ಮಡಿಕೇರಿ, ಮೇ 14: ಕೊರೊನಾ ಎಂಬ ಸಮಸ್ಯೆ ತಂದೊಡ್ಡಿರುವ ಆವಾಂತರಗಳು ಹಲವಾರು ಬಗೆಯಲ್ಲಿವೆ. ಇದರಿಂದ ಉಂಟಾಗಿರುವ ಪರಿಸ್ಥಿತಿ ಹಲವರ ವೈವಾಹಿಕ ಜೀವನದ ಕನಸಿಗೂ ಅಡ್ಡಿಪಡಿಸಿದ್ದು, ಜಿಲ್ಲೆಯಲ್ಲಿ ಹಲವಾರು ವಿವಾಹಗಳು ಉದ್ದೇಶಿತ ಕಾರ್ಯದಂತೆ ನಡೆಯದೆ ಸರಳ ರೀತಿಯಲ್ಲಿ ಕೆಲವೇ ಜನರ ಸಮ್ಮುಖದಲ್ಲಿ ಜರುಗುತ್ತಿವೆ. ಅದರಲ್ಲೂ ಪ್ರಸ್ತುತದ ಸನ್ನಿವೇಶದಲ್ಲಿ ಮನೆ ಮದುವೆಗಳೂ ಆರಂಭಗೊಂಡಿವೆ.
ಇದರ ನಡುವೆ ಇಲ್ಲೊಂದು ಜೋಡಿಯ ವಿವಾಹಕ್ಕೆ ಈ ರೀತಿಯಲ್ಲಿಯೂ ಅವಕಾಶವಿಲ್ಲದಂತಾಗಿದೆ. ಬಿಟ್ಟಂಗಾಲದ ಮೇಚಿಯಂಡ ಜೋಯಪ್ಪ ಅವರ ಪುತ್ರ ಮಿಲನ್ (ಪ್ರೀತು) ಹಾಗೂ ಕಕ್ಕಬೆಯ ಕರವಟ್ಟಿರ ಪಳಂಗಪ್ಪ (ರಮೇಶ್) ಅವರ ಪುತ್ರಿ ಶ್ವೇತಾಳ ಮದುವೆ ತಾ. 16 ಮತ್ತು 17 ರಂದು ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆಯಬೇಕಿತ್ತು. ಆದರೆ ಮಿಲನ್ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸ್ಟಾರ್ ಹೊಟೇಲ್ವೊಂದರಲ್ಲಿ ಹೆಚ್.ಆರ್. ಮ್ಯಾನೇಜರ್ ಆಗಿದ್ದಾರೆ. ಲಾಕ್ಡೌನ್ ಕಾರಣದಿಂದಾಗಿ ಅವರು ಭಾರತಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ 2019ರ ಜೂನ್ 16ಕ್ಕೆ ನಿಶ್ಚಿತಾರ್ಥಕ್ಕೆ ಆಗಮಿಸಿ ಹಿಂತಿರುಗಿದ್ದ ಅವರು ಮೇ 4 ರಂದು ಮತ್ತೆ ಜಿಲ್ಲೆಗೆ ಆಗಮಿಸುವ ಕಾರ್ಯಕ್ರಮ ಸಿದ್ಧಪಡಿಸಿಕೊಂಡಿದ್ದರು. ಇದೀಗ ಲಾಕ್ಡೌನ್ನಿಂದ ಮಿಲನ್ ಅನಿವಾರ್ಯವಾಗಿ ಅಲ್ಲೇ ಉಳಿಯಬೇಕಾಗಿದ್ದು, ಮುಂದಿನ ಅಕ್ಟೋಬರ್ ತನಕವೂ ಕೊಡಗಿಗೆ ಬರಲು ಅವಕಾಶವಿಲ್ಲವೆನ್ನಲಾಗಿದೆ. ಇಲ್ಲಿ ಎರಡು ಕಡೆಯ ಕುಟುಂಬಸ್ಥರು ಲಾಕ್ಡೌನ್ ಮುಗಿಯುವ ನಿರೀಕ್ಷೆಯೊಂದಿಗೆ ವಿವಾಹಕ್ಕೆ ಅಗತ್ಯ ಸಿದ್ಧತೆ ನಡೆಸಿದ್ದರಾದರೂ ಇದೀಗ ಕೈಚೆಲ್ಲಿ ಕೂರುವಂತಾಗಿದ್ದು, ವಿವಾಹ ಮುಂದೂಡಲ್ಪಟ್ಟಿದೆ.