ಮಡಿಕೇರಿ, ಮೇ 15: ಎಪಿಎಂಸಿ ಪ್ಲಾಟ್‍ಫಾರ್ಮ್ ಮೂಲಕ ಕಡ್ಡಾಯವಾಗಿ ಹೋಗದೆ ಬೆಳೆಗಾರರು, ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿಯಾದರೂ ಯಾವದೇ ಖರೀದಿದಾರರಿಗೆ ಮಾರಾಟ ಮಾಡಲು ಸ್ವಾತಂತ್ರ್ಯ ನೀಡುವಂತೆ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಸುಗ್ರೀವಾಜ್ಞೆಯನ್ನು ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಸ್ವಾಗತಿಸುತ್ತದೆ. ಇದು ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಮತ್ತು ಇತರ ಬೆಳೆಗಾರ, ರೈತ ಸಂಘಟನೆಗಳ ದೀರ್ಘಕಾಲದ ಬೇಡಿಕೆಯಾಗಿದೆ ಎಂದು ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಸಿ. ಕಾರಿಯಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಪಿಎಂಸಿ ಕಾಯ್ದೆಗೆ ಈ ಸುಗ್ರೀವಾಜ್ಞೆ ಬಂದ ನಂತರವೂ ಎಪಿಎಂಸಿ ಪ್ರಾಂಗಣವು ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ. ಎಪಿಎಂಸಿ ಪ್ರಾಂಗಣದ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬಯಸುವ ಯಾವುದೇ ರೈತರು ಪ್ರಾಂಗಣದ ಸೇವೆಗಳನ್ನು ಬಳಸಿಕೊಳ್ಳಬಹುದು. ಈಗ ಬೆಳೆಗಾರರು, ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿಯ ಪರವಾನಗಿ ಹೊಂದಿರದ ವ್ಯಾಪಾರಿಗಳಿಗೆ ಮತ್ತು ರೀಟೇಲ್ ಕಂಪನಿಗಳಾದ ಮೋರ್, ರಿಲಯನ್ಸ್ ಫ್ರೆಶ್ ಮುಂತಾದವುಗಳ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಕ್ಯಾಂಪ್ಕೊದಂತಹ ಇತರ ಜಿಲ್ಲೆಗಳ ವ್ಯಾಪಾರಿಗಳು ಮತ್ತು ಸಹಕಾರ ಸಂಸ್ಥೆಗಳು ಸಹ ಬಂದು ಬೆಳೆಗಾರರು ಮತ್ತು ರೈತರಿಂದ ಕೃಷಿ ಉತ್ಪನ್ನಗಳನ್ನು ನೇರವಾಗಿ ಖರೀದಿಸಬಹುದಾಗಿದೆ. ಬಹು ಆಯ್ಕೆಗಳ ಲಭ್ಯತೆಯು ದೀರ್ಘಾವಧಿಯಲ್ಲಿ ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಕಾಫಿ ಮಾರುಕಟ್ಟೆಯ ಉದಾರೀಕರಣದ ಸಂದರ್ಭದಲ್ಲಾದಂತೆ, ರೈತರ ಉತ್ಪನ್ನಗಳ ಖರೀದಿದಾರರಲ್ಲಿ ಸ್ಪರ್ಧೆ ಇರುತ್ತದೆ. ರೈತರು ಕೊಯ್ಲು ಮಾಡಿದ ಉತ್ಪನ್ನಗಳನ್ನು ವ್ಯಾಪಾರಿಗಳ ಅಂಗಳಕ್ಕೆ ಕೊಂಡೊಯ್ಯುವ ಬದಲು ವ್ಯಾಪಾರಿಗಳೇ ರೈತರ ಫಾರ್ಮ್ ಗೇಟ್‍ನಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸಲು ಪ್ರಾರಂಭಿಸುತ್ತಾರೆ. ಕೃಷಿಯಲ್ಲಿನ ಈ ಸುಧಾರಣೆಯು ರೈತರ ಚೌಕಾಶಿ ಶಕ್ತಿಯನ್ನು ಬಹಳವಾಗಿ ಸುಧಾರಿಸುತ್ತದೆ. ಅಲ್ಲದೇ ರೈತರ ಆದಾಯದಲ್ಲಿ ಗಮನಾರ್ಹ ಸುಧಾರಣೆಯನ್ನು ಮಾಡುತ್ತದೆ. ಸರಕಾರದ ಈ ಸುಧಾರಿತ ನೀತಿಯಿಂದ ಕೊಡಗು ಜಿಲ್ಲೆಯಲ್ಲಿ ಕರಿಮೆಣಸು, ಅಡಿಕೆ, ಶುಂಠಿ ಮತ್ತು ಬಾಳೆಹಣ್ಣಿನಂತಹ ಬೆಳೆಗಳ ಬೆಲೆಗಳಲ್ಲಿ ಗಣನೀಯ ಪ್ರಮಾಣದ ಸುಧಾರಣೆಯನ್ನು ಕಾಣಬಹುದಾಗಿದೆ. ಆದ್ದರಿಂದ ಮಾಹಿತಿ ಕೊರತೆಯಿಂದಾಗಿ ಅಥವಾ ಸರಕಾರದ ನೀತಿಯನ್ನು ತಪ್ಪಾಗಿ ಗ್ರಹಿಸಿ ಮಾಡುವ ರಾಜಕೀಯ ವಿರೋಧಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಸರಕಾರವು ಈ ಮಹತ್ವದ ಸುಧಾರಣೆಗೆ ಮುಂದಾಗಬೇಕೆಂದು ಬೆಳೆಗಾರರ ಸಂಸ್ಥೆ (ಸಿಪಿಎ) ಸರ್ಕಾರವನ್ನು ಕೋರುವದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಎಂ.ಎಂ. ತಿಮ್ಮಯ್ಯ ಸ್ವಾಗತ
ಇದೇ ಅಭಿಪ್ರಾಯವನ್ನು ಸಿಪಿಎ ಸಂಸ್ಥೆಯ ಮಾಜಿ ಅಧ್ಯಕ್ಷ ಕುಟ್ಟದ ಮಾಚಿಮಾಡ ಎಂ. ತಿಮ್ಮಯ್ಯ ಅವರೂ ವ್ಯಕ್ತಪಡಿಸಿದ್ದಾರೆ. ಕೃಷಿಕರು ಇದೀಗ ಸ್ವತಂತ್ರರಾಗಿದ್ದಾರೆ. ಯಾವದೇ ಬಾಧತೆಯಿಲ್ಲದೆ ತಮ್ಮ ಉತ್ಪನ್ನಗಳನ್ನು ನಿಯಂತ್ರಣ ರಹಿತವಾಗಿ ಮಾರಾಟ ಮಾಡುವ ಮೂಲಕ ಹೆಚ್ಚಿನ ದರವೂ ಲಭಿಸಲಿದೆ. 1992-94ರಲ್ಲಿ ಕಾಫಿ ಮುಕ್ತ ಮಾರುಕಟ್ಟೆ ಘೋಷಣೆಯಾದ ಬಳಿಕ ಕಾಫಿ ಬೆಳೆಗಾರರು ಅದರ ಪೂರ್ಣ ಪ್ರಯೋಜನ ಪಡೆಯುವಂತಾಯಿತು. ಇದೀಗ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಕರಿಮೆಣಸು, ಅಡಿಕೆ ಮತ್ತು ಬಾಳೆ ಬೆಳೆಗಾರರಿಗೆ ಹೆಚ್ಚಿನ ಅನುಕೂಲವುಂಟಾಗಲಿದೆ ಎಂದು ತಿಮ್ಮಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.