ಸಿದ್ದಾಪುರ, ಮೇ 11: ಅಮ್ಮತ್ತಿ-ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕೊರೊನಾ ಯೋಧರುಗಳಾದ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತರಿಗೆ, ಪೌರಕಾರ್ಮಿಕರಿಗೆ, ವಿದ್ಯುತ್ ಇಲಾಖೆ ಸಿಬ್ಬಂದಿಗಳಿಗೆ ಅವರ ಉತ್ತಮ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ, ಗೌರವಿಸಲಾಯಿತು.

ಅಮ್ಮತ್ತಿ-ಕಾರ್ಮಾಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮ್ಮತ್ತಿ ವ್ಯಾಪ್ತಿಯ ವಿವಿಧ ಸಂಘ-ಸಂಸ್ಥೆಗಳಾದ ನೆಕ್ಸ್ಟ್ ಜನರೇಷÀನ್ ಮಾಚಿಮಂಡ ದೇವಯ್ಯ ಮೆಮೋರಿಯಲ್ ಸ್ಕೂಲ್, ಚೇಂಬರ್ ಆಫ್ ಕಾಮರ್ಸ್, ಅಮ್ಮತ್ತಿ ಕೊಡವ ಸಮಾಜ ಮತ್ತು ಶ್ರೀ ಮುತ್ತಪ್ಪ, ಶ್ರೀ ಬಸವೇಶ್ವರ ದೇವಾಲಯಗಳು, ಅಮ್ಮತ್ತಿ ಬಿಜೆಪಿ ಸ್ಥಾನೀಯ ಸಮಿತಿ, ಕಾರ್ಮಾಡು ಎ.ಪಿ.ಎಂ.ಸಿ., ಅಮ್ಮತ್ತಿ, ನರಿಯರಿಕೇರಿ, ಕಾವಡಿ, ಶ್ರೀ ಭಗವತಿ ದೇವಾಲಯ, ಅಮ್ಮತ್ತಿ ವಾಹನ ಚಾಲಕರ ಮಾಲೀಕರ ಸಂಘ, ಅಮ್ಮತ್ತಿ ಭಗವತಿ ಸ್ವಸಹಾಯ ಸಂಘ, ಲಕ್ಷ್ಮಿ ಟೂರ್ಸ್ ಅಂಡ್ ಟ್ರಾವೆಲ್ಸ್ ಇವರುಗಳ ಆಸರೆಯಲ್ಲಿ ಕೊರೊನಾ ಯೋಧರಿಗೆ ಪ್ರತಿನಿತ್ಯ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇದೀಗ ಇದೇ ಸಂಘಟನೆಗಳ ವತಿಯಿಂದ ಕೊರೊನಾ ಯೋಧರ ಉತ್ತಮ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ಆರ್.ಎಸ್.ಎಸ್. ಮುಖ್ಯಸ್ಥ ಚಕ್ಕೇರ ಮನು ಮಾತನಾಡಿ, ಅಂತರ ಕಾಯ್ದುಕೊಳ್ಳುವ ಪ್ರಾಮುಖ್ಯತೆಯನ್ನು ತಿಳಿಸಿದರು. ಅಮ್ಮತಿ ಕೊಡವ ಸಮಾಜ ಅಧ್ಯಕ್ಷ ಬೋಸ್ ದೇವಯ್ಯ ಮಾತನಾಡಿ, ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಆದೇಶದ ಮುಖಾಂತರ ಜಿಲ್ಲಾಡಳಿತವು ಉತ್ತಮ ರೀತಿಯಲ್ಲಿ ಕರ್ತವ್ಯವನ್ನು ನಿರ್ವಹಿಸಿದೆ ಎಂದರು.

ಕಾರ್ಯಕ್ರಮದಲ್ಲಿ ನೆಕ್ಸ್ಟ್ ಜನರೇಷನ್ ಸ್ಕೂಲ್ ಪ್ರಾಂಶುಪಾಲೆ ಇಂದೂ ಗಣಪತಿ, ಮಾಚಿಮಂಡ ಸುವಿನ್ ಗಣಪತಿ, ಕೆ.ಕೆ. ನಾಚಪ್ಪ, ಪ್ರಿನ್ಸ್ ಗಣಪತಿ, ವಿಠಲ ಕಾರ್ಯಪ್ಪ, ಎಂ. ವಸಂತ್, ಚಂದ್ರು, ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಪ್ರಜಿತ್, ಪಂಚಾಯಿತಿ ಸದಸ್ಯ ಹೆಚ್.ಬಿ. ಜಯಮ್ಮ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಗಳು ಹಾಗೂ ಗ್ರಾಮ ಪಂಚಾಯಿತಿ ಪಿಡಿಓ ತಿಮ್ಮಯ್ಯ ಹಾಜರಿದ್ದರು.