ಮಡಿಕೇರಿ, ಮೇ 11 : ಜಾಗತಿಕ ಕೊರೊನಾ ಸೋಂಕಿನ ಭೀತಿಯ ನಡುವೆ ದೇಶದಲ್ಲಿ ಎದುರಾಗಿರುವ ಸಂದಿಗ್ಧ ಪರಿಸ್ಥಿತಿಯಿಂದಾಗಿ ಕಳೆದ ಮಾರ್ಚ್ ಹಾಗೂ ಏಪ್ರಿಲ್ ಮಾಸದ ಸಂಬಳವು ಸಕಾಲದಲ್ಲಿ ಕೈ ಸೇರದೆ ವಿವಿಧ ಇಲಾಖೆಗಳ ಸರಕಾರಿ ನೌಕರರು ತೊಂದರೆಗೆ ಒಳಗಾಗಿದ್ದಾರೆ.ಕೊರೊನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ ಅನಿವಾರ್ಯ ಕೆಲಸಗಳಿಗೆ ಅಗತ್ಯ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಲು ಸರಕಾರ ಆದೇಶಿಸಿತ್ತು. ಅಲ್ಲದೆ, ಈ ಇಲಾಖೆಗಳಲ್ಲಿ ಇರುವಷ್ಟು ಉದ್ಯೋಗಿಗಳನ್ನು ದಿನ ಬಿಟ್ಟು ದಿನ ಸರದಿಯಲ್ಲಿ ಕಚೇರಿ ಕೆಲಸಕ್ಕೆ ನಿಯೋಜಿಸಿತ್ತು. ಇನ್ನೊಂದೆಡೆ ಬಹುತೇಕ ಇಲಾಖೆಗಳಲ್ಲಿ ಕಚೇರಿ ಕೆಲಸ ಸಿಬ್ಬಂದಿ ಹುದ್ದೆಗಳು ಅರ್ಧದಷ್ಟು ಮಾತ್ರವಿದ್ದು, ಸಾಕಷ್ಟು ಸ್ಥಾನಗಳು ಖಾಲಿ ಬಿದ್ದಿವೆ. ಹೀಗಾಗಿ ಬಹುತೇಕ ಕೆಲಸ ಕಾರ್ಯಗಳು ಈ ಕಠಿಣ ಪರಿಸ್ಥಿತಿಯಲ್ಲಿ ಇರುವವರಿಗೆ ಸವಾಲುಗಳನ್ನು ತಂದೊಡ್ಡಿದೆ.ತಾಂತ್ರಿಕ ತೊಡಕು : ಈ ಹಿಂದಿನ ವರ್ಷಗಳಲ್ಲಿ ಸರಕಾರದ ಬಹುತೇಕ ಇಲಾಖೆಗಳಿಗೆ ವಾರ್ಷಿಕ ವೇತನ ಇತ್ಯಾದಿಗಳನ್ನು ಮುಂಗಡ ಪತ್ರದೊಂದಿಗೆ ವರದಿ ಸಹಿತ ಮಂಜೂರುಗೊಳಿಸಿ, ಕಾಲ ಕಾಲಕ್ಕೆ ಹಣವನ್ನು ಬಿಡುಗಡೆಗೊಳಿಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಬದಲಾಗಿರುವ ‘ಕೆ-2’ ಕ್ರಮದಿಂದ ಸಾಕಷ್ಟು ತಾಂತ್ರಿಕ ತೊಂದರೆ ಕಾಣಿಸುತ್ತಿದೆ ಈ ನಿಯಮದಂತೆ ಪ್ರತಿಯೊಂದು ಸಂದರ್ಭ ಸರಕಾರದ ಹಣಕ್ಕೆ ಸೂಕ್ತ ದಾಖಲಾತಿಯ ಬಿಲ್ ಸಹಿತ ಮಂಜೂರಾತಿ ಪಡೆದು ಹಣ ಹೊಂದಿಕೊಳ್ಳಬೇಕಿದೆ.

ಅಲ್ಲದೆ ಹಿಂದೆಲ್ಲಾ ಆಯಾ ಜಿಲ್ಲೆಯ ಖಜಾನೆ ಮೂಲಕ ಈ ಹಣ ಲಭ್ಯವಿತ್ತು. ಈಗ ಬದಲಾದ ವ್ಯವಸ್ಥೆಯಲ್ಲಿ ಪ್ರತಿಯೊಂದು ಇಲಾಖೆಗೆ ಸಂಬಂಧಿಸಿದಂತೆ ಆಯಾ ಇಲಾಖಾ ಸಿಬ್ಬಂದಿಗಳಿಗೆ ಪೂರಕ ವೇತನವನ್ನು ಪ್ರತ್ಯೇಕಿಸಿ ಲೆಕ್ಕಪತ್ರ ವಿಭಾಗಕ್ಕೆ ಬಿಡುಗಡೆ ಮಾಡಲಾಗುತ್ತದೆ. ಆ ಹಣ ಕೈ ಸೇರಿದ ಬಳಿಕವಷ್ಟೇ ಲೆಕ್ಕಪತ್ರ ಪ್ರಮುಖರು, ಆಯಾ ಸಿಬ್ಬಂದಿಯ ಖಾತೆಗೆ ವರ್ಗಾಯಿಸಬೇಕಿದೆ.

ತಾಜಾ ಉದಾಹರಣೆ : ಉದಾಹರಣೆಗೆ ಕಳೆದ ಫೆಬ್ರವರಿ - ಮಾರ್ಚ್ ತಿಂಗಳ ಸರಕಾರಿ ನೌಕರರ ವೇತನ ಹಣ ತಾ. 20.4.2020ಕ್ಕೆ ಬಿಡುಗಡೆಗೊಂಡಿರುವ ಆದೇಶವಿದೆ. ಆ ಮೇರೆಗೆ ಸಂಬಂಧಿಸಿದ ಮೇಲಧಿಕಾರಿಗಳ ಜತೆಗೆ ವ್ಯವಹರಿಸಿ ಇಲಾಖಾವಾರು ಸಿಬ್ಬಂದಿಗೆ ಬಟವಾಡೆ ಮಾಡಲು ಮೇ ಮೊದಲ ವಾರವಷ್ಟೇ ಸಾಧ್ಯವಾಗಿದೆ. ಇಂತ ತಾಂತ್ರಿಕ ಕಾರಣದಿಂದ ಪ್ರತಿ ತಿಂಗಳ ವೇತನ ಬಟವಾಡೆ ವಿಳಂಬವಾಗಿದ್ದು, ರಾಜ್ಯಮಟ್ಟದಲ್ಲಿ ಕೊರೊನಾ ಸೋಂಕಿನಿಂದ ಕಚೇರಿ ಕೆಲಸಗಳಲ್ಲಿ ವ್ಯತ್ಯಾಸದೊಂದಿಗೆ ಈ ಸಮಸ್ಯೆ ಎದುರಾಗಿದೆ.

ಮುಖ್ಯವಾಗಿ ಕಂದಾಯ, ಆರೋಗ್ಯ, ಶಿಕ್ಷಣ ಇನ್ನಿತರ ಇಲಾಖೆಗಳಲ್ಲಿ ವೇತನ ವಿಳಂಬವಾಗಿದ್ದು, ಇಂಥ ತಾಂತ್ರಿಕ ತೊಂದರೆಗಳ ನಡುವೆಯೂ ಜಿಲ್ಲೆಯ ಎಲ್ಲ ಇಲಾಖೆಗಳ ಸರಕಾರಿ ನೌಕರರಿಗೆ ಕಳೆದ ಮಾರ್ಚ್ ಹಾಗೂ ಏಪ್ರಿಲ್ ಮಾಸದ ವೇತನವನ್ನು ಮೇ ಮೊದಲ ವಾರದಲ್ಲಿ ಒಟ್ಟಿಗೆ ಬಟವಾಡೆ ಮಾಡಲಾಗಿದೆ ಎಂದು ‘ಶಕ್ತಿ’ಗೆ ಮಾಹಿತಿ ಲಭಿಸಿದೆ.