ನಾಪೋಕ್ಲು, ಮೇ 12: ಕಾರವಾರದಲ್ಲಿ ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಯೋಧÀರೊಬ್ಬರ ವಿವಾಹ ಸರಳವಾಗಿ ಸಂಪ್ರದಾಯಬದ್ಧವಾಗಿ ಜರುಗಿತು. ಕೊರೊನಾ ಸೋಂಕಿನಿಂದಾಗಿ ಲಾಕ್‍ಡೌನ್ ಹೇರಿದ್ದರಿಂದ ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆ ಸದ್ದಿಲ್ಲದೆ ಮನೆಯಲ್ಲಿ ಜರುಗಿತು.
ಕಾಟಕೇರಿ ಗ್ರಾಮದ ಕುಂಚೆಟ್ಟೀರ ಉತ್ತಪ್ಪ (ಜಾಜಿ) ಅವರ ಪುತ್ರ ಜಯಂತ್‍ಸುಬ್ಬಯ್ಯ ಅವರ ವಿವಾಹವು ನಾಪೋಕ್ಲು ಸಮೀಪದ ಕೋಕೇರಿ ಗ್ರಾಮದ ಕುಂಬಂಡ ರತ್ನಪೊನ್ನಯ್ಯ ಅವರ ಪುತ್ರಿ ಪ್ರಜ್ಞಾ ಪೊನ್ನಯ್ಯ ಅವರೊಂದಿಗೆ ಭಾನುವಾರ ನೆರವೇರಿತು. ನಾಪೋಕ್ಲಿನ ಕೊಡವ ಸಮಾಜದಲ್ಲಿ ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆ ವಧುವಿನ ಮನೆಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯಿತು.
ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಿವಾಹವನ್ನು ನೆರವೇರಿಸಲಾಯಿತು. ಕಾಟಕೇರಿಯ ವರನ ಮನೆಯಲ್ಲಿ ಸಂಪ್ರದಾಯಬದ್ದವಾಗಿ ರಾತ್ರಿ ಗಂಗಾಪೂಜೆ ಯಾವುದೇ ಆಡಂಬರವಿಲ್ಲದೆ ನೆರವೇರಿತು. 2000 ಮಂದಿಗೆ ವಿವಾಹ ಆಮಂತ್ರಣ ನೀಡಲಾಗಿತ್ತು. ಈಗ ಕೇವಲ ಸುಮಾರು 20 ಜನರ ಸಮ್ಮುಖದಲ್ಲಿ ವಿವಾಹ ನೆರವೇರಿಸುವಂತಾಯಿತು. ಕೊರೊನಾ ಸೋಂಕಿನ ಕಾರಣದಿಂದಾಗಿ ಸರಳವಾಗಿ ವಿವಾಹ ನಡೆಸಿದ್ದೇವೆ. ರಜೆ ಮುಗಿದೊಡನೆ ಕಾರವಾರಕ್ಕೆ ಹಿಂತಿರುಗಲಿದ್ದೇನೆ ಎಂದು ಜಯಂತ್‍ಸುಬ್ಬಯ್ಯ ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡರು.