ಮಡಿಕೇರಿ, ಮೇ 13: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಿಂದ ಕೊಡಗು ಜಿಲ್ಲೆಯೊಳಗೆ ಬಸ್‍ಗಳ ಓಡಾಟ ವಿರಳವಿದ್ದು, ತಮಿಳುನಾಡಿಗೆ ಪ್ರಯಾಣ ಬೆಳೆಸುವವರ ಸಂಖ್ಯೆ ಅಧಿಕವಾಗಿದೆ ಎಂದು ಸಂಸ್ಥೆಯ ಜಿಲ್ಲಾ ಘಟಕದ ವ್ಯವಸ್ಥಾಪಕರು ಖಚಿತಪಡಿಸಿದ್ದಾರೆ.ಪ್ರಸ್ತುತ ಮಡಿಕೇರಿ - ಕುಶಾಲನಗರ ನಡುವೆ ದಿನವೊಂದಕ್ಕೆ 22 ಬಾರಿ ಬಸ್ ಸಂಚರಿಸುತ್ತಿದ್ದು, ವಿವಿಧ ಇಲಾಖೆಗಳ ಉದ್ಯೋಗಿಗಳು ಸೇರಿದಂತೆ ಖಾಸಗಿ ವಲಯ, ಸಾರ್ವಜನಿಕರ ಅನುಕೂಲಕ್ಕಾಗಿ ಅರ್ಧಗಂಟೆಗಳ ಅಂತರದಲ್ಲಿ ಈ ಮಾರ್ಗದಲ್ಲಿ ಬಸ್ ಸಂಚರಿಸುತ್ತಿರು ವದಾಗಿ ವ್ಯವಸ್ಥಾಪಕಿ ಗೀತಾ ಅವರು ಪ್ರತಿಕ್ರಿಯಿಸಿದ್ದಾರೆ.

ಇನ್ನುಳಿದಂತೆ ಮಡಿಕೇರಿ, ವೀರಾಜಪೇಟೆ, ಗೋಣಿಕೊಪ್ಪಲು ನಡುವೆ 11, ಭಾಗಮಂಡಲ - ಮಡಿಕೇರಿ ನಡುವೆ 4, ಮಡಿಕೇರಿ - ಸೋಮವಾರಪೇಟೆ - ಕುಶಾಲನಗರ ನಡುವೆ 2 ಬಸ್‍ಗಳನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದ್ದಾರೆ. ಸಂಪಾಜೆ ತನಕ ಜಿಲ್ಲಾ ಕೇಂದ್ರದಿಂದ ಬಸ್ ತೆರಳುತ್ತಿದ್ದು, ಕೇವಲ ಒಂದಿಬ್ಬರು ಪ್ರಯಾಣಿಸುತ್ತಿದ್ದಾರೆ. ವಿನಾಕಾರಣ ನೂಕುನುಗ್ಗಲು : ಬೆಳಿಗ್ಗೆ ಹೊತ್ತು ಮಡಿಕೇರಿ - ಕುಶಾಲನಗರ ನಡುವೆ ಪ್ರತಿ ಅರ್ಧಗಂಟೆ ಅಂತರದಲ್ಲಿ ಬಸ್ ಇದ್ದರೂ, ಜನತೆ ಅಂತರ ಕಾಯ್ದುಕೊಳ್ಳದೆ ನೂಕುನುಗ್ಗಲು ಸೃಷ್ಟಿಸಿ ಆತಂಕ ತಂದೊಡ್ಡುತ್ತಿದ್ದು, ಇತ್ತ ಪ್ರತಿಯೊಬ್ಬರ ಸಹಕಾರ ಅವಶ್ಯಕವೆಂದು ಅವರು ತಿಳಿಹೇಳಿದ್ದಾರೆ.

92 ಬಸ್ ಕಾಯ್ದಿರಿಕೆ : ಈ ನಡುವೆ ಕೊಡಗಿನಿಂದ ತಮಿಳುನಾಡಿನ ಬೇರೆ ಬೇರೆ ಜಿಲ್ಲೆಗಳಿಗೆ ಹೊರಟಿರುವ ಆ ರಾಜ್ಯದ

(ಮೊದಲ ಪುಟದಿಂದ) ಮಂದಿಗಾಗಿ 92 ಬಸ್‍ಗಳನ್ನು ಕಾಯ್ದಿರಿಸಲಾಗಿದ್ದು, ಈಗಾಗಲೇ ಸುಮಾರು 16 ಬಸ್‍ಗಳಲ್ಲಿ ತವರಿಗೆ ತೆರಳಿದ್ದಾರೆ ಎಂದು ಗೀತಾ ಅವರು ಮಾಹಿತಿ ನೀಡಿದ್ದಾರೆ.

ಹೀಗಾಗಿ ಸದ್ಯದ ಮಟ್ಟಿಗೆ ಕೊಡಗಿನ ಗ್ರಾಮೀಣ ಭಾಗಗಳಿಗೆ ರಾಜ್ಯ ಸಾರಿಗೆ ಬಸ್‍ಗಳನ್ನು ಕಲ್ಪಿಸಲು ಕಷ್ಟಸಾಧ್ಯವೆಂದು ನೆನಪಿಸಿದ ಅವರು, ಜಿಲ್ಲೆಯ ಜನತೆ ಕನಿಷ್ಟ ಪ್ರಯಾಣಿಸುವ ಮಾರ್ಗಗಳಲ್ಲಿ ರಾಜ್ಯ ಸಾರಿಗೆ ಬಸ್‍ಗಾಗಿ ಒತ್ತಡ ಹೇರದೆ ಸಹಕಾರ ನೀಡುವಂತೆ ಕಳಕಳಿ ವ್ಯಕ್ತಪಡಿಸಿದ್ದಾರೆ.

ಪ್ರಯಾಣ ಆರಂಭ

ಜಿಲ್ಲಾಡಳಿತ, ಕೆಎಸ್‍ಆರ್‍ಟಿಸಿ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಅವರ ಸ್ವಂತ ಜಿಲ್ಲೆಗೆ ಕಳುಹಿಸುವ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದ್ದು, ತಮಿಳುನಾಡು ರಾಜ್ಯಕ್ಕೆ ಕಾರ್ಮಿಕರನ್ನು ಕಡೆದುಕೊಂಡು ಹೋಗಲು ಇದುವರೆಗೆ 92 ಬಸ್‍ಗಳನ್ನು ಕಾಯ್ದಿರಿಸಲಾಗಿದ್ದು, ಈಗಾಗಲೇ 9 ಬಸ್‍ಗಳು ಸೇಲಂ ಮತ್ತು ತಿರುವಣಮಲೈ ಜಿಲ್ಲೆಗೆ ತೆರಳಿವೆ. ಒಂದು ಬಸ್‍ನಲ್ಲಿ 25 ರಿಂದ 30 ಮಂದಿಯಂತೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕಳುಹಿಸಿ ಕೊಡಲಾಗುತ್ತಿದೆ ಎಂದು ಗೀತಾ ಮಾಹಿತಿ ನೀಡಿದ್ದಾರೆ.

ಮಂಗಳವಾರ ಕೆದಕಲ್‍ನಿಂದ ಸೆಲಂಗೆ 21 ವಲಸೆ ಕಾರ್ಮಿಕರು, ಪಾಲಿಬೆಟ್ಟದಿಂದ ವಿಲ್ಲೂಪುರಂಗೆ 25 ಮಂದಿ, ಪಾಲಿಬೆಟ್ಟದಿಂದ ಸೇಲಂಗೆ 20 ಮಂದಿ, ಪಾಲಿಬೆಟ್ಟದಿಂದ ನಮಕ್ಕಲ್‍ಗೆ 23 ಮಂದಿ ಸಿದ್ದಾಪುರದಿಂದ ಸೇಲಂಗೆ 26 ಮಂದಿ ಕಾರ್ಮಿಕರನ್ನು ಜಿಲ್ಲಾಧಿಕಾರಿ ನಿರ್ದೇಶನದಂತೆ ಕಾರ್ಮಿಕ ಇಲಾಖೆ ಯಿಂದ ಮಾಸ್ಕ್, ಸ್ಯಾನಿಟೈಜರ್, ಬಿಸ್ಕತ್ತು ಪಾಕೆಟ್, ಜ್ಯೂಸ್ ಪಾಕೆಟ್ ಮತ್ತು ನೀರಿನ ಬಾಟಲ್‍ಗಳನ್ನು ಪ್ರತಿಯೊಬ್ಬ ಕಾರ್ಮಿಕರಿಗೆ ಮತ್ತು ಬಸ್ಸಿನ ಚಾಲಕರಿಗೆ ವಿತರಿಸಿ ಕಳಿಸಿಕೊಡ ಲಾಯಿತು.

ಬುಧವಾರ ಸಹ ಸೇಲಂ ಜಿಲ್ಲೆಗೆ ವಲಸೆ ಕಾರ್ಮಿಕರನ್ನು ಕಳುಹಿಸಿ ಕೊಡಲಾಯಿತು. ಈ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕ ವ್ಯವಸ್ಥಾಪಕಿ ಗೀತಾ, ತಾಲೂಕು ಕಾರ್ಮಿಕ ಅಧಿಕಾರಿ ಎಂ.ಎಂ ಯತ್ನಟ್ಟಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಬಿ.ಕೆ.ರವೀಂದ್ರ ರೈ, ಕಾರ್ಯದರ್ಶಿ ಎಚ್.ಆರ್.ಮುರಳೀಧರ್, ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಸೀರಜ್ ಇತರರು ಇದ್ದರು.