ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ

ನವದೆಹಲಿ, ಮೇ 11: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೋವಿಡ್-19 ಕಂಟೈನ್‍ಮೆಂಟ್ ತಂತ್ರ ಬಲಪಡಿಸುವ ಕುರಿತು ಮತ್ತು ಆರ್ಥಿಕ ಚಟುವಟಿಕೆ ಆರಂಭಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವೀಡಿಯೋ ಕಾನ್ಫರೆನ್ಸ್ ನಡೆಸಿದರು. ದೇಶಾದ್ಯಂತ 54 ದಿನಗಳ ಲಾಕ್‍ಡೌನ್ ತಾ. 17ಕ್ಕೆ ಅಂತ್ಯವಾಗುತ್ತಿದ್ದು, ಈ ಹಿನ್ನೆಲೆ ಇಂದು ಐದನೇ ಬಾರಿ ಮುಖ್ಯಮಂತ್ರಿಗಳ ಜತೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ ಪ್ರಧಾನಿ, ತಾ. 4 ರ ನಂತರ ದೇಶದಲ್ಲಿ ದೊಡ್ಡ ಪ್ರಮಾಣದ ವಲಸೆ ಕಾರ್ಮಿಕರು ನಗರಗಳಿಂದ ಗ್ರಾಮೀಣ ಪ್ರದೇಶಕ್ಕೆ ಹೋಗಿದ್ದು, ವಲಸೆ ಕಾರ್ಮಿಕರಿಂದ ಉಂಟಾದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ತೆಗೆದುಕೊಂಡಿರುವ ಕ್ರಮಗಳಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಯಶಸ್ಸು ಕಂಡಿದ್ದು, ಸಾಮಾಜಿಕ ಅಂತರದಂತಹ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ಎಚ್ಚರಿಸಿದ್ದಾರೆ. ದೇಶದಲ್ಲಿ ಆರ್ಥಿಕ ಚಟುವಟಿಕೆಯನ್ನು ಹೇಗೆ ಮರು ಆರಂಭಿಸಬೇಕು ಎಂಬುದು ಇಂದಿನ ಸಭೆಯ ಪ್ರಮುಖ ಕಾರ್ಯಸೂಚಿಯಾಗಿತ್ತು ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾಗವಹಿಸಿದ್ದರು.

ಮದ್ಯದಿಂದ ಸಾವಿರ ಕೋಟಿ ರೂಪಾಯಿ ಆದಾಯ

ಕೋಲಾರ, ಮೇ 11: ಲಾಕ್‍ಡೌನ್ ಸಡಿಲಿಕೆ ನಂತರ ಒಂದು ವಾರ ನಡೆದ ಮದ್ಯ ಮಾರಾಟದ ವಹಿವಾಟಿನಲ್ಲಿ ರೂ. 1000 ಕೋಟಿ ಆದಾಯ ದೊರೆತಿದೆ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ಹೇಳಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 42 ದಿನಗಳ ಲಾಕ್‍ಡೌನ್ ಅವಧಿಯಲ್ಲಿ 3 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದರು. ಪ್ರಸಕ್ತ ಸಾಲಿಗೆ ರೂ. 22,500 ಕೋಟಿ ಗುರಿಯಿದ್ದು ಶೇ. 17 ರಷ್ಟು ಅಬಕಾರಿ ಸುಂಕ ಹೆಚ್ಚಳದಿಂದ ರೂ. 2500 ಕೋಟಿ ಹೆಚ್ಚುವರಿ ಆದಾಯ ಸಿಗಲಿದ್ದು ಒಟ್ಟು 25000 ಗುರಿ ಹೊಂದಿದಂತಾಗಿದೆ ಎಂದರು. ಲಾಕ್‍ಡೌನ್ ಸಡಿಲಿಸಲಾಗಿದೆ ಎಂದು ಶಿಸ್ತು ಪಾಲಿಸುವುದನ್ನು ಮರೆತರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೋಲಾರ ಗಡಿ ಭಾಗವಾಗಿದ್ದು ನೆರೆಯ ರಾಜ್ಯಗಳಿಂದ ಜನರು ಮದ್ಯ ಖರೀದಿಸಲು ನುಸುಳುವ ಅಪಾಯವಿದ್ದು ಗಡಿಯಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಅಲ್ಲದೇ ಗಡಿಯಲ್ಲಿನ ಮದ್ಯದಂಗಡಿಗಳು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿದ್ದು ಇತರೆಡೆ ಆಧಾರ್ ಕಾರ್ಡ್‍ನಲ್ಲಿ ವಿಳಾಸ ಪರಿಶೀಲಿಸಿ ನಂತರವಷ್ಟೇ ಮದ್ಯ ನೀಡಲಾಗುತ್ತಿದೆ ಎಂದು ಸಚಿವ ನಾಗೇಶ್ ವಿವರಿಸಿದ್ದಾರೆ.

ಕೇರಳ ಆರೋಗ್ಯ ಸಚಿವರೊಂದಿಗೆ ಚರ್ಚೆ

ಬೆಂಗಳೂರು, ಮೇ 11: ಕೋವಿಡ್ ವಿರುದ್ಧದ ಹೋರಾಟದಲ್ಲಿ ಅಳವಡಿಸಿಕೊಂಡಿರುವ ಉತ್ತಮ ನಿಯಂತ್ರಣ ಮತ್ತು ಚಿಕಿತ್ಸಾ ಪದ್ಧತಿಗಳ ಕುರಿತು ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್ ಅವರ ಜೊತೆ ವೈದ್ಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ವೀಡಿಯೋ ಸಂವಾದ ನಡೆಸಿದರು. ಐವತ್ತು ನಿಮಿಷಗಳಿಗೂ ಹೆಚ್ಚು ಕಾಲ ನಡೆದ ಸಂವಾದದಲ್ಲಿ ಎರಡೂ ರಾಜ್ಯಗಳಲ್ಲಿ ರೋಗದ ಪತ್ತೆ, ಪರೀಕ್ಷೆ ಮತ್ತು ಚಿಕಿತ್ಸೆಗೆ ಅಳವಡಿಸಿ ಕೊಂಡಿರುವ ಕ್ರಮಗಳು, ಅವುಗಳಿಂದ ದೊರಕಿರುವ ಫಲಿತಾಂಶ, ಲಾಕ್‍ಡೌನ್ ಸಡಿಲಿಕೆ ನಂತರ ಎದುರಾಗುವ ಸವಾಲುಗಳನ್ನು ಎದುರಿಸಲು ಕೈಗೊಳ್ಳಲಿರುವ ಮುನ್ನೆಚ್ಚರಿಕೆ ಕ್ರಮ ಕುರಿತು ವಿವರವಾಗಿ ಚರ್ಚಿಸಲಾಯಿತು. ರೋಗ ನಿಯಂತ್ರಣಕ್ಕೆ ಬರುವ ತನಕ ಇನ್ನು ಮುಂದೆ ನಿಯಮಿತವಾಗಿ ಸಂವಾದ ನಡೆಸಿ, ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಇಬ್ಬರೂ ಸಚಿವರು ಸಹಮತ ವ್ಯಕ್ತಪಡಿಸಿದರು. ಇತರ ರಾಜ್ಯಗಳಿಗೆ ಮತ್ತು ದೇಶದ ಶೇಕಡಾವಾರು ಮರಣ ಪ್ರಮಾಣಕ್ಕೆ ಹೋಲಿಸಿದರೆ ಕೇರಳ ಉತ್ತಮವಾಗಿ ಕೋವಿಡ್ ನಿರ್ವಹಣೆ ಮಾಡಲು ಕೈಗೊಂಡ ಕ್ರಮಗಳನ್ನು ವಿವರಿಸಿದ ಸಚಿವೆ ಶೈಲಜಾ ಟೀಚರ್, ವುಹಾನ್‍ನಲ್ಲಿ ಸೋಂಕು ಕಾಣಿಸಿಕೊಂಡು ಅಲ್ಲಿನ ವಿದ್ಯಾರ್ಥಿಗಳು ಕೇರಳಕ್ಕೆ ಹಿಂತಿರುಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಕೋರ್ಟ್‍ಗೆ ಕಕ್ಷಿದಾರರು ಅರ್ಜಿ ಸಲ್ಲಿಸಬಹುದು

ಬೆಂಗಳೂರು, ಮೇ 11: ಲಾಕ್‍ಡೌನ್ ಹಿನ್ನೆಲೆ ಸ್ಥಗಿತಗೊಂಡಿದ ಹೈಕೋರ್ಟ್‍ನಲ್ಲಿ ತಾ. 13 ರಿಂದ ಮೂರು ದಿನಗಳ ಕಾಲ ಕಕ್ಷಿದಾರರು, ವಕೀಲರು ಖುದ್ದು ಹಾಜರಾಗಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ತಾ. 13, 14 ಹಾಗೂ 15 ರಂದು ಪ್ರಾಯೋಗಿಕವಾಗಿ ಈ ಅವಕಾಶ ಒದಗಿಸಲಾಗಿದೆ. ವಕೀಲರು, ಸಾರ್ವಜನಿಕರು ಮತ್ತು ಕ್ಲರ್ಕ್‍ಗಳು ಖುದ್ದು ಹಾಜರಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನಂತರ ಇಮೇಲ್ ಮೂಲಕ ವಿಚಾರಣೆಯ ವಿವರ ಪಡೆಯಬಹುದಾಗಿದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಮಾಹಿತಿ ನೀಡಿದ್ದಾರೆ. ಆದರೆ, ಈ ಸಮಯದಲ್ಲಿ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜೊತೆಗೆ, ಇತರ ಲಾಕ್‍ಡೌನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಕೇಂದ್ರ ನೌಕರರ ವೇತನ ಕಡಿತ ಇಲ್ಲ

ನವದೆಹಲಿ, ಮೇ 11: ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಕೇಂದ್ರ ಸರ್ಕಾರಿ ಉದ್ಯೋಗಿಗಳ ವೇತನ ಕಡಿತಗೊಳಿಸಲಿದೆ ಎಂಬ ವರದಿಗಳನ್ನು ಕೇಂದ್ರ ಹಣಕಾಸು ಸಚಿವಾಲಯ ತಳ್ಳಿಹಾಕಿದೆ. ಈ ವರದಿಗಳು ನಿರಾಧಾರ, ಅವಾಸ್ತವ ಎಂದು ಸ್ಪಷ್ಟಪಡಿಸಿದೆ. ಯಾವುದೇ ವರ್ಗಕ್ಕೆ ಸೇರಿದ ಕೇಂದ್ರ ಸರ್ಕಾರಿ ಉದ್ಯೋಗಿಗಳ ಪ್ರಸ್ತುತ ವೇತನಗಳಲ್ಲಿ ಕಡಿತಗೊಳಿಸುವಂತಹ ಯಾವುದೇ ಪ್ರಸ್ತಾವನೆ ಪರಿಶೀಲನೆಯಲ್ಲಿಲ್ಲ ಎಂದು ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ. ಈ ಸಂಬಂಧ ಕೆಲ ಮಾಧ್ಯಮಗಳಲ್ಲಿ ಬಿತ್ತರಗೊಂಡ ವರದಿಗಳು ನಿರಾಧಾರ ಎಂದು ಹೇಳಿದೆ. ಜೊತೆಗೆ ನಿವೃತ್ತ ಉದ್ಯೋಗಿಗಳ ಪಿಂಚಣಿಯಲ್ಲೂ ಯಾವುದೇ ರೀತಿಯ ಕಡಿತ ಗೊಳಿಸುವುದಿಲ್ಲ, ತುರ್ತು ಸಮಯದಲ್ಲಿ ವೇತನಗಳು, ಪಿಂಚಣಿಯನ್ನು ತಗ್ಗಿಸುವ, ಇಲ್ಲವೇ ಕಡಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಈ ಹಿಂದೆ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿತ್ತು. ಕೇಂದ್ರ ಸರ್ಕಾರಿ ನೌಕರರ ಪಿಂಚಣಿಯಲ್ಲಿ ಶೇ. 20 ರಷ್ಟು ಕಡಿತಗೊಳಿಸಲಿದೆ ಎಂಬ ವದಂತಿಗಳು ಹಬ್ಬಿವೆ. ಇದು ಸಂಪೂರ್ಣ ಅವಾಸ್ತವ ಎಂದು ಹೇಳಿದೆ.

ಗ್ರೀನ್ ಜೋನ್ ಹಾಸನದಲ್ಲೂ ಸೋಂಕು

ಬೆಂಗಳೂರು, ಮೇ 11: ಗ್ರೀನ್ ಜೋನ್ ಹಾಸನಕ್ಕೂ ಕೊರೊನಾ ಮಹಾಮಾರಿ ಒಕ್ಕರಿಸಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ. ಹೊಸದಾಗಿ 14 ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆ ಆಗಿದೆ. ಈ ಪೈಕಿ 31 ರೋಗಿಗಳು ಮೃತಪಟ್ಟಿದ್ದು, 426 ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ದಾವಣಗೆರೆಯಲ್ಲಿ 3, ಕಲಬುರ್ಗಿಯಲ್ಲಿ 1, ಬೀದರ್‍ನಲ್ಲಿ 2, ಬೆಂಗಳೂರಿನಲ್ಲಿ 2, ಮಂಡ್ಯ, ಹಾಸನ, ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ 1, ಬಾಗಲಕೋಟೆ ಜಿಲ್ಲೆಯ ಬನಹಟ್ಟಿ, ಬಾದಾಮಿಯಲ್ಲಿ ತಲಾ 1 ಹಾಗೂ ವಿಜಯಪುರದಲ್ಲಿ 1 ಪ್ರಕರಣಗಳು ಪತ್ತೆಯಾಗಿವೆ.

ದೀಪಾ ಮಲಿಕ್ ಕ್ರೀಡೆಗೆ ನಿವೃತ್ತಿ

ನವದೆಹಲಿ, ಮೇ 11: ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್ ರಾಷ್ಟ್ರೀಯ ಕ್ರೀಡಾ ಸಂಹಿತೆ ಅನುಸಾರ ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿಯ ಅಧ್ಯಕ್ಷರಾಗಿ ತಮ್ಮ ಹುದ್ದೆಯನ್ನು ಅಲಂಕರಿಸುವ ಉದ್ದೇಶದಿಂದ ಸಕ್ರಿಯೆ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದಾರೆ. ರಾಷ್ಟ್ರೀಯ ಕ್ರೀಡಾ ಸಂಹಿತೆ ಪ್ರಕಾರ, ಸಕ್ರಿಯ ಕ್ರೀಡಾಪಟು ಯಾವುದೇ ಒಕ್ಕೂಟದಲ್ಲಿ ಅಧಿಕೃತ ಹುದ್ದೆಯನ್ನು ಅಲಂಕರಿಸುವಂತಿಲ್ಲ. ತಮ್ಮ ನಿವೃತ್ತಿ ಕುರಿತು ಟ್ವಿಟರ್‍ನಲ್ಲಿ ಪ್ರಕಟಿಸಿರುವ ಅವರು, ಹಲವು ದಿನಗಳ ಹಿಂದೆಯೇ ಚುನಾವಣೆ ಉದ್ದೇಶಕ್ಕಾಗಿ ಈಗಾಗಲೇ ಪಿಸಿಐಗೆ ಪತ್ರವೊಂದನ್ನು ಸಲ್ಲಿಸಿದ್ದೇವೆ, ಹೊಸ ಸಮಿತಿಯನ್ನು ಉರ್ಜಿತಗೊಳಿಸುವ ಹೈಕೋರ್ಟ್‍ನ ತೀರ್ಪಿಗಾಗಿ ಕಾಯುತ್ತಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯದೊಂದಿಗೆ ಭಾಗವಾಗಲು ಈಗ ಸಕ್ರಿಯ ಕ್ರೀಡೆಗಳಿಂದ ನಿವೃತ್ತಿಯ ಬಗ್ಗೆ ಸಾರ್ವಜನಿಕ ಘೋಷಣೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.