ಕೊರೊನಾದೊಂದಿಗೆ ಬದುಕು ಕಲಿಯಬೇಕು

ಬೆಂಗಳೂರು, ಮೇ 15: ಕಳೆದ ಕೆಲ ದಿನಗಳಿಂದ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಸೋಂಕು ಸುಲಭದಲ್ಲಿ ನಿರ್ಮೂಲನೆ ಆಗಲಾರದು ಎಂದು ವಿಶ್ವಸಂಸ್ಥೆ ಸಹ ಖಚಿತಪಡಿಸಿದೆ. ಹೀಗಾಗಿ ನಾವು ಇದರ ಜೊತೆಗೆ ಬದುಕುವುದನ್ನು ಕಲಿಯಬೇಕು ಸಚಿವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರನೇ ಹಂತದ ಲಾಕ್‍ಡೌನ್ ಸಡಿಲಿಕೆ ಅದ ಮೇಲೆ ಇದೀಗ ನಾಲ್ಕನೇ ಹಂತದ ಲಾಕ್‍ಡೌನ್‍ಗೆ ಹೋಗುತ್ತಿದ್ದೇವೆ. ಎಲ್ಲಾ ಕಡೆಯಿಂದ ನಾವು ನಮ್ಮ ರಾಜ್ಯದವರನ್ನು ರಾಜ್ಯಕ್ಕೆ ಕರೆತರುತ್ತಿದ್ದೇವೆ. ಸೊಂಕು ಹೆಚ್ಚಿರುವ ದೇಶದಿಂದಲೂ ಭಾರತೀಯರು ಬಂದಿದ್ದಾರೆ. ಇವರ ಮೂಲಕ ಸೋಂಕು ಹರಡದಂತೆ ಬಹಳ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು. ಸೋಂಕಿತರ ಚಿಕಿತ್ಸೆಗಾಗಿ ಒಂದು ಲಕ್ಷ ಹಾಸಿಗೆ ವ್ಯವಸ್ಥೆ ರಾಜ್ಯದಲ್ಲಿ ಮಾಡಿಕೊಳ್ಳಲಾಗಿದೆ. ಜನವರಿಯಿಂದ ಪ್ರಾರಂಭವಾಗಿ ಮೇ ತಿಂಗಳವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1000ಕ್ಕೆ ಏರಿದೆ. ಬೇರೆ ರಾಷ್ಟ್ರ, ರಾಜ್ಯಕ್ಕೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಪ್ರಮಾಣವಾಗಿದೆ. ಕೇರಳ ರಾಜ್ಯದವರ ಜೊತೆ ಅನೇಕ ವಿಚಾರಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಿದ್ದೇವೆ. ಅವರು ಹೊರ ದೇಶದಿಂದ ಬಂದರೆ ಏನು ಮಾಡುವುದು ಎಂದು ಆತಂಕ ವ್ಯಕ್ತಪಡಿಸಿದ್ದರು.

ಸೇನಾ ಭವನದ ಒಂದು ಭಾಗ ಬಂದ್

ನವದೆಹಲಿ, ಮೇ 15: ರಾಜಧಾನಿ ದೆಹಲಿಯಲ್ಲಿರುವ ಭಾರತೀಯ ಸೇನೆ ಕೇಂದ್ರ ಕಚೇರಿಯಲ್ಲಿ ಸೈನಿಕರೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಸೇನಾ ಭವನದ ಒಂದು ಭಾಗವನ್ನು ಮುಚ್ಚಲಾಗಿದೆ. ಸೇನಾ ಭವನದ ಸೋಂಕು ತಗುಲಿರುವ ಭಾಗವನ್ನು ಮುಚ್ಚಿ ಸೋಂಕು ನಿವಾರಣೆಯಿಂದ ಸ್ವಚ್ಛಗೊಳಿಸಲಾಗುತ್ತಿದೆ. ಶಿಷ್ಟಾಚಾರದ ಪ್ರಕಾರ ಸೋಂಕಿತ ಸೈನಿಕ ಸಂಪರ್ಕ ಹೊಂದಿದ್ದವರ ಪತ್ತೆಹಚ್ಚಲಾಗುತ್ತಿದ್ದು ಅವರನ್ನು ಕ್ವಾರಂಟೈನ್ ಗೊಳಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಭಾರತೀಯ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ. ಈ ಹಿಂದೆ ತಾ. 4 ರಂದು ಭಾರತೀಯ ಸೇನಾ ಆಸ್ಪತ್ರೆಯಲ್ಲಿ ಸೇವಾ ನಿರತ ಮತ್ತು ನಿವೃತ್ತ ಸಿಬ್ಬಂದಿಗಳು ಸೇರಿ 24 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಲಾಗಿತ್ತು. ದೆಹಲಿಯ ಭಾರತೀಯ ಸೇನೆಯ ಸಂಶೋಧನೆ ಮತ್ತು ರೆಫ್ಫರಲ್ ಹಾಸ್ಪಿಟಲ್‍ನ್ನು ಸ್ವಚ್ಛಗೊಳಿಸಲಾಗಿತ್ತು. ಸೋಂಕು ರೋಗಿಗಳನ್ನು ದೆಹಲಿಯ ಕಂಟೋನ್‍ಮೆಂಟ್ ಪ್ರದೇಶದ ಬೇಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಇದಲ್ಲದೆ ಸೇವಾ ನಿರತ, ನಿವೃತ್ತ ಅಧಿಕಾರಿಗಳು, ಅವರ ಅವಲಂಬಿತರು ಸೇರಿದಂತೆ 74 ಮಂದಿ ಕೋವಿಡ್-19 ಚಿಕಿತ್ಸೆಗೆ ದಾಖಲಾಗಿದ್ದಾರೆ. 42 ಮಂದಿ ಸೇನಾ ಸಿಬ್ಬಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 74 ಮಂದಿ ರೋಗಿಗಳಲ್ಲಿ 60 ಸೇವಾ ನಿರತ ಸಿಬ್ಬಂದಿಯಾಗಿದ್ದಾರೆ.

ಎಸ್.ಎಸ್.ಎಲ್.ಸಿ. ಪರೀಕ್ಷೆ ಶೀಘ್ರ ನಿರ್ಧಾರ

ಚಾಮರಾಜನಗರ, ಮೇ 15: ಎಸ್.ಎಸ್.ಎಲ್.ಸಿ. ಪರೀಕ್ಷೆ ಕುರಿತು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿರುವುದರಿಂದ ಅದನ್ನು ನಿವಾರಿಸುವ ಸಲುವಾಗಿ ಸೋಮವಾರ ನಡೆಯುವ ಶಿಕ್ಷಣ ತಜ್ಞರುಗಳ ಸಭೆಯಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ಎಸ್.ಎಸ್.ಎಲ್.ಸಿ. ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಜೊತೆಗೆ ದೂರದರ್ಶನದಲ್ಲಿ ಬಿತ್ತರವಾಗುವ ಎಸ್.ಎಸ್.ಎಲ್.ಸಿ. ಪುನರ್‍ಮನನ ಕಾರ್ಯಕ್ರಮಕ್ಕೆ ರಾಜ್ಯದೆಲ್ಲೆಡೆ ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿರುವುದರಿಂದ ಮತ್ತಷ್ಟು ಶೈಕ್ಷಣಿಕ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ಬಿತ್ತರಿಸಲು ದೂರದರ್ಶನದ ಚಂದನ ವಾಹಿನಿಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಹೇಳಿದ್ದಾರೆ. ಇಂದು ಚಾಮರಾಜನಗರ ಜಿಲ್ಲೆಯ ದೇವಲಾಪುರ ಗ್ರಾಮದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಕೊರೊನಾ ವೈರಸ್‍ನ ಲಾಕ್‍ಡೌನ್ ನಿಮಿತ್ತ ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಂದೂಡಲ್ಪಟ್ಟಿತ್ತು. ಪ್ರತಿನಿತ್ಯ ಈ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಬಗ್ಗೆ ಸಾಕಷ್ಟು ಗೊಂದಲಗಳು ಉದ್ಬವವಾಗಿರುವುದರಿಂದ ಅಂತಿಮವಾಗಿ ಈ ಗೊಂದಲಗಳಿಗೆ ತೆರೆ ಎಳೆಯುವ ಸಲುವಾಗಿ ನಾಳೆ ಪದವಿಧರ ಹಾಗೂ ಶಿಕ್ಷಣ ಕ್ಷೇತ್ರದ ವಿಧಾನ ಪರಿಷತ್‍ನ ಸದಸ್ಯರ ಜೊತೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿ, ಸೋಮವಾರ ನಡೆಯುವ ಶಿಕ್ಷಣ ತಜ್ಞರ ಸಮಾಲೋಚನ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು, ಎಸ್.ಎಸ್.ಎಲ್.ಸಿ. ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆಯ ಸಲಹೆ ಪಡೆದು ಪ್ರಕಟಿಸಲಾಗುವುದು ಎಂದರು.

ಮದುವೆಗೆ 50 ಜನರಿಗೆ ಮಾತ್ರ ಅವಕಾಶ

ಬೆಂಗಳೂರು, ಮೇ 15: ಮದುವೆ ಹಾಗೂ ವಿಶೇಷ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟವಾಗಿದ್ದು, ಅಗತ್ಯ ಅನುಮತಿ ಪಡೆಯಬೇಕು. ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯಬೇಕು, ಮದುವೆಗೆ ಕನಿಷ್ಟ 50 ಜನರಿಗೆ ಮಾತ್ರ ಅವಕಾಶ ನೀಡಿ ಅನುಮತಿ ನೀಡಲಾಗಿದೆ. ಕಾರ್ಯಕ್ರಮಗಳು ನಡೆಯುವ ಸ್ಥಳದಲ್ಲಿ ಪ್ರಾಕೃತಿಕ ಗಾಳಿ ಬೆಳಕು ಇರಬೇಕು. ಹವಾನಿಯಂತ್ರಿತ (ಎ.ಸಿ.) ವ್ಯವಸ್ಥೆ ಇರಬಾರದು. ಕಂಟೈನ್ಮೆಂಟ್ ಝೋನ್‍ಗಳ ಅತಿಥಿಗಳಿಗೆ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಗರ್ಭಿಣಿ ಮಹಿಳೆಯರು, 65 ವರ್ಷದ ಮೇಲ್ಪಟ್ಟ ಹಾಗೂ 10 ವರ್ಷದ ಮಕ್ಕಳು ಮದುವೆ ಹಾಗೂ ವಿಶೇಷ ಕಾರ್ಯಕ್ರಮಕ್ಕೆ ಬರುವಂತಿಲ್ಲ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸ್ಯಾನಿಟೈಸರ್ ಇತರ ವ್ಯವಸ್ಥೆ ಮಾಡಿರಬೇಕು. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ. ಕಾರ್ಯಕ್ರಮ ಅಥವಾ ಮದುವೆಗೆ ಬರುವ ವ್ಯಕ್ತಿಗಳ ತಪಾಸಣೆ ಸಂದರ್ಭದಲ್ಲಿ 37.5 ಸೆಲ್ಸಿಯಸ್ ಅಥವಾ 99.5 ಫ್ಯಾರನ್ ಹೀಟ್ ತಾಪಮಾನ ಹೊಂದಿದ್ದರೆ ಅಂತಹವರನ್ನು ವೈದ್ಯಕೀಯ ಪರೀಕ್ಷೆಗೆ ಸೂಚಿಸಬೇಕು. ಕಾರ್ಯಕ್ರಮಕ್ಕೆ ಬರುವ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.