ವಿಶ್ವದ ಮಹಾನ್ ಕ್ರೀಡಾಹಬ್ಬ ಒಲಿಂಪಿಕ್ಸ್. ಇದು ಜಗದೇಕವೀರರ ಕ್ರೀಡಾಕಲಿಗಳ ಪ್ರತಿಭೆಯ ಹಬ್ಬ. ಸ್ಪರ್ಧಾ ದೇಶಗಳಿಗೆಲ್ಲಾ ಪ್ರತಿಷ್ಠೆಯ ಹಬ್ಬ. ಒಲಿಂಪಿಕ್ಸ್‍ನಲ್ಲಿ ಪದಕಗಳನ್ನು ಗಳಿಸುವುದು ಪ್ರತಿಯೊಂದು ದೇಶಕ್ಕೂ ಸವಾಲಿನ ಹಾಗೂ ಅಷ್ಟೇ ಹೆಮ್ಮೆಯ ವಿಷಯ. ಕ್ರೀಡಾಪಟುಗಳಿಗೆಲ್ಲಾ ಅಂತಿಮ ಗುರಿಯೇ ಒಲಿಂಪಿಕ್ಸ್‍ನಲ್ಲಿ ಪದಕಗಳಿಸುವುದು. ಅದೂ ಹೋಗಲಿ, ಒಲಿಂಪಿಕ್ಸ್‍ನಲ್ಲಿ ಪಾಲ್ಗೊಳ್ಳುವುದು ಸಹ ಕ್ರೀಡಾಪಟುವಿನ ಕನಸೇ ಆಗಿರುತ್ತದೆ. ಅದಕ್ಕಾಗಿ ಸ್ಪರ್ಧಾ ದೇಶಗಳು ಕಠಿಣ ಅಭ್ಯಾಸವನ್ನು ನಡೆಸುತ್ತವೆ. ಸಾಧನೆಗೆ ತಮ್ಮ ಕ್ರೀಡಾಪಟುಗಳನ್ನು ಪ್ರೇರೇಪಿಸುತ್ತದೆ. ತರಬೇತಿಗಾಗಿ ಅಪಾರ ಹಣವನ್ನು ವ್ಯಯ ಮಾಡುತ್ತವೆ. ಒಂದು ರೀತಿಯಲ್ಲಿ ಒಲಿಂಪಿಕ್ಸ್‍ನಲ್ಲಿ ಹೆಚ್ಚಿನ ಪದಕಗಳನ್ನು ಪಡೆದರೆ ವಿಶ್ವವನ್ನೇ ಗೆದ್ದಂತೆ ಎಂಬಂತಹ ಜಿದ್ದಾಜಿದ್ದಿ ಅಲ್ಲಿರುವುದು. 4 ವರ್ಷಗಳಿಗೊಮ್ಮೆ ಬರುವ ಒಲಿಂಪಿಕ್ಸ್ ಜಾಗತಿಕ ಕ್ರೀಡಾಜಾತ್ರೆಗೆ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುತ್ತದೆ. ಯುದ್ಧೋಪಾದಿಯಲ್ಲಿ ತಯಾರಿಗಳು ನಡೆದಿರುತ್ತದೆ. ಇಂತಹ ಮಹಾ ಕ್ರೀಡಾಯುದ್ಧಕ್ಕೆ ಇದೀಗ ಕೊರೊನಾ ಸೋಂಕು ಮಹಾಅಡ್ಡಿಯಾಗಿ ಪರಿಣಮಿಸಿ ಕ್ರೀಡಾಹಬ್ಬಕ್ಕೆ ಮರ್ಮಾಘಾತವನ್ನೇ ನೀಡಿದೆ.
2020ರ ಜುಲೈ 23ರಿಂದ ಆಗಸ್ಟ್ 8ರವರೆಗೆ ನಡೆಯಬೇಕಿದ್ದ ಟೋಕಿಯೋ ಕ್ರೀಡಾ ಹಬ್ಬ ಇದೀಗ ಮುಂದೂಡಲ್ಪಟ್ಟಿದೆ. ಇದು ಕ್ರೀಡಾಪ್ರಿಯರನ್ನು ನಿರಾಸೆಗೆ ತಳ್ಳಿದರೆ, ಚಾತಕಪಕ್ಷಿಯಂತೆ ಕಾದುಕುಳಿತು, ಕಠಿಣ ಅಭ್ಯಾಸ, ಶ್ರಮದಿಂದ ತಯಾರಿ ನಡೆಸಿದ್ದ ವಿವಿಧ ಸ್ಪರ್ಧಾ ದೇಶಗಳ ಕ್ರೀಡಾಪಟುಗಳಿಗೆ ಆಘಾತವಾಗಿದೆ. ಜಪಾನ್ ದೇಶ ಅದ್ಭುತವಾಗಿ ತಯಾರಿ ನಡೆಸಿದ್ದು, ಅವರಿಗೂ ಕೊರೊನಾ ಕಾಟ ಕಂಟಕ ತಂದಿದ್ದು, ಬೇಸರವನ್ನು ಮೂಡಿಸಿದೆ. ಆದರೆ, ಜಪಾನಿಗರು ಗಟ್ಟಿಗರು. ಸುನಾಮಿ, ಭೂಕಂಪನಗಳಂತಹ ಮಹಾವಿಪತ್ತುಗಳಿಗೆ ಎದೆಗುಂದದ ಇವರು ಮುಂದೂಡಲ್ಪಟ್ಟ ಒಲಿಂಪಿಕ್ಸ್‍ಅನ್ನು ಮತ್ತಷ್ಟು ಯಶಸ್ವಿಯಾಗಿ ಸಂಘಟಿಸಲು, ಈ ಕೊರೊನಾ ಸೋಂಕು ನಡುವೆಯೂ ಕಟಿಬದ್ಧರಾಗಿದ್ದಾರೆ. ಒಲಿಂಪಿಕ್ಸ್ ಮುಂದೂಡಲು ಮಾರಕ ಸೋಂಕಿನಿಂದಾಗಿ ನಿರಂತರ ಒತ್ತಡವು ಅಮೇರಿಕಾ ಒಳಗೊಂಡು ಎಲ್ಲಾ ದೇಶಗಳಿಂದಲೂ ಐಓಸಿ ಅಂದರೆ ಅಂತರರಾಷ್ಟ್ರೀಯ ಒಲಂಪಿಕ್ಸ್ ಸಮಿತಿ ಹಾಗೂ ಸಂಘಟಕರ ಮೇಲೆ ಬರಲಾರಂಭಿ ಸಿತು. ವಿಶ್ವವೆಲ್ಲಾ ಸೋಂಕಿನಿಂದ ಕಂಗೆಟ್ಟು ತೊಳಲಾಟ, ನರಳಾಟ, ಸಾವುಗಳ ಮಧ್ಯೆ ತೊಂದರೆಗೀಡಾದಾಗ ಒಲಿಂಪಿಕ್ಸ್ ನಡೆಸುವುದು ಅಸಾಧ್ಯದ ಮಾತೇ. ಅಮೇರಿಕಾದ ಪ್ರಭಾವಿ ಅಥ್ಲೆಟಿಕ್ ಸಮಿತಿ, ಅಮೇರಿಕಾದ ಒಲಿಂಪಿಕ್ಸ್ ಮತ್ತು ಪ್ಯಾರಾ ಒಲಿಂಪಿಕ್ಸ್ ಸಮಿತಿ ಕೂಡ ಐಓಸಿಗೆ ಸ್ಪರ್ಧೆ ನಿಲ್ಲಿಸುವ ಮನವಿ ಸಲ್ಲಿಸಿದಾಗ ಐಓಸಿ ಹಾಗೂ ಸಂಘಟಕರು ತೀವ್ರ ಆಲೋಚನೆಗೆ ಬಿದ್ದರು. ಹಲವು ದೇಶಗಳು ನಾವು ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಸ್ಪರ್ಧಿಸಲಾರೆವು ಎಂದು ನೇರವಾಗೇ ಹೇಳಿದಾಗ ಐಒಸಿಗೆ ಚಿಂತೆ ಉಲ್ಭಣಿಸಿತು. ಇದಕ್ಕೊಂದು ಪರಿಹಾರ ಕಂಡುಹಿಡಿಯಲು ಪಣತೊಟ್ಟಿತು. ಜೊತೆಗೆ ಎಲ್ಲಾ ದೇಶಗಳಿಂದಲೂ ಮಾಹಿತಿಯನ್ನು ಸಂಗ್ರಹಿಸಿ ಒಂದು ನಿರ್ಧಾರಕ್ಕೆ ಬಂದುಬಿಟ್ಟಿತು. ಇದೇ ಪ್ರಥಮ ಬಾರಿಗೆ ನಿರ್ಧಾರವೊಂದು ಹೊರಹೊಮ್ಮಿತು. ಒಲಿಂಪಿಕ್ಸ್ ಮುಂದೂಡಲ್ಪಟ್ಟಿತು. ಟೋಕಿಯೊ ಒಲಂಪಿಕ್ಸ್ 2021ರ ಜುಲೈ 23 ರಿಂದ ಆಗಸ್ಟ್ 8ರವರೆಗೆ ಮುಂದೂಡಲ್ಪಟ್ಟು ನೂತನ ವೇಳಾಪಟ್ಟಿಯು ರಚಿಸಲ್ಪಟ್ಟಿತು. ಇದು ಬಹಳ ಒಳ್ಳೆಯ ನಿರ್ಧಾರವೇ ಆಯಿತು. ಈಗಂತೂ ಕೊರೊನಾ ವೈರಸ್ ಹಾವಳಿಗೆ ಅಮೇರಿಕಾದಂತಹ ರಾಷ್ಟ್ರವೇ ತಲ್ಲಣಗೊಂಡು ಸಾವಿನ ಸರಮಾಲೆಯನ್ನೇ ಧರಿಸಿದೆ. ಮಾತ್ರವಲ್ಲ ಇಟಲಿ, ಸ್ಪೇನ್, ಇರಾನ್, ಇಂಗ್ಲೆಂಡ್ ನಂತಹ ಯುರೋಪ್ ರಾಷ್ಟ್ರಗಳು ಕೊರೊನಾ ಕಾಟಕ್ಕೆ ಸಿಕ್ಕಿ ಕುಸಿದಿವೆ. ಆರ್ಥಿಕ ಪರಿಸ್ಥಿತಿಯಂತೂ ತೀರಾ ಹದಗೆಟ್ಟಿದೆ. ವಿಶ್ವಕ್ಕೆ ಪರಿಚಯವಿಲ್ಲದ ಲಾಕ್‍ಡೌನ್, ಕ್ವಾರಂಟೈನ್ ಮುಂತಾದ ವ್ಯವಸ್ಥೆಗಳು ಬಂದು ವಿಲವಿಲ ಒದ್ದಾಡುವಂತಾಗಿದೆ. ಹಣ ಬಲವಿದ್ದರೂ ಇಂದು ಶ್ರೀಮಂತ ರಾಷ್ಟ್ರಗಳು ಕೊರೊನಾ ಸೋಂಕಿಗೆ ಬಲಿಯಾಗಿ ತಮ್ಮ ಪ್ರಜೆಗಳನ್ನು ಸಾಲು-ಸಾಲಾಗಿ ಕಳೆದುಕೊಳ್ಳಲಾರಂಭಿಸಿವೆ. ಭವಿಷ್ಯದ ವಿಶ್ವದ ಸ್ಥಿತಿಯೇ ಭಯಾನಕವಾಗ ತೊಡಗಿದೆ. ಇಂಥಹ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಕೈಗೊಂಡ ನಿರ್ಧಾರ ಸರಿಯಾದುದೇ ಆಗಿದೆ.
-ಹರೀಶ್ ಸರಳಾಯ, ಮಡಿಕೇರಿ.