ಮಡಿಕೇರಿ, ಮೇ 13: ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯವ್ಯಾಪ್ತಿಯನ್ನು ಸೀಮಿತಗೊಳಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಬದಲಾವಣೆಗೆ ನಿರ್ಧರಿಸಿರುವ ಬಗ್ಗೆ ಮಡಿಕೇರಿ - ಕುಶಾಲನಗರ ಹಾಗೂ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರುಗಳು ಈ ಕೆಳಗಿನಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

‘ನಿಯಮ ಸಡಿಲಿಸಬೇಕು’

ಎಪಿಎಂಸಿ ಕಾರ್ಯವ್ಯಾಪ್ತಿಯನ್ನು ಸೀಮಿತಗೊಳಿಸುವ ಸರ್ಕಾರದ ತೀರ್ಮಾನ ಸ್ವಾಗತಾರ್ಹವಾದರೂ ಭತ್ತ ಮಾರಾಟಕ್ಕೆ ಸೇರಿದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಯ ರೈತರುಗಳಿಗೆ ಪ್ರಸ್ತುತ ಇರುವಂತಹ ಕಾನೂನುಗಳನ್ನು ಸಡಿಲಗೊಳಿಸಿ ರೈತರಲ್ಲಿರುವಂತಹ ಗೊಂದಲಗಳನ್ನು ನಿವಾರಿಸುವಲ್ಲಿ ಸರ್ಕಾರ ಮುಂದಾದರೆ, ಗಮನಹರಿಸಿದರೆ ಒಳಿತು ಎಂದು ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಂಬಿಕಾರ್ಯಪ್ಪ ಅಭಿಪ್ರಾಯಿಸಿದ್ದಾರೆ.

ವ್ಯವಸ್ಥೆ ಮುಂದುವರೆಯಲಿ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯ ರೈತರುಗಳ ಬೆಳೆಗಳನ್ನು ಎಪಿಎಂಸಿ ಮೂಲಕವೇ ಮಾರಾಟ ಮಾಡುವ ವ್ಯವಸ್ಥೆ ಮುಂದುವರೆಯಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದ್ದು, ಈ ವ್ಯವಸ್ಥೆ ಹಿಂದಿನಂತೆಯೇ ಮುಂದುವರೆಯಬೇಕು. ಇದರಲ್ಲಿ ಯಾವದೇ ಬದಲಾವಣೆ ಮಾಡಬಾರದು ಎಂದು ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ರಮೇಶ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

‘ಒಳ್ಳೆಯ ಬೆಳವಣಿಗೆ’

ಕೇಂದ್ರ ಸರ್ಕಾರ ರೈತರ ಹಾಗೂ ವರ್ತಕರ ಹಿತ ಕಾಪಾಡುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನ ನಡೆಸಿದೆ. ಕೇಂದ್ರದ ಆದೇಶದಲ್ಲಿರುವ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ರಾಜ್ಯ ಸರ್ಕಾರ ಸರಿಪಡಿಸುವ ಆಶಾ ಭಾವನೆಯಿದೆ. ಆರ್‍ಎಂಸಿ ವತಿಯಿಂದ ಸಂಗ್ರಹಿಸಲಾಗುತ್ತಿದ್ದ ಸೆಸ್ ಇನ್ನು ಮುಂದೆ ಸರ್ಕಾರಕ್ಕೆ ಹೋಗಲಿದೆ. ಇದರಿಂದ ರೈತರಿಗೆ ಬೇಕಾದ ಗೋದಾಮು,ಕೃಷಿ ಕಣ ಇತ್ಯಾದಿ ನಡೆಸಲು ಸರ್ಕಾರ ನೇರವಾಗಿ ಅನುದಾನ ಮೀಸಲಿಡಬೇಕಾಗಿದೆ. ಕಳೆದ ಮೂರು ದಶಕಗಳಿಂದ ಈ ವಿಚಾರದಲ್ಲಿ ರೈತರು ಹಾಗೂ ವಿವಿಧ ಸಂಘ ಸಂಸ್ಥೆಗಳು ಬೆಳೆಗಾರರು ಹೋರಾಟ ನಡೆಸಿದ್ದರು. ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಿ ಇದೀಗ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಅನುಷ್ಠಾನಕ್ಕೆ ತಂದಿರುವುದು ಒಳ್ಳೆಯ ಬೆಳವಣಿಗೆ ಎಂದು ಗೋಣಿಕೊಪ್ಪ ಎಪಿಎಂಸಿ ಅಧ್ಯಕ್ಷ ಮಾಚಂಗಡ ಸುಜಾ ಪೂಣಚ್ಚ ಹೇಳಿದ್ದಾರೆ.