ಮಡಿಕೇರಿ, ಮೇ 13: ಭಾರತ್ ಲಾಕ್‍ಡೌನ್ ನಡುವೆ ಕರ್ನಾಟಕ-ಕೇರಳ ಗಡಿಭಾಗದ ಮಾಕುಟ್ಟ ಚೆಕ್‍ಪೋಸ್ಟ್‍ನಲ್ಲಿ ವಾಹನ ಸಂಚಾರ ನಿರ್ಬಂಧಿಸಿರುವ ಸಂದರ್ಭ, ಈ ಹೆದ್ದಾರಿ ನಡುವೆ ಸಂಶಯಾಸ್ಪದ ಕಾರೊಂದು ಪತ್ತೆಯಾಗಿದೆ. ಕಳೆದ ಸುಮಾರು ಒಂದೂವರೆ ತಿಂಗಳಿಗೂ ಅಧಿಕ ಸಮಯದಿಂದ ಕೇರಳ ನೋಂದಣಿಯ ಸ್ವಿಫ್ಟ್ ಕಾರು (ಕೆಎಲ್ 11 ಎಇ 382) ಹೆದ್ದಾರಿ ಬದಿ ನಿಂತಿದೆ.

ಬಿಳಿ ಬಣ್ಣದ ಈ ಕಾರಿನೊಳಗೆ ಚಾಲಕನ ಆಸನದ ಪಕ್ಕದ ಸೀಟ್‍ನಲ್ಲಿ ಕರವಸ್ತ್ರವೊಂದು ಕಂಡುಬಂದರೆ, ಹಿಂಬದಿಯ ಸೀಟ್‍ನಲ್ಲಿ ಯಾರದೋ ಸೊಂಟದ ಬೆಲ್ಟ್ ಸಹಿತ ಉಡುಪನ್ನು ಕಳಚಿ ಇಟ್ಟಿರುವ ದೃಶ್ಯ ಗೋಚರಿಸಿದೆ. ಸರಕಾರದಿಂದ ಗಡಿಯಲ್ಲಿ ನಿರ್ಬಂಧಿತ ಪ್ರದೇಶದ ಮೀಸಲು ಅರಣ್ಯ ಮಾರ್ಗದಲ್ಲಿ ಈ ವಾಹನ ನಿಲುಗಡೆಯಾಗಿರುವ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕಾರು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸಂಬಂಧಿಸಿದ ರಸ್ತೆಬದಿ ಗೋಚರಿಸಿದೆ.