ಮಡಿಕೇರಿ, ಮೇ 10: ಮಾರ್ಚ್... ಏಪ್ರಿಲ್... ಮೇ... ತಿಂಗಳು ಕೊಡಗು ಜಿಲ್ಲೆ ಬಹುಶಃ ವರ್ಷದ ಇನ್ನಿತರ ತಿಂಗಳುಗಳಿಗಿಂತ ಕ್ರಿಯಾಶೀಲವಾಗಿರುತ್ತದೆ... ಈ ಅವಧಿಯಲ್ಲಿ ತೋಟ ಕೆಲಸಗಳನ್ನು ನಿರ್ವಹಿಸುವುದರೊಂದಿಗೆ, ಮದುವೆ ಮತ್ತಿತರ ಶುಭ ಕಾರ್ಯಗಳು, ದೈವಿಕ ಕಾರ್ಯಕ್ರಮ, ಕ್ರೀಡಾ ಹಬ್ಬಗಳ ಕಲರವ... ಈ ರೀತಿಯಾಗಿ ಜಿಲ್ಲೆ ಚಟುವಟಿಕೆಗಳ ಕೇಂದ್ರವಾಗುವುದರೊಂದಿಗೆ ವ್ಯಾಪಾರ - ವಹಿವಾಟುಗಳು ‘ಬ್ಯುಸಿ’ಯಾಗಿರುತ್ತಿದ್ದವು... ಬಹುತೇಕ ಜಿಲ್ಲೆಯ ಎಲ್ಲಾ ಜನಾಂಗದವರು... ಜನತೆ ಈ ಸಂದರ್ಭ ಉತ್ಸಾಹಭರಿತರಾಗಿರುತ್ತಿದ್ದರು... ಅದರಲ್ಲೂ ಕೊಡವ ಜನಾಂಗದಲ್ಲಿ ಈ ಅವಧಿ ಒಂದಿಷ್ಟು... ಹೆಚ್ಚು ವಿಭಿನ್ನ... ಹಾಕಿ, ಕ್ರಿಕೆಟ್ ಹಬ್ಬದ ಸಂಭ್ರಮ... ವಿಶಿಷ್ಟವಾಗಿ ದಕ್ಷಿಣ ಕೊಡಗಿನಲ್ಲಿ ಕಂಡುಬರುವ ಬೋಡ್ನಮ್ಮೆ ದೇಶ-ವಿದೇಶಗಳಲ್ಲಿರುವವರು ಕುಟುಂಬ ಸಹಿತವಾಗಿ ತವರಿಗೆ ಆಗಮಿಸುವುದು, ಬಂಧು-ಮಿತ್ರರ ಮನೆಗಳಿಗೆ ಭೇಟಿ... ಕೌಟುಂಬಿಕ ಸಮ್ಮಿಲನಗಳು ಹೆಚ್ಚಾಗಿ ಕಂಡುಬರುತ್ತಿದ್ದವು...
ಎಲ್ಲೆಡೆ ಹೆಸರು ಮಾಡಿರುವ ಕೌಟುಂಬಿಕ ಹಾಕಿ ಉತ್ಸವ, ಕ್ರಿಕೆಟ್ ಉತ್ಸವದೊಂದಿಗೆ ಪ್ರಸಕ್ತ ವರ್ಷ ಕೇರ್ ಬಲಿ ಪೈಪೋಟಿ ಎಂಬ ಹೊಸ ಕ್ರೀಡಾಹಬ್ಬವೂ ಕೌಟುಂಬಿಕವಾಗಿ ನಡೆಯಲು ಸಿದ್ಧತೆ ನಡೆಯುತ್ತಿತ್ತು. ಇದರೊಂದಿಗೆ ಚೆಂಬೆಬೆಳ್ಳೂರು, ಕಾವಾಡಿ, ಬೆಕ್ಕೆಸೊಡ್ಲೂರು, ಬೆಸಗೂರು, ಬಿ.ಶೆಟ್ಟಿಗೇರಿ, ಐಮಂಗಲ, ಮಗ್ಗುಲ ಕಾವಾಡಿ, ದೇವಣಗೇರಿ, ಬಯಿಪಡ, ದೇವರಪುರ ಮತ್ತಿತರ (ದಕ್ಷಿಣ ಕೊಡಗಿನ ಹಲವೆಡೆ) ಕಡೆಗಳಲ್ಲಿ ಕ್ರೀಡಾ ಕಲರವದ ನಡುವೆಯೇ ಈ ಸಂಭ್ರಮದ ಬೋಡ್ನಮ್ಮೆ ಇದರೊಂದಿಗೆ ಮದುವೆ ಮತ್ತಿತರ ಅದ್ಧೂರಿಯ ಸಮಾರಂಭಗಳು ಸಹಜವಾಗಿರುತ್ತಿತ್ತು.
ಬಹುಶಃ ಈ ವೇಳೆಗೆ ಹಾಕಿ - ಕ್ರಿಕೆಟ್ ನಮ್ಮೆಗಳೂ ಕೊನೆಯ ಹಂತದಲ್ಲಿರುತ್ತಿತ್ತು. ಕಳೆದ ವರ್ಷ ಪ್ರಾಕೃತಿಕ ವಿಕೋಪ ಕ್ರೀಡಾ ಸಂಭ್ರಮಕ್ಕೆ ತಣ್ಣೀರೆರಚಿದ್ದರೆ, ಈ ಬಾರಿ ಮತ್ತೊಂದು ಕರಾಳತೆ ಎದುರಾಗಿ ಕ್ರೀಡೆಯೊಂದಿಗೆ ದೈವಿಕ - ಜನಪದೀಯ ಆಚರಣೆಗಳಿಗೂ ಅಡಚಣೆಯಾಗಿರುವದು 2020ರ ದುರಂತವಾಗಿದೆ. ಕೊರೊನಾ ಎಂಬ ಮಹಾಮಾರಿಯಿಂದಾಗಿ ಇವೆಲ್ಲವೂ ‘ಲಾಕ್ಡೌನ್’ ಆಗಿವೆ.
ಆದರೆ ಜನತೆ ಲಾಕ್ಡೌನ್ನ ನಿರ್ಬಂಧದಲ್ಲಿ ಮನೆಯಲ್ಲೇ ಇರುವಂತಾದರೂ ಮತ್ತೊಂದು ಆವಿಷ್ಕಾರ ಎಂಬಂತೆ ಈ ಬಾರಿ ಈ ಎಲ್ಲಾ ನೋವನ್ನು ಮರೆಸುವಂತೆ ‘ಕೊಡವ ಸಾಹಿತ್ಯ ನಮ್ಮೆ’ಯೊಂದು ಜನ-ಮನ ರಂಜಿಸುತ್ತಿದೆಯಲ್ಲದೆ ಹಳೆಯ ಪ್ರತಿಭೆಗಳ ಸಾಲಿಗೆ ಹೊಸಬರನ್ನು ಸೇರ್ಪಡೆಗೊಳಿಸುತ್ತಾ ಮುಂದುವರಿಯುತ್ತಿದೆ. ಈ ಸರಪಳಿಗೆ ಜನಮೆಚ್ಚುಗೆಯೂ ಅಧಿಕವಾಗುತ್ತಿರುವದು ಈಗಿನ ಬೆಳವಣಿಗೆ. ಮಾರ್ಚ್ ಅಂತ್ಯದಲ್ಲಿ ಲಾಕ್ಡೌನ್ ಘೋಷಣೆಯಾಗಿತ್ತು. ಈ ಸಂದರ್ಭವನ್ನು ‘ಸಾಹಿತ್ಯ ಚಂಞÉೂೀಲೆ’ ಎಂಬ ಚಿಂತನೆಯೊಂದಿಗೆ ಏಪ್ರಿಲ್ ಆರಂಭದಲ್ಲಿ ಬೆಂಗಳೂರು ಕೊಡವ ಸಮಾಜದ ಯೂತ್ ಕೌನ್ಸಿಲ್ನ ಅಧ್ಯಕ್ಷ ಚೋಕಂಡ ಸೂರಜ್ ಸೋಮಯ್ಯ ಹಾಗೂ ತಂಡದವರು ಪ್ರಾರಂಭಿಸಿದರು.
ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಈ ಸವಾಲಿನಂತೆ ತಮ್ಮ ಪರಿಚಯದೊಂದಿಗೆ, ಹಳೆಯ ಹಿರಿಯ ಸಾಹಿತಿಗಳ ಸಾಹಿತ್ಯವಾಚನ, ಸ್ವರಚಿತ ಕವನ, ಚುಟುಕು, ಜನಪದೀಯ ಆಚಾರ-ವಿಚಾರಗಳು, ಸಂಗೀತದ ಸವಿಯುಣಿಸುವ ಹಾಡುಗಳು ಇತ್ಯಾದಿ ಅಂಶಗಳ ಮೂಲಕ ಮತ್ತೆ ಹಲವರನ್ನು ನಾಮನಿರ್ದೇಶನ ಮಾಡುವ ಮೂಲಕ ಜನಾಂಗದ ಎಲ್ಲರನ್ನೂ, ಎಲ್ಲವನ್ನೂ ಬೆಸೆಯುವಂತೆ ಮಾಡುತ್ತಿದೆ ಈ ‘ಸಾಹಿತ್ಯನಮ್ಮೆ’ ಎಂಬ ಹೊಸ ಪರಿಕಲ್ಪನೆ.
ಇದರಲ್ಲಿ ಹಿರಿಯ - ಕಿರಿಯ ಸಾಹಿತಿಗಳು, ವಯೋವೃದ್ಧರು, ಪುಟ್ಟ ಮಕ್ಕಳು, ಕೊಡವ ಸಮಾಜ ಸಂಘಟನೆಗಳ ಪ್ರಮುಖರು, ವೈದ್ಯರು, ಸಿನಿಮಾರಂಗದವರು, ವಕೀಲರು, ಪತ್ರಕರ್ತರು, ಉಪನ್ಯಾಸಕರು ಈ ರೀತಿಯಾಗಿ ವಿವಿಧ ರಂಗದಲ್ಲಿರುವವರು ತೊಡಗಿಸಿಕೊಳ್ಳುತ್ತಿರುವದು ವಿಶೇಷವಾಗಿದೆ. ಜಿಲ್ಲೆಯ ವಿವಿಧ ಪೇಟೆ - ಪಟ್ಟಣಗಳು, ಕುಗ್ರಾಮಗಳ ಜನತೆ ದೇಶ - ವಿದೇಶಗಳಲ್ಲಿರುವವರೂ ಭಾಗಿಗಳಾಗಿದ್ದಾರೆ. ಅದೆಷ್ಟೋ ಮಂದಿ ತೆರೆಮರೆಯಲ್ಲಿದ್ದ ಪ್ರತಿಭೆಗಳು ಬೆಳಕಿಗೆ ಬಂದರೆ, ಪೆಟ್ಟಿಗೆ, ಬೀರುವಿನಲ್ಲಿ ದೂಳು ಹಿಡಿಯುತ್ತಿದ್ದ ಪುಸ್ತಕಗಳು, ಕ್ಯಾಸೆಟ್, ಗ್ರಂಥಗಳು ಹೊರ ಬಂದಿವೆ. ಮನೆಯಲ್ಲೇ ಇರಬೇಕಾದ ಅನಿವಾರ್ಯತೆಯ ನಡುವೆ ಇದು ಒಂದು ರೀತಿಯಲ್ಲಿ ಉತ್ಸಾಹ ಹೆಚ್ಚಿಸುತ್ತಿದೆಯಲ್ಲದೆ ಮತ್ತಷ್ಟು ಮುಂದುವರಿಯುತ್ತಿದೆ.
ಪರಸ್ಪರ ನಾಮನಿರ್ದೇಶನದಿಂದಾಗಿ ಕಿರಿಯರು ಹಿರಿಯರ ಸಲಹೆ ಮಾರ್ಗದರ್ಶನ ಪಡೆಯುವದು, ಹೊಸ ಪರಿಕಲ್ಪನೆಗಳು, ಇಂತಹ ವಿಚಾರಗಳಿಂದಾಗಿ ದೂರ - ದೂರದಲ್ಲಿ ಇರುತ್ತಿದ್ದ ಸಂಬಂಧಗಳೂ ಬೆಸೆಯುತ್ತಿವೆ.
ಈಗಾಗಲೇ ಈ ಸವಾಲಿನ 1500ಕ್ಕೂ ವೀಡಿಯೋಗಳು ಬಂದಿದ್ದರೆ, ಈ ಮೂಲಕ ಬೆಳಕಿಗೆ ಬಾರದಂತಿದ್ದ ಹಲವರ ಪ್ರತಿಭೆಗಳು ಅಚ್ಚರಿ ಮೂಡಿಸುವಂತೆ ಭಾಸವಾಗುತ್ತಿದೆ. ಇವರು ನಾಮನಿರ್ದೇಶನ ಮಾಡಿದವರಿಂದ ಇನ್ನಷ್ಟು ವಿಚಾರಗಳು ಬರಬೇಕಿದೆ. ವಿವಿಧ ಕುಟುಂಬಗಳ ಸದಸ್ಯರ ಪಾಲ್ಗೊಳ್ಳುವಿಕೆಯಿಂದಾಗಿ ಆಯಾ ಕುಟುಂಬದವರು ಅವರ ಬಂಧು-ಮಿತ್ರರು ತಮ್ಮವರ ಪ್ರತಿಭೆಯನ್ನು ಗಮನಿಸುವುದರಿಂದ ಪ್ರೌಢಿಮೆಯೂ ಹೆಚ್ಚಾಗುತ್ತಿದೆ.
ಇವುಗಳ ಸಮಗ್ರ ದಾಖಲೀಕರಣದ ಉದ್ದೇಶವನ್ನೂ ಹೊಂದಲಾಗಿದೆ ಎಂದು ಇದನ್ನು ಪ್ರಾರಂಭಿಸಿದ ತಂಡದವರು ಉತ್ಸಾಹದಿಂದ ಹೇಳುತ್ತಿದ್ದಾರೆ. ಈ ಸಾಹಿತ್ಯ ಸವಾಲಿನ ಕಾರ್ಯಕ್ರಮ ಇನ್ನೂ ಹಲವಷ್ಟು ದಿನಗಳು ಮುಂದುವರಿಯಲಿದ್ದು, ಎಲ್ಲವನ್ನೂ ಭವಿಷ್ಯದ ಚಿಂತನೆಯಿಂದ ಸಮರ್ಪಕ ದಾಖಲೆಯಾಗಿ ಸಿದ್ಧಪಡಿಸಲಾಗುವುದು ಎಂದು ಸೂರಜ್ ಸೋಮಯ್ಯ ಹಾಗೂ ತಂಡದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- ಕಾಯಪಂಡ ಶಶಿ ಸೋಮಯ್ಯ