿಯ ಮನೆಯಿಂದ ಶಾಲೆಗೆ ತೆರಳುತ್ತಿದ್ದಳು. ಅಜ್ಜಿಯೊಂದಿಗೆ ವಾಸವಾಗಿದ್ದಳು. ಹೊಸೂರು ಸರಕಾರಿ ಶಾಲೆಯಲ್ಲಿ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಸಿಬ್ಬಂದಿಗಳು ತೆರಳಿ ಕೆರೆಯಿಂದ ಬಾಲಕಿಯ ಮೃತದೇಹವನ್ನು ಹೊರ ತೆಗೆದರು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.