ಕುಶಾಲನಗರ, ಮೇ 15 : ಕುಶಾಲನಗರದಲ್ಲಿ ಆರಂಭಗೊಂಡಿದ್ದ ಕಾವೇರಿ ನದಿ ನಿರ್ವಹಣೆ ಕಾಮಗಾರಿ ಸ್ಥಗಿತಗೊಂಡ ಕಾರಣ ಪಟ್ಟಣದ ಪ್ರವಾಹ ಪೀಡಿತ ಬಡಾವಣೆಗಳ ಸಂತ್ರಸ್ತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ಆರಂಭಗೊಂಡಿದ್ದ ಕಾವೇರಿ ನದಿ ಕಾಮಗಾರಿ ಎರಡೇ ದಿನದಲ್ಲಿ ಸ್ಥಗಿತಗೊಂಡ ಹಿನ್ನಲೆಯಲ್ಲಿ ಕಾಮಗಾರಿಗೆ ಹಿನ್ನಡೆ ಉಂಟಾಗಲು ಕಾರಣಕರ್ತರಾದವರ ಮೇಲೆ ಪ್ರವಾಹ ಸಂತ್ರಸ್ತರು ಅಸಮಾಧಾನ ಗೊಂಡಿದ್ದಾರೆ. ಕೂಡಲೆ ಕಾಮಗಾರಿ ಮುಂದುವರೆ ಸದಿದ್ದಲ್ಲಿ ನದಿಯಲ್ಲಿ ಕುಳಿತು ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿಕೊಂಡ ಪಟ್ಟಣದ ವಿವಿಧ ಬಡಾವಣೆಗಳ ಮಹಿಳೆಯರು ಕಳೆದೆರೆಡು ವರ್ಷಗಳ ಕಾಲ ಕಾವೇರಿ ನದಿ ಪ್ರವಾಹದಿಂದ ಕುಶಾಲನಗರ ಪಟ್ಟಣದ ನಾಗರಿಕರ ಬದುಕು ದುಸ್ತರವಾಗಿದೆ.
ಕಾವೇರಿ ನದಿಯಲ್ಲಿ ತುಂಬಿರುವ ಕಾಡು ಪೊದೆಗಳನ್ನು, ಸಂಗ್ರಹ ವಾಗಿರುವ ಮಣ್ಣನ್ನು ತೆರವು ಗೊಳಿಸದರೆ ಪ್ರವಾಹದ ತೀವ್ರತೆ ಕೊಂಚವಾದರೂ ಇಳಿಮುಖ ವಾಗುವ ನಿರೀಕ್ಷೆ ಹೊಂದಲಾಗಿತ್ತು. ಇದಕ್ಕೆ ಪೂರಕವಾಗಿ ಕೈಗೊಂಡಿದ್ದ ಕಾಮಗಾರಿಗೆ ಕೆಲವರು ಅಡ್ಡಿಯುಂಟು ಮಾಡಿದ್ದಾರೆ. ತಡೆಯೊಡ್ಡುವ ಜನರ ಮನೆ ಮುಂದೆ ಧರಣಿ ಕುಳಿತು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಈಗಾಗಲೇ ಮಳೆಗಾಲ ಆರಂಭವಾಗಿದ್ದು ನದಿಯಲ್ಲಿ ನೀರು ತುಂಬುವ ಮುನ್ನ ಕಾಮಗಾರಿ ಆರಂಭಿಸುವಂತೆ ಪ್ರವಾಹ ಪೀಡಿತ ಶ್ರೀನಿಧಿ ಮತ್ತು ಶೈಲಜಾ ಬಡಾವಣೆಯ 50 ಕ್ಕೂ ಅಧಿಕ ಮಂದಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಕಾಮಗಾರಿ ಸ್ಥಗಿತಗೊಂಡ ಕಾರಣ ಮುಳುಗಡೆ ಪ್ರದೇಶಗಳ ನಿವಾಸಿಗಳಲ್ಲಿ ಆತಂಕ ಮತ್ತೆ ಮನೆಮಾಡಿದೆ ಎಂದು ಅಳಲು ವ್ಯಕ್ತಪಡಿಸಿರುವ ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಶ್ರೀನಿಧಿ ಬಡಾವಣೆಯ ರಾಣಿ, ಭಾಗ್ಯ, ಅಂಬಿಕಾ, ಬಿ.ಜೆ.ಮಂಜುಳಾ ಮತ್ತಿತರರು ಮತ್ತೆ ಪ್ರವಾಹದ ಭೀತಿಯನ್ನು ಎದುರಿಸಬೇಕಾದ ಸ್ಥಿತಿ ನಿರ್ಮಾಣಗೊಳ್ಳುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಅನುಮತಿ ನೀಡಿದ ಪ್ರಕಾರ ಕೂಡಲೆ ಕಾಮಗಾರಿ ಆರಂಭವಾಗದಿದ್ದಲ್ಲಿ ಕಾಮಗಾರಿಗೆ ಹಿನ್ನಡೆ ಮಾಡಿದವರ ನಿವಾಸಗಳ ಮುಂದೆ ಧರಣಿ ಕೂರುವುದಾಗಿ ನೊಂದ ಮಹಿಳೆಯರಾದ ದಿವ್ಯ, ಸರೋಜ, ದೇವೀರಮ್ಮ, ಸುಂದರಮ್ಮ, ಶಿವಮ್ಮ ಮತ್ತಿತರರು ಎಚ್ಚರಿಸಿದ್ದಾರೆ.
ಶೈಲಜಾ ಬಡಾವಣೆ ನಿವಾಸಿ ಗಳಾದ ವನಜಾಕ್ಷಿ, ತಿರುಮಲಯ್ಯ, ಐಚೆಟ್ಟಿರ ಗಣಪತಿ, ಜಯರಾಂ, ಕಟ್ರತನ ಉತ್ತಪ್ಪ, ಜನಾರ್ಧನ್, ರೇಣು ಶಿವಪ್ಪ, ಭಾರತಿ, ಮಮತಾ ಸುಬ್ಬಯ್ಯ, ಶಾಂತಿ ಮತ್ತಿತರರು ಕೂಡ ಮಳೆ ಆರಂಭಗೊಳ್ಳುವ ಮುನ್ನ ಈ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ. ಕಾಮಗಾರಿಗೆ ಅಡ್ಡಿಯುಂಟು ಮಾಡುತ್ತಿರುವ ಸಿ.ಪಿ.ಮುತ್ತಣ್ಣ, ಬಿ.ಸಿ.ನಂಜಪ್ಪ ಅವರುಗಳು ಮುಂದೆ ಉಂಟಾಗುವ ಆವಾಂತರಗಳಿಗೆ ಹೊಣೆಯಾಗ ಬೇಕಾಗುತ್ತದೆ ಎಂದು ದೂರಿದ್ದು ಅವರುಗಳ ಮೇಲೆ ಕ್ರಮಕೈಗೊಳ್ಳ ಬೇಕೆಂದು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳ ಭರವಸೆ: ಕುಶಾಲನಗರ ನದಿ ಪ್ರವಾಹ ಸಂತ್ರಸ್ತರ ವೇದಿಕೆ ಪ್ರಮುಖರು ಜಿಲ್ಲಾಧಿಕಾರಿ ಗಳನ್ನು ಭೇಟಿ ಮಾಡಿ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿ ಕಾಮಗಾರಿಗೆ ಅಡ್ಡಿಯುಂಟು ಮಾಡುವವರ ಮೇಲೆ ಒತ್ತಾಯಿಸಿ ದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಕ್ಷಣ ಕಾಮಗಾರಿ ಪ್ರಾರಂಭಿಸುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.