ಮಡಿಕೇರಿ, ಮೇ 13: ಕೊಡಗು ಜಿಲ್ಲೆಯಲ್ಲಿ ಕೊರೊನಾ ಪರಿಸ್ಥಿತಿಯೊಂದಿಗೆ ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲವೂ ಆರಂಭಗೊಳ್ಳಲಿದೆ. ಆದರೆ ವಾಡಿಕೆಯಂತೆ ಮಳೆಗಾಲ ಆರಂಭಕ್ಕೂ ಮುನ್ನವೇ ಜಿಲ್ಲೆಯ ಹಲವೆಡೆಗಳಲ್ಲಿ ಗುಡುಗು-ಗಾಳಿ ಸಹಿತವಾಗಿ ಮಳೆ ಬೀಳುತ್ತಿರುವುದು ಮುಂದುವರಿದಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಪರಾಹ್ನ ಒಂದು ಗಂಟೆಯ ಸುಮಾರಿಗೆ ತುಂತುರು ಮಳೆ ಕಂಡುಬಂದು ಸಂಜೆ 4ರ ವೇಳೆಗೆ ಗುಡುಗು ಸಹಿತವಾಗಿ ಕೆಲಹೊತ್ತು ಬಿರುಸಿನ ಮಳೆ ಸುರಿಯಿತು. ಸುಂಟಿಕೊಪ್ಪ ಸುತ್ತಮುತ್ತಲಿನ ಗ್ರಾಮಗಳಲ್ಲೂ ಅಪರಾಹ್ನ 3ರ ಸುಮಾರಿಗೆ ದಟ್ಟ ಮೋಡ ಆವರಿಸುವುದರೊಂದಿಗೆ ಗಾಳಿ, ಗುಡುಗು ಸಹಿತವಾಗಿ ಮಳೆ ಸುರಿಯಿತು. ಈ ವಿಭಾಗದಲ್ಲಿ ಕೆಲವು ದಿನ ಮಳೆ ಬಿಡುವು ನೀಡಿದ್ದು, ಇಂದು ಮತ್ತೆ ಮಳೆಯಾಗಿದೆ. ಜಿಲ್ಲೆಯ ಇನ್ನಿತರ ಹಲವೆಡೆಗಳಲ್ಲೂ ಇಂದು ಮಳೆಯಾಗಿರುವ ಕುರಿತು ವರದಿಯಾಗಿದೆ.

ಸೋಮವಾರಪೇಟೆ : ಕಳೆದ ಒಂದು ವಾರದಿಂದ ಬಿರು ಬಿಸಿಲಿನ ವಾತಾವರಣವಿದ್ದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಇಂದು ಸಂಜೆ 4 ಗಂಟೆ ಸುಮಾರಿಗೆ ಗಾಳಿಯೊಂದಿಗೆ ಭಾರೀ ಮಳೆ ಸುರಿಯುತು.

ಸಂಜೆ 4 ಗಂಟೆಯಿಂದ ಆಗಸದಲ್ಲಿ ದಟ್ಟ ಮೋಡಗಳು ಕಂಡುಬಂದವು. ಗುಡುಗು ಸಹಿತ ಗಾಳಿಯೊಂದಿಗೆ ಉತ್ತಮ ಮಳೆಯಾದ ಹಿನ್ನೆಲೆ ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣ ಕಲ್ಪಿಸಿತು. ಇದರೊಂದಿಗೆ ಬಿಸಿಯೇರಿದ್ದ ವಾತಾವರಣ ತಂಪಾಯಿತು.