ಪೆರಾಜೆ, ಮೇ 9: ದೇಶಾದ್ಯಂತ ಕೊರೊನಾ ತಡೆಗಟ್ಟುವ ಉದ್ದೇಶದಿಂದ ಜಾರಿಗೊಳಿಸಿರುವ ಲಾಕ್‍ಡೌನ್ ಹಿನ್ನೆಲೆ ಗ್ರಾಮದ ಬಡವರ್ಗದ ಜನರು, ಅನಾರೋಗ್ಯ ಇತ್ಯಾದಿ ಕಾರಣದಿಂದ ಪಿಂಚಣಿ ಹಣವನ್ನೇ ನಂಬಿರುವ ಫಲಾನುಭವಿಗಳಿಗೆ ಮೂರು ತಿಂಗಳಿಂದ ಸರ್ಕಾರದಿಂದ ಬರುತ್ತಿದ್ದ ಮಾಸಾಶನ ಬಾರದೆ ತೀವ್ರ ಸಂಕಷ್ಟÀ್ಟಕ್ಕೆ ಸಿಲುಕಿದ್ದಾರೆ. ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹಳಷ್ಟು ಅತಿಸಣ್ಣ ರೈತರು ಮತ್ತು ದಿನಗೂಲಿ ನೌಕರರಿದ್ದು ಪ್ರತಿದಿನ ಕೆಲಸಗಳಿಲ್ಲದೆ ತೊಂದರೆಯಲ್ಲಿದ್ದಾರೆ. ಇದರೊಂದಿಗೆ ಸರ್ಕಾರದಿಂದ ಬರುತ್ತಿದ್ದ ವೃದ್ಧಾಪ್ಯವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಸೇರಿದಂತೆ ಇನ್ನೂ ಕೆಲವು ಪಿಂಚಣಿಗಳು ಕಳೆದ ಮೂರು ನಾಲ್ಕು ತಿಂಗಳುಗಳಿಂದ ಬಾರದೆ ಮಾಸಾಶನಕ್ಕಾಗಿ ಸಂಬಂಧಪಟ್ಟ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿ ನೀಡುತ್ತಿರುವ ದ್ವಂದ್ವ ಉತ್ತರ ಕೇಳಿಸಿಕೊಂಡು ಹಿಂತಿರುಗುವ ಪರಿಸ್ಥಿತಿ ಎದುರಾಗಿದೆ.

ಆದ್ದರಿಂದ ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಸ್ಥಗಿತಗೊಂಡಿರುವ ಪಿಂಚಣಿ ತಲುಪಬೇಕಾದ ಫಲಾನುಭವಿಗಳನ್ನು ಪತ್ತೆ ಹಚ್ಚಿ ಅವರಿಗೆ ತಲುಪಿಸುವ ಕಾರ್ಯವಾಗಬೇಕಿದೆ.

- ಕಿರಣ್ ಕುಂಬಳಚೇರಿ