ಮಡಿಕೇರಿ, ಮೇ 11: ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ರೀ ಬಿಲ್ಡ್ ಕೊಡಗು ಯೋಜನೆ ಮೂಲಕ ಮತ್ತೆ 25 ಮನೆಗಳನ್ನು ಹಸ್ತಾಂತರ ಮಾಡಲಾಗಿದ್ದು, ಈವರೆಗೂ ರೋಟರಿಯಿಂದ 50 ಮನೆಗಳನ್ನು ಸಂತ್ರಸ್ತರಿಗೆ ನೀಡಲಾಗಿದೆ.ಕಳೆದ ವರ್ಷ ಜೂನ್‍ನಲ್ಲಿ ಪ್ರಥಮ ಹಂತವಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದಲ್ಲಿ 25 ಮನೆಗಳನ್ನು ರೀ ಬಿಲ್ಡ್ ಕೊಡಗು ವತಿಯಿಂದ ನೀಡಲಾಗಿತ್ತು.ಇದೀಗ ಮಾದಾಪುರ, ಗರಗಂದೂರು ವ್ಯಾಪ್ತಿಯ 25 ಮಂದಿಗೆ ಅವರ ಜಾಗದಲ್ಲಿಯೇ ಹೊಸ ಮನೆ ನಿರ್ಮಾಣ ಮಾಡಿ ಭಾನುವಾರ ಸರಳ ರೀತಿಯಲ್ಲಿ ಹಸ್ತಾಂತರಿಸಲಾಯಿತು ಎಂದು ರೀ ಬಿಲ್ಡ್ ಯೋಜನಾ ಸಮಿತಿ ಅಧ್ಯಕ್ಷ ಡಾ. ರವಿ ಅಪ್ಪಾಜಿ ತಿಳಿಸಿದ್ದಾರೆ.ಈವರೆಗೂ ವಿವಿಧ ರೋಟರಿ ಕ್ಲಬ್‍ಗಳು ನೀಡಿದ ಸಹಾಯಧನ ಬಳಸಿ 2.56 ಕೋಟಿ ರೂ. ವೆಚ್ಚದಲ್ಲಿ ಮನೆಗಳನ್ನು ರೋಟರಿ ಮೂಲಕ ಹ್ಯಾಬಿಟೇಟ್ ಫಾರ್ ಹ್ಯೂಮಾನಿಟಿ ಇಂಡಿಯಾ ಸಂಸ್ಥೆಯು ನಿರ್ಮಾಣ ಮಾಡಿದೆ. ಪ್ರತೀ ಮನೆಗೂ ರೂ. 5.5 ಲಕ್ಷ ವೆಚ್ಚ ತಗುಲಿದೆ. ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಪ್ರಮುಖರು ಹಾಗೂ ಭಾರತದ ರೋಟರಿ ನಾಯಕರ ಬೆಂಬಲದೊಂದಿಗೆ ಈ ಯೋಜನೆ ಕಾರ್ಯಗತಗೊಂಡಿದೆ ಎಂದು ಡಾ. ರವಿ ಅಪ್ಪಾಜಿ ಮಾಹಿತಿ ನೀಡಿದ್ದಾರೆ.
ಲಾಕ್‍ಡೌನ್ ನಿಯಮಗಳಂತೆ ಸಭಾ ಕಾರ್ಯಕ್ರಮ ಇಲ್ಲದೇ ಸರಳ ರೀತಿಯಲ್ಲಿ 25 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಿರುವುದಾಗಿಯೂ ಅವರು ತಿಳಿಸಿದ್ದಾರೆ.