ಮಡಿಕೇರಿ, ಮೇ 13: ಕೊಡಗಿನಲ್ಲಿ ಮಳೆಗಾಲ ಆರಂಭದ ಸಮಯ ಸನ್ನಿಹಿತವಾಗುತ್ತಿರುವಂತೆ ಮಡಿಕೇರಿ ನಗರದಲ್ಲಿ ಬೆಟ್ಟ-ಗುಡ್ಡ ಪ್ರದೇಶದಲ್ಲಿ ಮನೆ ಹೊಂದಿರುವ ಕೆಲವು ಪ್ರದೇಶಗಳ ನಿವಾಸಿಗಳಿಗೆ ಈ ಜಾಗ ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ನೋಟೀಸ್ ನೀಡಲು ನಗರಸಭೆ ಸಿದ್ಧತೆ ನಡೆಸಿದೆ.

ಕಳೆದ ಎರಡು ಸತತ ವರ್ಷಗಳಲ್ಲಿ ಭಾರೀ-ಮಳೆ, ಭೂಕುಸಿತಗಳು ಸಂಭವಿಸಿವೆ. ಇದರಿಂದ ಹಲವು ಅಪಾಯಗಳು ಉಂಟಾಗಿತ್ತು. ಇದಲ್ಲದೆ ವರ್ಷಂಪ್ರತಿ ಕೂಡ ಮಳೆಗಾಲದ ಸಂದರ್ಭ ನಗರದ ಇಂದಿರಾನಗರ, ಚಾಮುಂಡೇಶ್ವರಿ ನಗರ ನಿವಾಸಿಗಳಿಗೆ ಸೂಚನೆ ನೀಡಲಾಗುತ್ತಿದೆ. ಇದರಂತೆ ಈ ವರ್ಷವೂ ಇಲ್ಲಿನ ನಿವಾಸಿಗಳಿಗೆ ಸದ್ಯದಲ್ಲಿ ಸುರಕ್ಷಿತ ಪ್ರದೇಶಗಳಿಗೆ ತೆರಳಲು ನೋಟೀಸ್ ನೀಡಲಾಗುವುದು. ಇಂದಿರಾನಗರ ಹಾಗೂ ಚಾಮುಂಡೇಶ್ವರಿ ನಗರದ ವ್ಯಾಪ್ತಿಯಲ್ಲಿ ಇಂತಹ ಸುಮಾರು 600 ಮನೆಗಳಿದ್ದು, ಶೇ. 80 ರಷ್ಟು ಮನೆಗಳು ಅಪಾಯಕಾರಿಯಾಗಿರುವು ದನ್ನು ನಗರಸಭೆ ಗುರುತಿಸಿದೆ ಎಂದು ಪೌರಾಯುಕ್ತ ರಮೇಶ್ ತಿಳಿಸಿದ್ದಾರೆ.