ಕುಶಾಲನಗರ, ಮೇ 12: ಧರ್ಮದ ಹೆಸರು ಹೇಳಿ ಅನುಕಂಪ ಗಿಟ್ಟಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.
ಮೂಲತಃ ಪುತ್ತೂರಿನ ಗಿರೀಶ್ ಎಂಬಾತ ಕೊಡಗು ಜಿಲ್ಲೆಯ ಹಲವು ಕಡೆಗಳ ಮಂದಿರ, ಮಸೀದಿ, ಚರ್ಚ್ಗಳಿಗೆ ತೆರಳಿ ಆಯಾ ಧರ್ಮದ ಸಿದ್ಧಾಂತಗಳಿಂದ ಪ್ರಭಾವಿತನಾಗಿ ಮತಾಂತರಗೊಂಡಿರುವುದಾಗಿ ನಂಬಿಕೆ ಗಳಿಸುತ್ತಿದ್ದ. ನಂತರ ತಾನು ಆರ್ಥಿಕ ಸಂಕಷ್ಟದಲ್ಲಿರುವುದಾಗಿ ನಟಿಸಿ ಹಣ ವಸೂಲಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈತನ ವರ್ತನೆಯ ಬಗ್ಗೆ ಸಂಶಯಗೊಂಡ ಕೆಲವರು ಈತನ ಫೋಟೊ ಸಹಿತ ವಾಟ್ಸಾಪ್ ಗ್ರೂಪ್ಗಳಲ್ಲಿ ಎಚ್ಚರಿಕೆ ಸಂದೇಶ ಹರಿಬಿಟ್ಟಿದ್ದಾರೆ.
ಆದರೂ ಕುಶಾಲನಗರದಲ್ಲಿ ತನ್ನ ವರಸೆ ಮುಂದುವರೆಸಿದ ಈತನನ್ನು ಸ್ಥಳೀಯರು ಪತ್ತೆಹಚ್ಚಿ ಕುಶಾಲನಗರ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ವಿಚಾರಣೆ ಸಂದರ್ಭ ಈತ ಇದಕ್ಕೂ ಮುನ್ನ ಬೇರೆಡೆ ವಂಚನೆ ಪ್ರಕರಣದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.