ಕುಶಾಲನಗರ, ಮೇ 11: ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಾವೇರಿ ನದಿಯ ನಿರ್ವಹಣೆ ಕಾಮಗಾರಿಗೆ ಶಾಸಕ ಅಪ್ಪಚ್ಚುರಂಜನ್ ಸೋಮವಾರ ಚಾಲನೆ ನೀಡಿದರು. ಪಟ್ಟಣದ ಕುಶಾಲನಗರ-ಕೊಪ್ಪ ಕಾವೇರಿ ಸೇತುವೆ ಕೆಳಭಾಗದಲ್ಲಿ ಶಾಸಕರು ಹಿಟಾಚಿ ಯಂತ್ರಕ್ಕೆ ಚಾಲನೆ ನೀಡುವ ಮೂಲಕ ಕಾಮಗಾರಿ ಪ್ರಾರಂಭಿಸಿದರು.ಪ್ರವಾಹ ಸಂತ್ರಸ್ತರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಕೊಡಗು ಜಿಲ್ಲಾಧಿಕಾರಿಗಳು, ಕಳೆದ ವಾರವಷ್ಟೇ 88 ಲಕ್ಷ ರೂ.ಗಳ ವೆಚ್ಚದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರು. ಹಣಕಾಸಿನ ಮುಗ್ಗಟ್ಟು ತಲೆದೋರಿದ್ದ ಹಿನ್ನೆಲೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ನದಿ ಹೂಳೆತ್ತುವ ಕಾಮಗಾರಿ ಕೂಡಲೆ ಕಾರ್ಯಗತ ಗೊಳಿಸಲು ಮುತುವರ್ಜಿ ವಹಿಸಿದ ಮೇರೆಗೆ ಕಾವೇರಿ ನೀರಾವರಿ ನಿಗಮದ ಮೂಲಕ ನದಿ ನಿರ್ವಹಣೆ ಕಾಮ ಗಾರಿಗೆ ತುರ್ತಾಗಿ ಹಣ ಬಿಡುಗಡೆ ಮಾಡಲಾಗಿದೆ.ರಸೂಲ್ ಬಡಾವಣೆ ವ್ಯಾಪ್ತಿಯ ಕಾವೇರಿ ನದಿ ತಟದಲ್ಲಿ ಪೂಜೆ ಸಲ್ಲಿಸಿ ಹಿಟಾಚಿಯನ್ನು ಚಾಲನೆಗೊಳಿಸುವ ಮೂಲಕ ಶಾಸಕ ಅಪ್ಪಚ್ಚುರಂಜನ್ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಶಾಸಕ ರಂಜನ್, ಕಳೆದೆರಡು ವರ್ಷ ಕಾವೇರಿ ಉಕ್ಕಿ ಹರಿದ ಪರಿಣಾಮ ನದಿ ತಟದ ಸಾವಿರಾರು ಮನೆಗಳು ಮುಳುಗಡೆಯಾಗಿದ್ದವು. ಜೊತೆಗೆ ಮಡಿಕೇರಿ-ಕುಶಾಲನಗರ-ಮೈಸೂರು ಹೆದ್ದಾರಿ ಮೇಲೆ ನೀರು ನಿಂತು ಸಂಚಾರ ವ್ಯವಸ್ಥೆ ಕೂಡ ಸ್ಥಗಿತಗೊಂಡಿತ್ತು. ಇದರಿಂದ ಜಿಲ್ಲೆ ಸೇರಿದಂತೆ
(ಮೊದಲ ಪುಟದಿಂದ) ಸ್ಥಳೀಯ ನದಿ ತಟದ ನಿವಾಸಿಗಳಲ್ಲಿ ಆತಂಕ ಮನೆಮಾಡಿತ್ತು. ಪ್ರವಾಹ ಪರಿಸ್ಥಿತಿ ನಿಭಾಯಿಸಲು ನದಿಯ ಅಲ್ಲಲ್ಲಿ ಬೆಳೆದಿರುವ ಕಾಡುಗಿಡಗಂಟಿ, ಮಣ್ಣಿನ ದಿಬ್ಬಗಳನ್ನು ತೆರವುಗೊಳಿಸಿ ನದಿ ನೀರು ಸರಾಗವಾಗಿ ಹರಿಯಲು ಯೋಜನೆ ರೂಪಿಸಲಾಗಿದೆ. ಕುಶಾಲನಗರ ಪಟ್ಟಣ ವ್ಯಾಪ್ತಿಯ 4 ಕಡೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು. ಹಾರಂಗಿ ಜಲಾಶಯ ಸೇರಿದಂತೆ ಜಿಲ್ಲೆಯಲ್ಲಿ ಕಾವೇರಿ ನದಿ ಹೂಳೆತ್ತುವ ಯೋಜನೆಗೆ 130 ಕೋಟಿ ರೂಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆ ವತಿಯಿಂದ ನಡೆದ ಸರಳ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಪಾಲ್ಗೊಂಡು ಮಾತನಾಡಿ, ಗುಜರಾತ್ ಸಬರಮತಿ ನದಿ ಅಭಿವೃದ್ಧಿ ಮಾದರಿಯಂತೆ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ಅಭಿವೃದ್ಧಿಗೆ ಯೋಜನೆ ರೂಪಿಸಬೇಕೆಂದು ಮನವಿ ಮಾಡಿದರು. ಕಾಮಗಾರಿ ನಿರ್ವಿಘ್ನವಾಗಿ ಮುಂದುವರೆದು ನದಿ ತಟದ ಜನರಲ್ಲಿ ನೆಮ್ಮದಿ ಮೂಡಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭ ಕಾವೇರಿ ಮಾತೆಗೆ ಶಾಸಕರು, ಸ್ವಾಮೀಜಿಗಳು ಮತ್ತು ಪ್ರಮುಖರು ಪೂಜೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಪ್ರಕೃತಿ ವಿಕೋಪಗಳು ನಡೆಯದಂತೆ ಪ್ರಾರ್ಥನೆ ಸಲ್ಲಿಸಿದರು.
ಕುಶಾಲನಗರದ ಪಿಆರ್ಸಿ ಕನ್ಸ್ಟ್ರಕ್ಷನ್ ಮಾಲೀಕ ಪುರುಷೋತ್ತಮ್ ರೈ ಅವರು ಕಾಮಗಾರಿ ಗುತ್ತಿಗೆ ಪಡೆದಿದ್ದು ಹಿಟಾಚಿ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ನದಿ ನಿರ್ವಹಣೆ ಕಾಮಗಾರಿ ಕೈಗೊಂಡಿದ್ದಾರೆ.
ಈ ಸಂದರ್ಭ ಜಿ.ಪಂ. ಸದಸ್ಯರಾದ ಕೆ.ಪಿ. ಚಂದ್ರಕಲಾ, ಮಂಜುಳಾ, ತಾಲೂಕು ತಹಶೀಲ್ದಾರ್ ಗೋವಿಂದರಾಜ್, ಪಪಂ ಮುಖ್ಯಾಧಿಕಾರಿ ಸುಜಯ್ಕುಮಾರ್, ಡಿವೈಎಸ್ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್, ಕಾವೇರಿ ನೀರಾವರಿ ನಿಗಮದ ಅಧಿಕಾರಿ ನಳಿನ, ಕುಶಾಲನಗರ ಪಟ್ಟಣ ಪಂಚಾಯ್ತಿ ಜನಪ್ರತಿನಿಧಿಗಳು, ಕಾವೇರಿ ನದಿ ಪ್ರವಾಹ ಸಂತಸ್ತರ ವೇದಿಕೆ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಗೌರವಾಧ್ಯಕ್ಷ ಎಂ.ಎಂ.ಚರಣ್, ಉಪಾಧ್ಯಕ್ಷ ತೋರೇರ ಉದಯಕುಮಾರ್, ಖಜಾಂಚಿ ಕೊಡಗನ ಹರ್ಷ, ಕಾರ್ಯದರ್ಶಿ ವರದ, ಬಿಜೆಪಿ ಪ್ರಮುಖರು, ಕುಶಾಲನಗರ ಪಟ್ಟಣದ 8 ಬಡಾವಣೆಗಳ ನದಿ ತಟದ ಪ್ರವಾಹ ಸಂತ್ರಸ್ತರು ಇದ್ದರು.