ಮಡಿಕೇರಿ, ಮೇ 10: ಸ್ಥಳೀಯ ಸರಕಾರ ಎಂದೇ ಪರಿಗಣಿತವಾಗಿರುವ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಅಧಿಕಾರಾವಧಿ ಇದೀಗ ಬಹುತೇಕ ಪೂರ್ಣಗೊಳ್ಳುವತ್ತ ಬಂದು ನಿಂತಿದೆ.

ಕಳೆದ ಐದು ವರ್ಷಗಳ ಹಿಂದೆ ಮೇ 15ಕ್ಕೆ ಗ್ರಾ.ಪಂ.ಗಳಿಗೆ ಚುನಾವಣೆ ನಡೆದಿದ್ದು, ಜೂನ್-ಜುಲೈ ತಿಂಗಳಿನಲ್ಲಿ ಅಧ್ಯಕ್ಷರು-ಉಪಾಧ್ಯಕ್ಷರುಗಳ ಆಯ್ಕೆ ಪ್ರಕ್ರಿಯೆಯೊಂದಿಗೆ ಗ್ರಾ.ಪಂ.ಗಳು ಅಧಿಕಾರಕ್ಕೆ ಬಂದಿದ್ದವು. ಇದೀಗ ಮೇ 10 ಪೂರ್ಣಗೊಂಡಿದ್ದು, ಈ ಹಿಂದೆ ಚುನಾವಣೆ ನಡೆದ ದಿನಾಂಕ ಸಮೀಪಿಸುತ್ತಿದೆ. ಆದರೆ ಇಲ್ಲಿ ಬಹುತೇಕರಿಗೆ ಚುನಾವಣೆ ನಡೆದ ಸಂದರ್ಭದಿಂದ ಐದು ವರ್ಷಗಳ ಅಧಿಕಾರಾವಧಿಯೇ ಅಥವಾ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಅಂತಿಮದ ಬಳಿಕದಿಂದ ಐದು ವರ್ಷಗಳ ಅವಧಿಯೇ ಎಂಬ ಬಗ್ಗೆ ಸೂಕ್ತ ಅರಿವು ಇಲ್ಲ. ಇದರಿಂದಾಗಿ ಇದು ಒಂದು ರೀತಿಯಲ್ಲಿ ಅನಿಶ್ಚಿತವಾಗಿದೆ. ಪ್ರಸ್ತುತ ರಾಜ್ಯದಲ್ಲಿ ಕೊರೊನಾ ಆತಂಕಕಾರಿಯಾಗಿ ತನ್ನ ಕರಾಳ ಹಸ್ತವನ್ನು ಚಾಚುತ್ತಿದ್ದು, ಗ್ರಾ.ಪಂ.ಗಳ ಚುನಾವಣೆಗೆ ಸಂಬಂಧಿಸಿದಂತೆ ಸದ್ಯಕ್ಕಂತೂ ಯಾವುದೇ ತೀರ್ಮಾನಕೈಗೊಳ್ಳುವ ಸಾಧ್ಯತೆಯೇ ಇಲ್ಲವೆನ್ನಬಹುದಾಗಿದೆ. ಅಷ್ಟಕ್ಕೂ ಈ ಬಗ್ಗೆ ರಾಜ್ಯ ಸರಕಾರದಿಂದಾಗಲಿ, ಪಂಚಾಯತ್ ರಾಜ್ ಇಲಾಖೆಯಿಂದಾಗಲಿ ಯಾವುದೇ ಸೂಚನೆಗಳು-ಸ್ಪಷ್ಟತೆಗಳು ಹೊರ ಬಿದ್ದಿಲ್ಲ. ಈಗಿನ ಸನ್ನಿವೇಶದಲ್ಲಿ ಕೊರೊನಾ ನಿಯಂತ್ರಣವೇ ಹರಸಾಹಸವಾಗಿ ಪರಿಣಮಿಸುತ್ತಿದೆ. ಕೆಲವು ಸಮಯಗಳ ಹಿಂದೆ ಗ್ರಾ.ಪಂ.ಗಳ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ತಯಾರಿಕೆಗೆ ಸೂಚನೆ ಬಂದಿತ್ತಾದರೂ ಈ ಪ್ರಕ್ರಿಯೆಯ ಸಂದರ್ಭದ ನಡುವೆ ಕೊರೊನಾ ಅಟ್ಟಹಾಸ ಎದುರಾದ ಹಿನ್ನೆಲೆಯಲ್ಲಿ ಇದೂ ಕೂಡ ಆರಂಭದಲ್ಲೇ ಸ್ಥಗಿತಗೊಂಡಂತಾಗಿದೆ.

ಕೊಡಗು ಜಿಲ್ಲೆಯಲ್ಲಿ ಒಟ್ಟು 104 ಗ್ರಾ.ಪಂ.ಗಳಿದ್ದು, ಈ ಪೈಕಿ ಕೆಲವೊಂದನ್ನು ಹೊರತುಪಡಿಸಿ ಬಹುತೇಕ ಗ್ರಾ.ಪಂ.ಗಳ ಅಧಿಕಾರಾವಧಿ ಸದ್ಯದಲ್ಲೇ ಕೊನೆಗೊಳ್ಳಲಿದೆ. ಇದರ ಬೆನ್ನಲ್ಲೇ ಕೊಡಗಿನಲ್ಲಿ ಮಳೆಗಾಲವೂ ಆರಂಭಗೊಳ್ಳಲಿದೆ. ಒಂದು ವೇಳೆ ಈಗಿನ ತುರ್ತು ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೂ ಮುಂದಿನ ನಾಲ್ಕೈದು ತಿಂಗಳ ಕಾಲ ಕೊಡಗು ಜಿಲ್ಲೆಯಲ್ಲಿ ಚುನಾವಣೆ ನಡೆಸುವುದು ಸಾಧ್ಯವೇ ಇಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಮುಂದಿನ ಒಂದು ವರ್ಷಗಳ ಕಾಲ ಚುನಾವಣೆ ನಡೆಸುವ ನಿರ್ಧಾರವನ್ನು ಸರಕಾರ ಕೈಗೊಳ್ಳುವುದಿಲ್ಲ. ಈ ಕುರಿತಂತೆ ಚುನಾವಣಾ ಆಯೋಗಕ್ಕೆ ಮಾಹಿತಿಯನ್ನು ಸರಕಾರ ಒದಗಿಸಲಿದೆ ಎನ್ನಲಾಗುತ್ತಿದೆ.

ಒಟ್ಟಿಗೆ ಚುನಾವಣೆ: ರಾಜ್ಯದಲ್ಲಿ ಮುಂದಿನ ನವೆಂಬರ್ ತಿಂಗಳ ಬಳಿಕ ಹಲವು ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳ ಅವಧಿಯೂ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ಅಧಿಕಾರ ಪೂರ್ಣಗೊಳ್ಳಲಿರುವ ಜಿ.ಪಂ., ತಾ.ಪಂ.ಗಳೊಂದಿಗೆ ಒಟ್ಟಿಗೆ ಗ್ರಾ.ಪಂ.ಗಳಿಗೂ ಚುನಾವಣೆ ನಡೆಸುವ ಸಾಧ್ಯತೆ ಹೆಚ್ಚಾಗಿದೆ.

ಆಡಳಿತಾಧಿಕಾರಿಗಳ ನೇಮಕ

ಇದೀಗ ಸದ್ಯದಲ್ಲಿ ಅಧಿಕಾರ ಪೂರ್ಣಗೊಳ್ಳಲಿರುವ ಗ್ರಾಮ ಸಭೆಗಳಿಗೆ ಸರಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಸಿದ್ಧತೆ ನಡೆಸುತ್ತಿದ್ದು, ತಾಲೂಕು ಮಟ್ಟದ ಅಧಿಕಾರಿಗಳನ್ನು ವಿವಿಧ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳಾಗಿ ನೇಮಕ ಮಾಡಲಿದೆ ಎನ್ನಲಾಗುತ್ತಿದೆ. ಆದರೆ ಈ ತನಕ ಜಿಲ್ಲಾಡಳಿತಕ್ಕಾಗಿಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗಾಗಲಿ ಸರಕಾರದ ಮಟ್ಟದಿಂದ ಯಾವುದೇ ನಿರ್ದೇಶನಗಳು ಬಂದಿಲ್ಲ ಎಂದು ಜಿ.ಪಂ. ಸಿಇಓ ಲಕ್ಷ್ಮಿಪ್ರಿಯ ಅವರು ಈ ಬಗ್ಗೆ ಖಚಿತಪಡಿಸಿದ್ದಾರೆ. ಈ ಕುರಿತಾದ ಮಾರ್ಗಸೂಚಿಗೆ ಕಾಯಲಾಗುತ್ತಿದೆ ಎಂದು ಉಪ ಕಾರ್ಯದರ್ಶಿ ಗುಡೂರು ಭೀಮಸೇನ್ ತಿಳಿಸಿದ್ದಾರೆ.