7 ವರ್ಷದ ಬಳಿಕ ಚೆನ್ನೈನಿಂದ ಮ್ಯಾಟ್ ಆಗಮನ
ಸೋಮವಾರಪೇಟೆ, ಮೇ 9: ದೇಶದ ಹಾಕಿ ಕ್ಷೇತ್ರಕ್ಕೆ ಅತ್ಯುತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ಸೋಮವಾರಪೇಟೆಯಲ್ಲಿ ಸುಸಜ್ಜಿತ ಟರ್ಫ್ ಮೈದಾನದ ಕನಸು ಬರೋಬ್ಬರಿ 7 ವರ್ಷದ ಬಳಿಕ ನನಸಾಗುವ ಲಕ್ಷಣ ಕಾಣಿಸುತ್ತಿದೆ.
ಪಂಚ ವಾರ್ಷಿಕ ಯೋಜನೆಯನ್ನೂ ಮೀರಿಸುವಂತೆ ಟರ್ಫ್ ಕಾಮಗಾರಿ ನಡೆಯುತ್ತಿದ್ದು, ಈ ವರ್ಷವಾದರೂ ಬಳಕೆಗೆ ಲಭ್ಯವಾಗಲಿದೆಯೇ ಎಂಬ ಆಸೆಗಣ್ಣಿನಿಂದ ಕ್ರೀಡಾಪಟುಗಳು ಕಾಯುವಂತಾಗಿದೆ.
ಭೂಮಿ ಪೂಜೆ ನೆರವೇರಿದ ದಿನದಿಂದಲೂ ಒಂದಿಲ್ಲೊಂದು ವಿಘ್ನಗಳು ಟರ್ಫ್ ಮೈದಾನಕ್ಕೆ ಜೋತುಬಿದ್ದಿದ್ದು, ಇದೀಗ ಎಲ್ಲಾ ಗ್ರಹಣಗಳಿಂದಲೂ ಮೈದಾನ ಮುಕ್ತಿ ಹೊಂದಿದ್ದು, 7 ವರ್ಷದ ಬಳಿಕ ಚೆನ್ನೈನಿಂದ ಸಿಂಥೆಟಿಕ್ ಟರ್ಫ್ ಮ್ಯಾಟ್ ಆಗಮಿಸಿದೆ.
ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಟರ್ಫ್ ಕಾಮಗಾರಿಗೆ ಭೂಮಿಪೂಜೆ ನಡೆದು 7 ವರ್ಷಗಳೇ ಉರುಳಿದ್ದರೂ ಸಹ ಟರ್ಫ್ ಮೈದಾನ ಮಾತ್ರ ಮೇಲೆದ್ದಿಲ್ಲ. ಟರ್ಫ್ ಕಾಮಗಾರಿಗೆ ಭೂಮಿ ಪೂಜೆ ನಡೆದ ದಿನದಂದೇ ಪರ ವಿರೋಧಗಳು ವ್ಯಕ್ತವಾಗಿತ್ತು. ಇಲ್ಲಿ ಟರ್ಫ್ ನಿರ್ಮಿಸಿದರೆ ಇತರ ಕ್ರೀಡೆಗೆ ಮೈದಾನದ ಕೊರತೆ ಎದುರಾಗುತ್ತದೆ. ಅಷ್ಟಕ್ಕೂ ಈ ಮೈದಾನ ಟರ್ಫ್‍ಗೆ ಬೇಕಾದಷ್ಟು ವಿಸ್ತೀರ್ಣ ಹೊಂದಿಲ್ಲ ಎಂದು ಕೆಲವರು ವಾದಿಸಿದರು. ನಂತರ ಇಲಾಖೆಯಿಂದಲೇ ಸರ್ವೆ ಮಾಡಿದಾಗ ಸಾಕಷ್ಟು ವಿಸ್ತೀರ್ಣ ಇರುವದು ದೃಢಪಟ್ಟಿತು. ಇದರೊಂದಿಗೆ ಬೇರೆ ಕ್ರೀಡೆಗಳಿಗೆಂದು ಬಿಇಓ ಕಚೇರಿ ಮುಂಭಾಗ ಹೊಸ ಮೈದಾನವನ್ನೂ ನಿರ್ಮಿಸಲಾಯಿತು. ಆದರೂ ಸಹ ಈವರೆಗೆ ಜೂನಿಯರ್ ಕಾಲೇಜು ಮೈದಾನದಲ್ಲಿ ಟರ್ಫ್ ನಿರ್ಮಾಣಕ್ಕೆ ಕಾಲ ಕೂಡಿಬಂದಿರಲಿಲ್ಲ.
2013ರಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕ್ರೀಡಾ ಸಚಿವರಾಗಿದ್ದ ಸಂದರ್ಭ ಸೋಮವಾರಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ರೂ. 3.40 ಕೋಟಿ ಅನುದಾನದಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ತಾ. 14.03.2013 ರಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಬಲದೇವಕೃಷ್ಣ ಅವರ ಉಪಸ್ಥಿತಿಯಲ್ಲಿ ಜೂನಿಯರ್ ಕಾಲೇಜು ಮೈದಾನದಲ್ಲಿ ಟರ್ಫ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಅದರಂತೆ ಭೂಮಿಪೂಜೆಯೂ ನೆರವೇರಿತು. ಇದೀಗ ಬರೋಬ್ಬರಿ 7 ವರ್ಷ ಪೂರ್ಣಗೊಂಡಿದ್ದು, ಈ 7 ವರ್ಷದಲ್ಲಿ ಮೈದಾನದ ಸಮತಟ್ಟು ಕಾರ್ಯ, ಜಲ್ಲಿ ಹಾಕುವ ಕೆಲಸಗಳು ಮಾತ್ರ ನಡೆದಿವೆ.
ಈ ಹಿಂದೆ 3.40 ಕೋಟಿ ಅನುದಾನ ಒದಗಿಸಿದ್ದು, ಜಿಎಸ್‍ಟಿ ಶೇ. 18 ರಷ್ಟು ತಗಲುವದರಿಂದ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರ ಹಿಂದೇಟು ಹಾಕಿದ್ದರು. ನಂತರ 62 ಲಕ್ಷ ಹೆಚ್ಚುವರಿಯಾಗಿ ಅನುದಾನ ನಿಗದಿಗೊಳಿಸಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರ ಕಚೇರಿಯಿಂದ ಟೆಂಡರ್ ಪಡೆದಿರುವ ಕಂಪೆನಿಗೆ ಕಾರ್ಯಾದೇಶ ನೀಡಿದ ನಂತರ, ಕಳೆದ 6 ತಿಂಗಳ ಹಿಂದೆ ಮೈದಾನ ಸಮತಟ್ಟು, ಜಲ್ಲಿ ಹಾಕುವ ಕೆಲಸ ಮುಕ್ತಾಯಗೊಂಡಿದೆ.
ಕಾಮಗಾರಿಯ ಟೆಂಡರ್ ಪಡೆದಿರುವ ಗ್ರೇಟ್ ಸ್ಪೋಟ್ರ್ಸ್ ಇನ್‍ಫ್ರಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಇನ್ನಷ್ಟೇ ಟರ್ಫ್ ಮ್ಯಾಟ್ ಅಳವಡಿಸಬೇಕಿದೆ. ಚೆನ್ನೈನಿಂದ 3 ಲಾರಿಗಳಲ್ಲಿ ಮ್ಯಾಟ್ ತರಲಾಗಿದೆ.
ಒಟ್ಟಾರೆ ಈ ಭಾಗದ ಹಾಕಿ ಪ್ರೇಮಿಗಳ ಬಹು ವರ್ಷಗಳ ಕನಸು ಇದೀಗ ನನಸಾಗುವ ಹಂತಕ್ಕೆ ಬಂದಿದೆ. ಬಿರುಸಿನ ಕಾಮಗಾರಿ ನಡೆದರೆ ಮಾತ್ರ ಅತ್ಯುತ್ತಮ ಕ್ರೀಡಾಪಟುಗಳನ್ನು ನೀಡಿದ ಸೋಮವಾರಪೇಟೆ ಮೈದಾನ ಮುಂದಿನ ಕೆಲ ತಿಂಗಳುಗಳಲ್ಲಿಯೇ ಸಿಂಥೆಟಿಕ್ ಟರ್ಫ್ ಮೈದಾನವಾಗಿ ಕಂಗೊಳಿಸಲಿದೆ.