ಸ್ವಾವಲಂಬಿ ಭಾರತ, ಸ್ವದೇಶಿ ಉತ್ಪನ್ನ ಕಲ್ಪನೆ ಹಿಂದೆ ಅದೆಂಥ ಚಿಂತನೆ ಇದೆ ಗೊತ್ತಾ ?ಕೊರೊನಾದಿಂದ ತಳಕಚ್ಚಿರುವ ಭಾರತದ ಆರ್ಥಿಕತೆಗೆ ಟಾನಿಕ್ ನೀಡುವ ನಿಟ್ಟಿನಲ್ಲಿ ಪ್ರಧಾನಿ ಘೋಷಿಸಿರುವ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಜಗತ್ತಿನಲ್ಲಿಯೇ ಮೂರನೇ ಅತೀ ದೊಡ್ಡ ಆರ್ಥಿಕ ಪ್ಯಾಕೇಜ್ ಆಗಿದೆ. 20ರ ಮುಂದೆ ಎಷ್ಟು ಸೊನ್ನೆ ಸುತ್ತಿದರೆ ಲಕ್ಷ ಕೋಟಿ ಯಾದೀತು ಎಂದು ಜನಸಾಮಾನ್ಯರು ತಲೆಕೆರೆದುಕೊಳ್ಳುತ್ತಿದ್ದರೆ, ಪ್ಯಾಕೇಜ್ ಘೋಷಣೆಯಾದ ಮರುದಿನವೇ ಯಾರಿಗೆಲ್ಲಾ ಆರ್ಥಿಕ ಪ್ಯಾಕೇಜ್‍ನಿಂದ ಪ್ರಯೋಜನ ದೊರಕುತ್ತೆ ಎಂದು ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಲೆಕ್ಕಾಚಾರ ಮುಂದಿಟ್ಟಿದ್ದಾರೆ.

ನಿಜಕ್ಕೂ, ಜಗತ್ತೇ ಬೆಕ್ಕಸ ಬೆರಗಾಗಿದೆ. ವಿಶ್ವದ ದೊಡ್ಡಣ್ಣ, ಸಣ್ಣಣ್ಣ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ದೇಶಗಳೆಲ್ಲಾ ಭಾರತ ಕೊರೊನಾ ಹಿಡಿತ ಮತ್ತು ಅದು ತಂದಿಟ್ಟ ಆರ್ಥಿಕ ಸಂಕಷ್ಟದಿಂದ ಹಂತಹಂತವಾಗಿ ಆದರೆ ಪ್ರಬಲವಾಗಿ ಮೇಲೇಳುತ್ತಿರುವ ರೀತಿಗೆ ಬೆಕ್ಕಸ ಬೆರಗಾಗಿದ್ದಾರೆ. ಒಂದೆಡೆ ಕೊರೊನಾ ವಿರುದ್ದ ಹೋರಾಡುತ್ತಲೇ ಮತ್ತೊಂದೆಡೆ ದೇಶದ ಆರ್ಥಿಕ ಬಲವರ್ಧನೆಗೆ ಮುಂದಾಗಿರುವ ಮೋದಿ ಈ ಮೂಲಕ ತಾನೆಂಥ ಪ್ರಚಂಡ ಎಂದೂ ಸಾಬೀತು ಪಡಿಸಿದ್ದಾರೆ. ಯಾಕೆಂದರೆ, ಸ್ವಾಭಿಮಾನಿ ಭಾರತ ಎಂಬ ಹೆಸರಿನ ಜತೆಜತೆಗೇ ಸ್ವದೇಶಿ ಉತ್ಪನ್ನಗಳಿಗೆ ಮುಂದಿನ ದಿನಗಳಲ್ಲಿ ಭರ್ಜರಿ ಬೇಡಿಕೆ ಸೃಷ್ಟಿಸುವ ಮೂಲಕ ನವಭಾರತ ನಿರ್ಮಾಣಕ್ಕೆ ಸಂಕಷ್ಟ ಕಾಲದಲ್ಲಿಯೇ ಪ್ರಧಾನಿ ಬುನಾದಿ ಹಾಕಿದ್ದಾರೆ. ಅಧಿಕಾರದ 6 ವರ್ಷಗಳಲ್ಲಿ ನೂರಾರು ದೇಶ ಸುತ್ತುತ್ತಾ ಭಾರತ ಸುತ್ತಿದ್ದಕ್ಕಿಂತ ಹೆಚ್ಚಾಗಿ ವಿದೇಶಗಳಿಗೆ ಟೂರ್ ಮಾಡುವ ಪ್ರಧಾನಿ ಎಂದೇ ಪ್ರತಿಪಕ್ಷಗಳಿಂದ ಟೀಕಿಸಲ್ಪಟ್ಟಿದ್ದ ಮೋದಿ ಇದೀಗ ಜಾಗತಿಕ ಉತ್ಪನ್ನಗಳಿಗಿಂತ ಸ್ವದೇಶಿ ಉತ್ಪನ್ನಗಳಿಗೆ ಬೆಂಬಲ ನೀಡಿ ಎಂದು ಹೊಸರಾಗ ಹಾಡಿರುವುದರ ಹಿಂದೆ ರಣತಂತ್ರವೇ ಇದೆ. ಚೀನಾದ ಮೇಲೆ ಭಾರತಕ್ಕೆ ಮೊದಲಿನಿಂದಲೂ ಅಸಮಾಧಾನದ ಕಣ್ಣಿತ್ತು. ಚೀನಾ ಹಲವು ವರ್ಷ ಗಳಿಂದಲೂ ಭಾರತದ ವಿರುದ್ದವೇ ಷಡ್ಯಂತ್ರ ರೂಪಿಸುತ್ತಾ ಬಂದಿರುವ ದೇಶ. ಭಾರತದ ಶತ್ರುದೇಶವಾದ ಪಾಕಿಸ್ತಾನಕ್ಕೆ ಬೇಕುಬೇಕೆಂದಾಗಲೆಲ್ಲಾ ಭಾರತವನ್ನು ಸದೆಬಡಿಯಲು ಚೀನಾ ಸಹಕರಿಸುತ್ತಲೇ ಬಂದಿದೆ.

ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟಿನ ನಡುವೇ ಆ ಸಂಕಷ್ಟವನ್ನು ಚೀನಾ ವಿರುದ್ದ ಭಾರತ ಸಮರ್ಥವಾಗಿ ಬಳಸಲು ಮುಂದಾಗಿದೆ. ಕೊರೊನಾ ಸೃಷ್ಟಿಕರ್ತ ದೇಶ ಎನಿಸಿರುವ ಚೀನಾ ವಿರುದ್ದ ಜಗತ್ತಿನ ದೊಡ್ಡಣ್ಣ ಅಮೇರಿಕಾ ಆಕ್ರೋಶದ ಸುರಿಮಳೆ ಸುರಿಸುತ್ತಿರುವಂತೆಯೇ ಭಾರತ ಕೂಡ ಸದ್ದಿಲ್ಲದೇ ಚೀನಾ ವಿರುದ್ಧ ಕಾರ್ಯತಂತ್ರ ರೂಪಿಸಲು ಮುಂದಾಗಿದೆ. ಆ ಮೂಲಕ ಅಮೇರಿಕಾ ನೀಡಿದ ಸ್ನೇಹ ಹಸ್ತಕ್ಕೆ ಬದ್ಧ ಎಂಬ ಸಂದೇಶವನ್ನೂ ಭಾರತ ದೊಡ್ಡಣ್ಣನಿಗೆ ನೀಡಿಬಿಟ್ಟಿದೆ. ಕೊರೊನಾ ಪೀಡಿತ ಚೀನಾದಿಂದ ಸಾವಿರಗಟ್ಟಲೆ ಸಂಖ್ಯೆಯಲ್ಲಿ ದೊಡ್ಡ ಉದ್ಯಮಗಳು ಹೊರಬರುತ್ತಿದೆ. ಚೀನಾ ಸಹವಾಸ ಸಾಕಿನ್ನು ಎಂದು ಬೃಹತ್ ಕಂಪೆನಿಗಳು ಚೀನಾದಿಂದ ಜಾಗಖಾಲಿ ಮಾಡಲಾರಂಭಿಸಿದೆ. ಇದೇ ವೇಳೆ ಭಾರತ ಕೂಡ ಚೀನಾದಿಂದ ಹೊರ ಬರುತ್ತಿರುವ ಕಂಪೆನಿಗಳಿಗೆ ನಮ್ಮ ದೇಶದಲ್ಲಿ ಅವಕಾಶ ಇದೆ ಎಂಬ ಆಹ್ವಾನ ನೀಡಲಾರಂಭಿಸಿದೆ. ನಿಮ್ಮ ಕಂಪೆನಿಯ ಉತ್ಪನ್ನಗಳನ್ನು ನಮ್ಮ ದೇಶದಲ್ಲಿಯೇ ನೀವು ತಯಾರಿಸಬಹುದು. ಭಾರತದಿಂದಲೇ ನಿಮ್ಮ ತಯಾರಿಕೆಯ ಉತ್ಪನ್ನಗಳನ್ನು ಬೇರೆ-ಬೇರೆ ದೇಶಗಳಿಗೆ ರಫ್ತು ಮಾಡಬಹುದು ಎಂದು ಭಾರತ ಹೇಳಲಾರಂಭಿಸಿದೆ.

ಈ ಮೂಲಕ ಜಗತ್ತಿಗೇ ಎಲ್ಲಾ ರೀತಿಯ ಉತ್ಪನ್ನಗಳನ್ನು ನೀಡುತ್ತಿದ್ದ ಮೇಡ್ ಇನ್ ಚೈನಾ ಬ್ರಾಂಡ್ ನೇಮ್‍ಗೆ ಭಾರತ ಕೊಳ್ಳಿ ಇಡಲು ಮುಂದಾಗಿರು ವಂತಿದೆ. ಮೋದಿ ಯೋಜನೆ ಯಶಸ್ವಿಯಾಗಿಬಿಟ್ಟರೆ, ಮುಂದಿನ ವರ್ಷಗಳಲ್ಲಿ ಈವರೆಗೆ ಚೀನಾ ಹೇಗೆ ಜಗತ್ತಿಗೆ ವಿವಿಧ ಉತ್ಪನ್ನಗಳನ್ನು ಸರಬರಾಜು ಮಾಡುವ ದೇಶ ಎನಿಸಿಕೊಂಡಿತ್ತೊ ಅದೇ ರೀತಿ ಭಾರತವೂ ಜಗತ್ತಿಗೆ ಉತ್ಪನ್ನಗಳ ಸರಬರಾಜು ದೇಶ ಎನಿಸಿಕೊಳ್ಳಲಿದೆ. ರಾಷ್ಟ್ರೀಯ ಸಶಸ್ತ್ರ ಮೀಸಲು ಪಡೆಯ 10 ಲಕ್ಷ ಪೆÇಲೀಸರು ಮತ್ತು ಅವರ 50 ಲಕ್ಷ ಕುಟುಂಬ ಸದಸ್ಯರು ಜೂನ್ 1 ರಿಂದ ಸ್ವದೇಶಿ ಉತ್ಪನ್ನಗಳನ್ನೇ ಖರೀದಿಸಲಿದ್ದಾರೆ. ಮೀಸಲು ಪಡೆಗೆ ಸೇರಿದ 1800 ಕ್ಯಾಂಟೀನ್‍ಗಳು ಸ್ವದೇಶಿ ಉತ್ಪನ್ನಗಳನ್ನೇ ಮಾರಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರಗಳೂ ಸ್ವದೇಶಿ ಪದಾರ್ಥಗಳನ್ನೇ ಖರೀದಿಸಿ ಎಂದು ತನ್ನ ಉದ್ಯೋಗಿಗಳಿಗೆ ಆದೇಶ ನೀಡಲಿದೆ. ಈ ಮೂಲಕ ಭಾರತದಲ್ಲಿ ದೊಡ್ಡ ಮಟ್ಟದ ಸ್ವದೇಶಿ ಆಂದೋಲನಕ್ಕೆ ನಾಂದಿ ಹಾಡಿದಂತಾಗಿದೆ. ಸ್ವದೇಶಿ ಆಂದೋಲನದ ರೂವಾರಿ ರಾಜೀವ್ ದೀಕ್ಷಿತ್ ಕನಸು ಲಾಕ್‍ಡೌನ್ ಸಂದರ್ಭ ನನಸಾಗುತ್ತಿದೆ. ದೇಶದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸಣ್ಣ ಕೈಗಾರಿಕೆಗಳ ಪ್ರಾರಂಭವಾಗಲಿದೆ. ಸರ್ಕಾರ ಪ್ಯಾಕೇಜ್‍ನಡಿ ನೀಡಲಿರುವ ಹಣಕಾಸಿನ ನೆರವು ಲಕ್ಷಾಂತರ ನಿರುದ್ಯೋಗಿಗಳು ಹೊಸ ಹೊಸ ಉದ್ಯಮಗಳಿಗೆ ತೊಡಗಲು ಕಾರಣವಾಗಲಿದೆ. ಸಾಲಶೂಲದಿಂದ ಬಸವಳಿದಿದ್ದ ಕೈಗಾರಿಕೆಗಳೂ 20 ಲಕ್ಷ ಕೋಟಿ ಪ್ಯಾಕೇಜ್‍ನಿಂದ ಸಂಜೀವಿನಿ ಸೇವಿಸಿದಂತೆ ಮತ್ತೆ ಮೇಲೇಳಲಿದೆ. ರಿಯಲ್ ಎಸ್ಟೇಟ್ ಕೂಡ ಪುಟಿದೇಳಲಿದೆ. ಯಾರದ್ದೇ ಜಾಮೀನು ಇಲ್ಲದೇ ಸರ್ಕಾರವೇ ಗ್ಯಾರಂಟಿದಾರನಾಗಿ ಸಾಲ ನೀಡುವ ಚಿಂತನೆ ಜಗತ್ತಿನಲ್ಲಿಯೇ ಭಾರತದಲ್ಲಿ ಮಾತ್ರ ಇರುವಂತಿದೆ! ಕೊಟ್ಟ ಸಾಲವನ್ನು ಮುಂದಿನ ವರ್ಷ ಯಾವ ರೀತಿ ಬ್ಯಾಂಕಿಂಗ್ ಕ್ಷೇತ್ರ ವಸೂಲಿ ಮಾಡಲಿದೆ ಎಂಬ ಚಿಂತೆಯ ಪ್ರಶ್ನೆ ಮುಂದಿದ್ದರೂ ಅದಕ್ಕೂ ಹೊಸ ತಂತ್ರ ಕೇಂದ್ರ ಸರ್ಕಾರದ ಬಳಿ ಈಗಲೇ ಇರಬಹುದೇನೋ. ! ಪಿಪಿಟಿ ಕಿಟ್ ಮತ್ತು ವೈದ್ಯಕೀಯ ಉಪಕರಣಗಳ ವಿಚಾರದಲ್ಲಿ ಭಾರತ ತನ್ನಲ್ಲಿರುವ ಎಲ್ಲಾ ರೀತಿಯ ಮಾನವ ಸಂಪನ್ಮೂಲ ಕ್ರೋಢಿಕರಿಸಿ ಚೀನಾ ಸೇರಿದಂತೆ ಬೇರೆ ದೇಶಗಳ ಅವಲಂಬನೆ ತಪ್ಪಿಸಲು ಸ್ವದೇಶಿ ಉತ್ಪಾದನೆಯ ಕಾರ್ಯತಂತ್ರ ರೂಪಿಸಿದೆ. ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದಾಗಿನಿಂದ ಕಂಡಿದ್ದ ಕನಸಾದ ಮೇಕ್ ಇನ್ ಇಂಡಿಯಾ ಎಂಬ ನವಭಾರತದ ಚಿಂತನೆಗೆ ಸ್ವದೇಶಿ ಮಂತ್ರ ಮತ್ತು ಸ್ವಾವಲಂಬಿ ಭಾರತ ಎಂಬೆರಡು ಹೊಸ ಆಯಾಮ ಈಗ ದೊರಕಿದೆ. ಜಾಗತಿಕ ಬೇಡಿಕೆಯ ಹೆಸರಿನಲ್ಲಿ ಸಂಪದ್ಬರಿತ ದೇಶಗಳು ಈವರೆಗೂ ನಡೆಸುತ್ತಿದ್ದ ಹುನ್ನಾರಗಳಿಗೆ ಸದ್ಯದಲ್ಲಿಯೇ ದೊಡ್ಡ ಏಟು ಬೀಳಲಿದೆ. ಅಗತ್ಯ ವಸ್ತುಗಳ ಉತ್ಪಾದನೆಯಲ್ಲಿ ತನ್ನನ್ನು ಬಿಟ್ಟರೆ ಬೇರೆ ದೇಶವಿಲ್ಲ ಎಂದುಕೊಂಡಿದ್ದ ಚೀನಾದಂಥ ದೇಶದ ಅಹಂಕಾರಕ್ಕೆ ಕಡಿವಾಣ ಬಿದ್ದಾಗಿದೆ. ದೇಶದ ಜನತೆಯನ್ನು ಹಣ ಉತ್ಪಾದಿಸುವ ಯಂತ್ರಗಳಾಗಿ ಪರಿಗಣಿಸದೇ ದೇಶವಾಸಿಗಳನ್ನು ಸ್ವಾವಲಂಬಿಗಳನ್ನಾಗಿಸಿ ಸ್ವದೇಶಿ ಪ್ರೀತಿ ಉಕ್ಕಿಸುವ ಹೊಸ ಭಾರತದತ್ತ ಮುಂದಿನ ಹೆಜ್ಜೆ.

ಕೊನೇ ಹನಿ.

ಕೊರೊನಾ ಲಾಕ್‍ಡೌನ್‍ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ತನ್ನ ದೇಶವನ್ನು ಮತ್ತೆ ಆರ್ಥಿಕವಾಗಿ ಹಾಗೂ ಆರೋಗ್ಯಕರವಾಗಿ ಮೇಲೆತ್ತಲು ದೇಶದ ಪ್ರಧಾನಿಯಾಗಿ ಮೋದಿ ಮೇಲೆ ಅದೆಷ್ಟು ಒತ್ತಡ ಇರಬಹುದು ? 20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್ ತಯಾರಿಸುವಲ್ಲಿ ಅದೆಷ್ಟು ಚಿಂತನೆಗಳು, ಕಾರ್ಯತಂತ್ರಗಳು ಕೆಲಸ ಮಾಡಿರಬಹುದು.

ದೇಶದ ವಾರ್ಷಿಕ ಬಜೆಟ್ ತಯಾರಿಸಲು ಏನಿಲ್ಲವೆಂದರೂ ಮೂರು ತಿಂಗಳ ಪರಿಶ್ರಮವಿರುತ್ತದೆ. ಹೀಗಿರುವಾಗ ಕೇವಲ 3-4 ದಿನಗಳಲ್ಲಿ ಇಡೀ ದೇಶದ ಭವಿಷ್ಯದ ದಿನಗಳನ್ನು ದೃಷ್ಟಿಯಲ್ಲಿರಿಸಿಕೊಂಡು 20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್ ತಯಾರಿಸುವುದು ಎಂದರೆ ? ಈ ಕಾರ್ಯಯೋಜನೆ ಖಂಡಿತಾ ಊಹೆಗೂ ನಿಲುಕದ್ದು. ಮುಂದಿನ ದಿನಗಳಲ್ಲಿ ಸ್ವದೇಶಿ ಚಿಂತನೆಯಿಂದಾಗಿ ಅಂಗಡಿಗಳಲ್ಲಿ ಖರೀದಿ ರೀತಿಯೇ ಬದಲಾಗಲಿದೆ. ಇದು ಭಾರತದ್ದಾ ಎಂಬ ಪ್ರಶ್ನೆಯ ನಂತರವೇ ಖರೀದಿ ಪ್ರಾರಂಭವಾಗಲಿದೆ. ಸ್ವದೇಶಿ ಚಿಂತನೆಯಿಂದಾಗಿ ಭಾರತ ಮತ್ತಷ್ಟು ಪ್ರಜ್ವಲಿಸಲಿದೆ.