ಹಲೋ ಫ್ರೆಂಡ್ಸ್... ನನ್ನಲ್ಲಿರುವ ರೋಗಿ ಯೋರ್ವನಲ್ಲಿ ವಿಚಿತ್ರ ಸೋಂಕು ಕಾಣಿಸಿ ಕೊಂಡಿದೆ. ಸಾರ್ಸ್ ಬಂದಿತ್ತಲ್ಲಾ ಅದೇ ರೀತಿಯ ವೈರಸ್ ಎಂಬ ಸಂಶಯವಾಗುತ್ತಿದೆ, ಎಲ್ರೂ ಎಚ್ಚರವಹಿಸಿಕೊಳ್ಳಿ. ಹೀಗೊಂದು ಸಂದೇಶವನ್ನು ಡಿಸೆಂಬರ್ ಎರಡನೇ ವಾರದಲ್ಲಿ ಚೀನಾದಲ್ಲಿನ ವೈದ್ಯರ ವಾಟ್ಸಪ್ ಗ್ರೂಪ್‍ನಲ್ಲಿ ಹಾಕಿದವರ ಹೆಸರು ಡಾ. ಲೀ ವೆನ್‍ಲಿಯಾಂಗ್.
ಈ ಸಂದೇಶ ಗ್ರೂಪ್‍ನಲ್ಲಿ ಬಂದು...ದಿನವಾದರೂ ಯಾರೂ ಗಂಭೀರವಾಗಿ ಈ ಬಗ್ಗೆ ಚರ್ಚಿಸಲೇ ಇಲ್ಲ. ಮತ್ತೆ ವೆನ್ ಲಿಯಾಂಗ್ ವೈದ್ಯರನ್ನು ಎಚ್ಚರಿಸಿದ. ಸಾರ್ಸ್ ವೈರಸ್ ಮತ್ತೆ ಬಂದಿದೆಯಾ ಅಂಥ ಪ್ರಶ್ನಿಸಿದ. ಕಣ್ಣಿನ ವೈದ್ಯ ವೈರಸ್ ಬಗ್ಗೆ ಗಾಬರಿ ಪಡುತ್ತಿದ್ದಾನೆ ಎಂದು ಪಾರ್ಟಿಯಲ್ಲಿ ಮಜಾ ಮಾಡುತ್ತಿದ್ದ ವೈದ್ಯರು ತಮಾಷೆ ಮಾಡಿದ್ದರು. ವೆನ್ ಲಿಯಾಂಗ್ ಮಾತ್ರ ಚಿಂತಾಕ್ರಾಂತನಾದ. ಮನೆಯಲ್ಲಿ ಪತ್ನಿಯೊಂದಿಗೂ ತನ್ನ ಗಾಬರಿ ತೋಡಿಕೊಂಡ. ದೇಶ ಯಾವುದಾದರೇನು, ಎಲ್ಲಾ ಪತ್ನಿಯರಂತೆ ವೆನ್ ಲಿಯಾಂಗ್ ಪತ್ನಿ ಕೂಡ ಹೇಳಿದಳು. ತೆಪ್ಪಗಿರು, ಇಲ್ಲದ ಚಿಂತೆ ತಲೆಗೆ ಹಾಕಿಕೊಂಡು ನೆಮ್ಮದಿ ಹಾಳು ಮಾಡಬೇಡ. ನೆಮ್ಮದಿ ಹಾಳಾಗೋದಾ.? ಬರೀ ಚೀನಾದ್ದು ಮಾತ್ರವಲ್ಲ, ಇಡೀ ಜಗತ್ತಿನ ನೆಮ್ಮದಿಯನ್ನೇ ಕೊರೊನಾ ಎಂಬ ಆ ವೈರಸ್ ಕಸಿದುಕೊಂಡು ಬಿಟ್ಟಿದೆ. ಈ ರೀತಿ ಮೊತ್ತ ಮೊದಲು ಸಂದೇಶ ಹಾಕಿದ ಡಾ. ವೆನ್ ಲಿಯಾಂಗ್ ಎಲ್ಲಿದ್ದಾನೆ ಎಂದು ಕೇಳಿದರೆ. ವೆನ್ ಲಿಯಾಂಗ್ ಈಗ ಪುಷ್ಪಗಳ ರಾಶಿಯ ನಡುವೇ ಸಮಾಧಿಯಾಗಿ ಹೋಗಿದ್ದಾನೆ. ಏನಾಗಿತ್ತು ವೆನ್ ಲಿಯಾಂಗ್‍ಗೆ?
ಯಾವ ವೈರಸ್ ಬಂದಿದೆ ಎಂದು ವೆನ್ ಲಿಯಾಂಗ್ ಚಿಂತೆಗೀಡಾಗಿದ್ದನೋ ಅದೇ ವೈರಸ್ ಆ ನೇತ್ರ ವೈದ್ಯನನ್ನು ಬಲಿತೆಗೆದು ಕೊಂಡು ವ್ಯಂಗ್ಯದ ಅಟ್ಟಹಾಸ ಬೀರಿದೆ. ಲೀ ಎಂಬ ಕುಟುಂಬಕ್ಕೆ ಸೇರಿದ ವೆನ್ ಲಿಯಾಂಗ್ ಬಹಳ ಪ್ರತಿಭಾವಂತ. ವಿಶ್ವವಿದ್ಯಾನಿಲಯದಲ್ಲಿಯೇ ಬಹಳ ಬುದ್ದಿವಂತ ಎನಿಸಿಕೊಂಡಿದ್ದ ವಿದ್ಯಾರ್ಥಿ ನೇತ್ರ ತಜ್ಞನಾದ ವೆನ್ ಲಿಯಾಂಗ್ ಚೀನಾದ ವುಹಾನ್ ಮಹಾನಗರದ ಕೇಂದ್ರೀಯ ಆಸ್ಪತ್ರೆಯಲ್ಲಿ ಉದ್ಯೋಗಗಿಟ್ಟಿಸಿದ್ದ. ಡಾ. ಲೀ ವೆನ್ ಲಿಯಾಂಗ್ ತಮಗೆ ಚಿಕಿತ್ಸೆ ಕೊಡಬೇಕೆಂದೇ ಆತನ ಬಳಿ ನೂರಾರು ರೋಗಿಗಳು ಬರುತ್ತಿದ್ದರು. ಡಿಸೆಂಬರ್ ಎರಡನೇ ವಾರದ ಅದೊಂದು ದಿನ ತನ್ನಲ್ಲಿಗೆ ಬಂದ ರೋಗಿಯ ವೈದ್ಯಕೀಯ ಪರೀಕ್ಷೆ ಗಮನಿಸುತ್ತಿದ್ದ ಡಾ. ವೆನ್ ಲಿಯಾಂಗ್‍ಗೆ ಈತನಲ್ಲಿ ಹೊಸ ರೀತಿಯ ವೈರಾಣು ಇರುವ ಸಂಶಯ ಬಂತು. ಅದನ್ನೇ ವೈದ್ಯರ ಗ್ರೂಪ್ ನಲ್ಲಿ ಹಂಚಿಕೊಂಡ. ಅಲ್ಲಿಂದ ನೀರಸ ಪ್ರತಿಕ್ರಿಯೆ ಬಂದಾಗ ಈ ಬಗ್ಗೆ ವುಹಾನ್ ಸರ್ಕಾರಿ ಆರೋಗ್ಯ ಗ್ರೂಪ್‍ನಲ್ಲಿಯೂ ತನ್ನ ಸಂಶಯ ಹಂಚಿಕೊಂಡ. ವುಹಾನ್‍ನ ಮೀನು ಮಾರ್ಕೆಟ್‍ನಿಂದ ಬಂದ ರೋಗಿಯಲ್ಲಿ ಈ ವೈರಾಣು ಕಂಡು ಬಂದಿದೆ. ಏನು ಮಾಡಬೇಕೆಂಬ ಪ್ರಶ್ನೆಗೆ ವೆನ್ ಲಿಯಾಂಗ್ ಉತ್ತರ ದೊರಕುತ್ತೆ ಎಂಬ ನಿರೀಕ್ಷೆಯಲ್ಲಿದ್ದ. ಉತ್ತರದ ಬದಲಿಗೆ ವೆನ್ ಲಿಯಾಂಗ್ ಬಳಿಗೆ ಬಂದವರು ವುಹಾನ್ ನಗರದ ಪೆÇಲೀಸರು. ಸುಮ್ಮಸುಮ್ಮನೆ ಹೊಸ ವೈರಸ್ ಇದೆ ಎಂದು ವದಂತಿ ಹಬ್ಬಿಸುತ್ತಿದ್ದೀಯಾ, ಚೀನಾ ಸರ್ಕಾರ ನಿನ್ನ ಪೆÇಳ್ಳು ವದಂತಿಗಳ ಬಗ್ಗೆ ಕ್ರಮಕೈಗೊಳ್ಳುತ್ತಿದೆ. ಮತ್ತೆ ಇಂಥ ಪ್ರಯತ್ನ ಮಾಡಿದರೆ ಜೈಲಿಗೆ ಹಾಕಿಬಿಡುತ್ತೇವೆ. ಹೊಸ ವೈರಸ್ ಅಂತೆ. ಹೊಸ ವೈರಸ್, ಜನರನ್ನು ನಿನ್ನ ಸುಳ್ಳುಗಳಿಂದ ಗಾಬರಿಗೊಳಿಸಬೇಡ ಎಂದು ಪೆÇಲೀಸರು ಎಚ್ಚರಿಸಿದರು. ಮಾತ್ರವಲ್ಲ, ಪೆÇಲೀಸ್ ಠಾಣೆಗೆ ಕರೆದೊಯ್ದು ವೆನ್ ಲಿಯಾಂಗ್‍ನಿಂದ ಇನ್ನೆಂದೂ ಇಂಥ ಸುದ್ದಿಗಳನ್ನು ಯಾರಿಗೂ ಹಂಚುವುದಿಲ್ಲ ಎಂಬ ಮುಚ್ಚಳಿಕೆಯನ್ನೂ ಬರೆದುಕೊಂಡರು ಪೆÇಲೀಸ್ ಠಾಣೆಯಿಂದ ಮರಳಿ ಆಸ್ಪತ್ರೆಯ ಕರ್ತವ್ಯಕ್ಕೆ ಬಂದಾಗ ಡಾ. ವೆನ್ ಲಿಯಾಂಗ್ ಮುಖದಲ್ಲಿ ತೀವ್ರ ವಿಷಾದ ಮಡುಗಟ್ಟಿತ್ತಂತೆ. ಮನೆಯಲ್ಲಿಯೂ ಚಿಂತಾಕ್ರಾಂತನಾಗಿ ಕುಳಿತುಬಿಟ್ಟಿದ್ದನಂತೆ. ಖಂಡಿತಾ ಇದೊಂದು ವಿಚಿತ್ರ ವೈರಾಣು ಎಂದು ಖಚಿತವಾಗಿ ನಂಬಿದ್ದ ಡಾ. ವೆನ್ ಲಿಯಾಂಗ್ ಸರ್ಕಾರ ತಾನು ಹೇಳಿದರೂ ಎಚ್ಚತ್ತುಕೊಳ್ಳದ ಬಗ್ಗೆ ನೋವುಂಡಿದ್ದ. 33 ವರ್ಷದ ಕಣ್ಣಿನ ವೈದ್ಯ ಎಂಥ ಸುಳ್ಳು ಸುದ್ದಿ ಹಬ್ಬಿಸಿದ್ದಾನೆ ಎಂದು ನಿರ್ಲಕ್ಷ್ಯ ತೋರಿದ್ದ ಚೀನಾ ಸರ್ಕಾರ ಆಗಲೇ ಎಚ್ಚೆತ್ತುಕೊಂಡು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಕೈಗೊಂಡಿದ್ದೇ ಆದಲ್ಲಿ ಖಂಡಿತಾ ಇಡೀ ಜಗತ್ತು ಕೋವಿಡ್-19 ಎಂಬ ಹೊಸ ವೈರಸ್‍ಗೆ ಈ ರೀತಿ ನಲುಗುವುದನ್ನು ತಪ್ಪಿಸಬಹುದಿತ್ತು ಎಂದು ಈಗ ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ. ವುಹಾನ್ ಕೇಂದ್ರ ಆಸ್ಪತ್ರೆಯಲ್ಲಿ 7 ಮಂದಿ ಜ್ವರದಿಂದ ನಲುಗುತ್ತಿದ್ದವರಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ವೆನ್ ಲಿಯಾಂಗ್‍ಗೆ ಜನವರಿ 8 ರಂದು ವಿಪರೀತ ಕೆಮ್ಮು, ಮೈಕೈ ನೋವಿನ ಲಕ್ಷಣ ಕಂಡುಬಂತು. ಹಿರಿಯ ವೈದ್ಯರು ವೆಂಗ್ಲಿಂಗ್‍ನನ್ನು ಪರೀಕ್ಷಿಸಿ ಜ್ವರಕ್ಕೆ ನೀಡುವ ಮಾತ್ರೆ ನೀಡಿದರು. ಆದರೆ 10 ರಂದು ಕೆಮ್ಮು ಮತ್ತಷ್ಟು ವಿಪರೀತವಾದಾಗ ವೆನ್ ಲಿಯಾಂಗ್ ಗಾಬರಿಗೊಂಡ. ಜನವರಿ 12 ರಂದು ತಾನು ಕರ್ತವ್ಯ ಸಲ್ಲಿಸುತ್ತಿದ್ದ ಆಸ್ಪತ್ರೆಯಲ್ಲಿಯೇ ದಾಖಲಾದ. ತಾವು ಔಷಧಿ ನೀಡಿದರೂ ಸ್ಪಂದಿಸದ ಕೆಮ್ಮು ಇದೇನು ಎಂದು ಸಹ ವೈದ್ಯರು ಕೂಡ ಚಿಂತೆ ಶುರುವಿಟ್ಟುಕೊಂಡರು. ಜನವರಿ 30 ರಂದು ವೆನ್ ಲಿಯಾಂಗ್‍ಗೆ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷಾ ವರದಿಯಿಂದ ದೃಢವಾಯಿತು. ಡಾ. ವೆನ್ ಲಿಯಾಂಗ್‍ನನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಹೀಗೇ ಹೋಗುವ ಮುನ್ನ ವೆನ್ ಲಿಯಾಂಗ್ ತನ್ನ ಸಹೋದ್ಯೋಗಿಗಳಿಗೆ ಸಂದೇಶ ರವಾನಿಸಿದ್ದ.
ಹಾಯ್ ಫ್ರೆಂಡ್ಸ್... ಎಲ್ಲರೂ ಹುಷಾರು, ನಾನು ಗುಣಮುಖನಾಗಿ ಮತ್ತೆ ಬಂದಾಗ ಎಲ್ಲರೂ ಸೇರಿ ಹೊಸ ವೈರಸ್ ವಿರುದ್ಧ ಹೋರಾಡೋಣ ಮನುಕುಲಕ್ಕೆ ವ್ಯಾಪಿಸದಂತೆ ಕಾಪಾಡೋಣ. ಅದೇ ಡಾ. ವೆನ್ ಲಿಯಾಂಗ್‍ನ ಕೊನೇ ಸಂದೇಶವಾಯಿತು. ಫೆ. 5 ರಂದು ತೀವ್ರ ಉಸಿರಾಟದ ಸಮಸ್ಯೆ ಎದುರಿಸಿದ ವೆನ್ ಲಿಯಾಂಗ್ ಫೆ. 7 ರಂದು ಕೊನೆಯುಸಿರೆಳೆದ.
ಹೊಸದ್ದೊಂದು ವೈರಸ್ ಕಾಣಿಸಿಕೊಂಡಿದೆ ಎಂದು ಮೊತ್ತ ಮೊದಲ ಬಾರಿಗೆ ಎಚ್ಚರಿಕೆ ನೀಡಿದಾತನಿಗೇ ನೋಟೀಸ್ ಕೊಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡ ಎಂದು ಎಚ್ಚರಿಸಿದ್ದ ಚೀನಾ ಸರ್ಕಾರಕ್ಕೆ ವೆನ್ ಲಿಯಾಂಗ್ ಸಾವನ್ನು ಒಪ್ಪಿಕೊಳ್ಳುವುದೇ ಮುಜುಗರದ ವಿಚಾರವಾಗಿತ್ತು. ಆ ವೇಳೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಜನರು ಹಿಗ್ಗಾಮುಗ್ಗಾ ಚೀನಾ ಸರ್ಕಾರದ ಮೇಲೆ ಟೀಕಾಪ್ರಹಾರ ಪ್ರಾರಂಭಿಸಿದರು. ಸರ್ಕಾರವೇ ಬೆಚ್ಚಿಬಿತ್ತು. ಕೊನೆಗೆ, ವೆನ್ ಲಿಯಾಂಗ್ ಮನೆಗೆ ತೆರಳಿ ಆತನ ಕುಟುಂಬಸ್ಥರಲ್ಲಿ ತನ್ನ ತಪ್ಪಿಗಾಗಿ ಸರ್ಕಾರದ ಪ್ರತಿನಿಧಿಗಳು ಕ್ಷಮೆ ಕೋರಿದರು. ಚೀನಾದ ಹುತಾತ್ಮ ವ್ಯಕ್ತಿಗಳಲ್ಲಿ ಡಾ. ವೆನ್ ಲಿಯಾಂಗ್ ಕೂಡ ಒಬ್ಬರು ಎಂದು ಹುತಾತ್ಮ ಪಟ್ಟವನ್ನು ವೆನ್ ಲಿಯಾಂಗ್‍ಗೆ ಚೀನಾ ಸರ್ಕಾರ ನೀಡಿತ್ತು.
ಹೀಗಿದ್ದರೂ ಲಾಕ್‍ಡೌನ್ ದಿನಗಳಲ್ಲಿ ವುಹಾನ್ ಸೇರಿದಂತೆ ಚೀನಾ ಮಾತ್ರವಲ್ಲ, ಬಹುತೇಕ ದೇಶಗಳಿಂದ ಮನೆಯಲ್ಲಿಯೇ ಉಳಿದ ನಾಗರಿಕರು ವೆನ್ ಲಿಯಾಂಗ್ ಸಾವಿಗೆ ಕಣ್ಣೀರು ಮಿಡಿದರು. ಚೀನಾ ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕಿದರು. ಚೀನಾದ ಕಮ್ಯೂನಿಸ್ಟ್ ಸರ್ಕಾರ ವಿಶ್ವವ್ಯಾಪಿಯಾಗಿ ಖಂಡನೆಗೊಳಗಾಯಿತು. ಇದೀಗ ವುಹಾನ್ ನಗರದಲ್ಲಿ ಡಾ. ವೆನ್ ಲಿಯಾಂಗ್ ಸಮಾಧಿಗೆ ಸಾವಿರಾರು ಜನ ಪುಪ್ಪನಮನ ಸಲ್ಲಿಸುತ್ತಿದ್ದಾರೆ. ಹುತಾತ್ಮ ವೈದ್ಯನೇ ಮತ್ತೆ ವುಹಾನ್‍ನಲ್ಲಿಯೇ ಹುಟ್ಟಿ ಬಾ ಎನ್ನುತ್ತಿದ್ದಾರೆ. ಜಗತ್ತಿನಾದ್ಯಂತಲಿನ ಜನ ಈತನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ತನಗೆ ಸೋಂಕು ತಗುಲಿದೆ ಎಂದು ಗೊತ್ತಾದ ಕೂಡಲೇ ಡಾ. ವೆನ್ ಲಿಯಾಂಗ್ ಮನೆಯಿಂದ ವಾಸಸ್ಥಳವನ್ನು ಲಾಡ್ಜ್ ಒಂದಕ್ಕೆ ಬದಲಿಸಿಕೊಂಡ. ತನಗೆ ಹಬ್ಬಿದ ಸೋಂಕು ಮನೆಯವರಿಗೂ ತಗುಲಬಾರದು ಎಂಬ ದೂರಾಲೋಚನೆ ಆತನದ್ದಾಗಿತ್ತು. ಆದರೆ, ಆತನ ತಂದೆಗೂ ಸೋಂಕು ಅದಾಗಲೇ ತಗುಲಿತ್ತು. ಕಳೆದ ವಾರವಷ್ಟೇ ಡಾಕ್ಟರ್ ತಂದೆ ಗುಣಮುಖರಾಗಿ ಮಗನ ಸಮಾಧಿಗೆ ಪುಪ್ಪನಮನ ಸಲ್ಲಿಸುವಂತಾಯಿತು. ಅದರಂತೆ, ವೆನ್ ಲಿಯಾಂಗ್ ತನ್ನ ಪತ್ನಿಯನ್ನು ಅತಿಯಾದ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಡಾ. ವೆನ್ ಲಿಯಾಂಗ್ ಸಾಯುವಾಗ ಆಕೆ ತುಂಬು ಗರ್ಭಿಣಿಯಾಗಿದ್ದಳು.
ಕೊನೇ ಹನಿ.
ತನ್ನ ಗೆಳೆಯರಲ್ಲಿ ಡಾ. ವೆನ್ ಲಿಯಾಂಗ್ ಹೇಳಿದ್ದನಂತೆ. ಹೊಸದ್ದಾದ ಅಪಾಯಕಾರಿ ವೈರಸ್ ಇದೆ ಎಂಬುದು ನನ್ನ ಅಂತರಾತ್ಮಕ್ಕೆ ಖಚಿತವಾಗಿದೆ. ಈ ಸತ್ಯವನ್ನು ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ. ಇದಕ್ಕೆ ಬೇಸರವಿಲ್ಲ. ಸಮಾಜ ಮೌನವಾಗಿರುವಾಗ ನಾನು ಸತ್ಯ ಹೇಳಿದ್ದೇನೆಂದು ಈ ಜನರಿಗೆ ತಿಳಿಯುತ್ತದೆ. ಎಷ್ಟೋಂದು ನಿಜ... ಹೊಸ ವೈರಾಣು ಕಂಡಂತಿದೆ. ಕೂಡಲೇ ಎಚ್ಚೆತ್ತುಕೊಂಡು ಜಾಗರೂಕರಾಗಿ ಔಷಧಿ ಕಂಡುಹಿಡಿಯಿರಿ... ಸೋಂಕು ಹಬ್ಬದಂತೆ ಎಲ್ಲಾ ರೀತಿಯ ಮುಂಜಾಗ್ರತೆ ವಹಿಸಿ ಎಂದು ಮೊಟ್ಟ ಮೊದಲು ಹೇಳಿದ್ದ ಡಾ. ವೆನ್ ಲಿಯಾಂಗ್ ನೀಡಿದ್ದ ಈ ಎಚ್ಚರಿಕೆಯನ್ನೇ ಉಪೇಕ್ಷೆ ಮಾಡಿದ್ದ ಚೀನಾ ಸರ್ಕಾರದ ನಿರ್ಲಕ್ಷವೇ ಇಡೀ ಜಗತ್ತಿಗೇ ಕೊರೊನಾ ಸೋಂಕು ಹರಡುವಂತಾಯಿತು. ಲಾಕ್‍ಡೌನ್ ಹೆಸರಲ್ಲಿ ಇಡೀ ವಿಶ್ವವೇ ಎಲ್ಲಾ ಚಟುವಟಿಕೆ ನಿಲ್ಲಿಸಿ, ಮೌನವಾಗಿದೆ. ಡಾ. ವೆನ್ ಲಿಯಾಂಗ್ ಹೇಳಿದ ಸತ್ಯ ವಾಕ್ಯ ಈಗ ಸಮಾಜಕ್ಕೆ ತಿಳಿಯುತ್ತಿದೆ.! ಮೌನವಾದ ಈ ಜಗತ್ತಿನಲ್ಲಿ ಡಾ. ವೆನ್ ಲಿಯಾಂಗ್‍ನ ಎಚ್ಚರಿಕೆಯ ನುಡಿ ಮಾರ್ಧನಿಸುತ್ತಿದೆ.