ಸೋಮವಾರಪೇಟೆ,ಮೇ 13: ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯ ಕಾರೇಕೊಪ್ಪ ಬಳಿಯಲ್ಲಿ ಕಾಡಾನೆಯೊಂದು ದ್ವಿಚಕ್ರ ವಾಹನ ಸವಾರರ ಮೇಲೆ ಧಾಳಿ ನಡೆಸಿರುವ ಘಟನೆ ನಿನ್ನೆ ರಾತ್ರಿ 11 ಗಂಟೆಗೆ ಜರುಗಿದ್ದು, ಗಾಯಾಳು ಗಳನ್ನು ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಕೆಂಚಮ್ಮನಬಾಣೆ ಗ್ರಾಮದ ಕೂಲಿ ಕಾರ್ಮಿಕರಾದ ಕೃಷ್ಣ ಮತ್ತು ಕುಶಾಲ ಅವರುಗಳು ನಿನ್ನೆ ದ್ವಿಚಕ್ರ ವಾಹನದಲ್ಲಿ ಕುಶಾಲನಗರಕ್ಕೆ ತೆರಳಿ ರಾತ್ರಿ 11 ಗಂಟೆ ಸುಮಾರಿಗೆ ವಾಪಸ್ ಆಗುತ್ತಿದ್ದ ಸಂದರ್ಭ, ಕಾರೇಕೊಪ್ಪ ಬಳಿಯಲ್ಲಿ ಕಾಡಾನೆ ಅಡ್ಡಗಟ್ಟಿದೆ.ಈ ಸಂದರ್ಭ ವಾಹನದಿಂದ ಕೆಳಬಿದ್ದ ಸವಾರರು ಓಡಿ ತಪ್ಪಿಸಿ ಕೊಳ್ಳಲು ಮುಂದಾಗುತ್ತಿದ್ದಂತೆ ಕಾಡಾನೆ ಧಾಳಿ ನಡೆಸಿದೆ. ಪರಿಣಾಮ ಕೃಷ್ಣ ಅವರ ಎಡಗಾಲು ಮುರಿತಕ್ಕೊಳ ಗಾಗಿದ್ದರೆ, ಕುಶಾಲ ಅವರ ತಲೆಭಾಗಕ್ಕೆ ಗಾಯಗಳಾಗಿವೆ. ಈ ಸಂದರ್ಭ ಈರ್ವರು ಜೋರಾಗಿ ಕೂಗಾಡಿದ್ದಾರೆ. ಇದರಿಂದಾಗಿ (ಮೊದಲ ಪುಟದಿಂದ) ಇನ್ನಷ್ಟು ಆಕ್ರೋಶಗೊಂಡ ಕಾಡಾನೆ ಅನತಿ ದೂರದಲ್ಲಿ ಬಿದ್ದಿದ್ದ ಆಕ್ಟಿವಾ ಹೋಂಡಾ ದ್ವಿಚಕ್ರ ವಾಹನವನ್ನು ತುಳಿದು ನಜ್ಜುಗುಜ್ಜುಗೊಳಿಸಿ ಕಾಫಿ ತೋಟದೊಳಗೆ ತೆರಳಿದೆ. ಘಟನೆಯ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ ನಂತರ, ಸ್ಥಳಕ್ಕಾಗಮಿಸಿದ ಕೆಂಚಮ್ಮನಬಾಣೆಯ ಕೆಲವರು, ಈರ್ವರು ಗಾಯಾಳುಗಳನ್ನು ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಕೃಷ್ಣ ಅವರ ಎಡಗಾಲು ಮುರಿತಕ್ಕೊಳಗಾಗಿದ್ದು, ದೇಹದ ಇತರ ಭಾಗಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕುಶಾಲ ಅವರ ತಲೆ ಭಾಗಕ್ಕೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಆರ್‍ಎಫ್‍ಓ ಶಮಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದಲ್ಲಿ ನಾಲ್ಕೈದು ಗುಂಪುಗಳಲ್ಲಿ ಕಾಡಾನೆಗಳು ಸಂಚರಿಸುತ್ತಿದ್ದು, ಅವುಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಮೂರು ಆನೆಗಳು ಈ ಭಾಗದಲ್ಲಿ ಓಡಾಡುತ್ತಿರುವ ಮಾಹಿತಿ ಲಭಿಸಿದೆ. ನಿನ್ನೆ ರಾತ್ರಿ ನಡೆದ ಘಟನೆಯ ಬಗ್ಗೆ ಡಿಎಫ್‍ಓ ಮತ್ತು ಸಿಸಿಎಫ್ ಅವರ ಗಮನಕ್ಕೆ ತರಲಾಗಿದೆ. ಈರ್ವರು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಇಲಾಖೆಯಿಂದಲೇ ಭರಿಸಲಾಗುತ್ತದೆ ಎಂದು ಆರ್‍ಎಫ್‍ಓ ಶಮಾ ತಿಳಿಸಿದ್ದಾರೆ.
ಗಾಯಾಳುಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಅಗತ್ಯವಿದ್ದರೆ ಹೊರ ಜಿಲ್ಲೆಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುವದು ಎಂದು ಅಭಿಪ್ರಾಯಿಸಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಮಾನಸಿಕ ಅಸ್ವಸ್ಥನ ಮೇಲೆ ಕಾಡಾನೆ ಧಾಳಿ ನಡೆಸಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಇದೀಗ ಮತ್ತೆ ಕಾಡಾನೆಗಳ ಓಡಾಟ ಈ ಭಾಗದಲ್ಲಿ ಪ್ರಾರಂಭವಾಗಿದ್ದು, ದ್ವಿಚಕ್ರ ವಾಹನದಲ್ಲಿ ಸಾರ್ವಜನಿಕರು ಈ ರಸ್ತೆಯಲ್ಲಿ ಓಡಾಡುವ ಸಂದರ್ಭ ಹೆಚ್ಚಿನ ಜಾಗ್ರತೆ ವಹಿಸಬೇಕಿದೆ. ಆನೆಗಳಿಗೆ ಅರಣ್ಯದಲ್ಲೇ ಕುಡಿಯುವ ನೀರು ಒದಗಿಸಲು ಇಲಾಖೆ ಮುಂದಾಗಬೇಕು. ಜನವಸತಿ ಪ್ರದೇಶದಿಂದ ಕಾಡಾನೆಗಳನ್ನು ಅಟ್ಟುವ ಕಾರ್ಯಾಚರಣೆ ನಡೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.