ಚಿರತೆ ದಾಳಿಗೆ ಮಗು ಬಲಿ

ರಾಮನಗರ, ಮೇ 9: ಚಿರತೆಗೆ ಬಲಿಯಾದ ಮೂರು ವರ್ಷದ ಮಗುವಿನ ಕುಟುಂಬಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಅವರು ರೂ. 7.5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು, ಮನೆಯಲ್ಲಿ ಮಲಗಿದ್ದ ಮೂರು ವರ್ಷದ ಮಗುವನ್ನು ಚಿರತೆ ಎಳೆದೊಯ್ದು ಕೊಂದುಹಾಕಿದ ಹಿನ್ನೆಲೆ ಬೇಜವಾಬ್ದಾರಿತನ ತೋರಿದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇಂತಹ ಘಟನೆ ಜರುಗಬಾರದಿತ್ತು. ಇದು ಅತ್ಯಂತ ದುಃಖದ ಸಂಗತಿ ಎಂದರು. ಲಾಕ್‍ಡೌನ್ ಹಿನ್ನೆಲೆ ಜನ ಸಂಚಾರ ಕಡಿಮೆಯಾಗಿದ್ದರಿಂದ ಕಾಡು ಪ್ರಾಣಿಗಳು ನಾಡಿನತ್ತ ಧಾವಿಸುತ್ತಿವೆ. ನಾಳೆಯೇ ಕೂಂಬಿಂಗ್ ಕೆಲಸ ಆರಂಭಿಸಿ ಚಿರತೆ ಸೆರೆ ಹಿಡಿಯಲಾಗುವುದು ಎಂದು ಮಾಹಿತಿ ನೀಡಿದರು.

ತಾ. 12 ರಂದೇ ವಿಮಾನ ಬರಲಿದೆ

ಬೆಂಗಳೂರು, ಮೇ 9: ದುಬೈನಿಂದ ಮಂಗಳೂರಿಗೆ ತಾ. 14ರ ಬದಲಿಗೆ 12 ರಂದೇ ವಿಮಾನ ಬಿಡಲು ಏರ್ ಇಂಡಿಯಾ ಒಪ್ಪಿದ್ದು, ಕನ್ನಡಿಗರು 2 ದಿನ ಮುಂಚಿತವಾಗಿಯೇ ತಾಯ್ನಾಡಿಗೆ ಮರಳಲಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಫ್ಲೈಟ್ ನಂ-ಐಎಕ್ಸ್0384 ವಿಮಾನ ದುಬೈಯಿಂದ 16.10ಕ್ಕೆ ಹೊರಟು ಮಂಗಳೂರಿಗೆ 21.10ಕ್ಕೆ ತಲುಪಲಿದೆ ಎಂದಿದ್ದಾರೆ. ಲಾಕ್‍ಡೌನ್‍ನಿಂದಾಗಿ ವಿದೇಶದಲ್ಲಿ ಉಳಿದಿರುವ ಭಾರತೀಯರನ್ನು ಭಾರತಕ್ಕೆ ಕರೆ ತರಲು ಏರ್ ಇಂಡಿಯಾ ವಿಮಾನವು ತಾ. 14 ರಂದು ಸಂಜೆ 4.10 ದುಬೈಯಿಂದ ಹೊರಡಲಿದ್ದು, ಮಂಗಳೂರಿಗೆ ರಾತ್ರಿ 9.10 ಕ್ಕೆ ಆಗಮಿಸಲಿದೆ ಎಂದು ಈ ಮೊದಲು ತಿಳಿಸಲಾಗಿತ್ತು.

34,000 ಅರ್ಚಕರಿಗೆ ದಿನಸಿ ಕಿಟ್

ಉಡುಪಿ, ಮೇ 9: ಕೊರೊನಾ ಲಾಕ್‍ಡೌನ್ ಬಿಸಿ ಎಲ್ಲಾ ಕ್ಷೇತ್ರಕ್ಕೆ ತಟ್ಟಿದೆ. ಅದರಲ್ಲೂ ತಟ್ಟೆ ಕಾಣಿಕೆ ನಂಬಿರುವ ಹಳ್ಳಿಯ ದೇವಸ್ಥಾನದ ಅರ್ಚಕರ ಸ್ಥಿತಿ ಕೇಳೋದೇ ಬೇಡ. ರಾಜ್ಯದ ಮುಜರಾಯಿ ಇಲಾಖೆ ಇದೀಗ ರಾಜ್ಯದ ದೇವಸ್ಥಾನಗಳ ಅರ್ಚಕರು ಸಂಕಷ್ಟಕ್ಕೆ ಪರಿಹಾರ ಕೊಡಲು ಮುಂದಾಗಿದೆ. ರಾಜ್ಯದ 34,000 ಅರ್ಚಕರಿಗೆ ದಿನಸಿ ಕಿಟ್ ವಿತರಿಸಲು ನಿರ್ಧಾರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಅರ್ಚಕರಿಗೆ ದಿನಸಿ ಕಿಟ್ ವಿತರಣಾ ಜವಾಬ್ದಾರಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಉಡುಪಿ ಜಿಲ್ಲೆಯ ಸಾವಿರ ಅರ್ಚಕರಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ದಿನಸಿ ಕಿಟ್ ವಿತರಿಸಲಾಗುವುದು ಎಂದರು.

ಕಾಯಿಲೆಯಿಂದ ಬಳಲುತ್ತಿಲ್ಲವೆಂದ ಶಾ

ನವದೆಹಲಿ, ಮೇ 9: ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಇವೆಲ್ಲಾ ಸುಳ್ಳು. ನಾನು ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ ಎಂದು ಅಮಿತ್ ಶಾ ಹೇಳುವ ಮೂಲಕ ತಮ್ಮ ಆರೋಗ್ಯ ಕುರಿತು ಎದಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಆರೋಗ್ಯದ ಬಗ್ಗೆ ಇಲ್ಲ ಸಲ್ಲದ ವದಂತಿಗಳನ್ನು ಹರಡುತ್ತಿದ್ದಾರೆ. ಕೆಲವರಂತೂ ನಿಧನವಾಗಿರುವುದಾಗಿ ಪ್ರಾರ್ಥಿಸಿದ್ದಾರೆ ಎಂದು ಟ್ವೀಟರ್‍ನಲ್ಲಿ ಅಮಿತ್ ಶಾ ಹೇಳಿದ್ದಾರೆ. ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ, ಸಂಪೂರ್ಣವಾಗಿ ಆರೋಗ್ಯದಿಂದ ಇದ್ದೇನೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

ಮದ್ಯಕ್ಕಾಗಿ ಸುಪ್ರೀಂ ಮೆಟ್ಟಿಲೇರಿದ ಸರ್ಕಾರ

ಚೆನ್ನೈ, ಮೇ 9: ಮದ್ಯದಂಗಡಿ ಬಂದ್‍ಗೆ ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ಹೈಕೋರ್ಟ್ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕೊರೊನಾ ವೈರಸ್ ಲಾಕ್‍ಡೌನ್‍ಗೆ ವಿನಾಯಿತಿ ನೀಡಿ ಮದ್ಯದಂಗಡಿ ತೆರೆಯಲು ಅನುವು ಮಾಡಿಕೊಟ್ಟ ಬೆನ್ನಲ್ಲೇ ಉಂಟಾಗಿದ್ದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಮದ್ರಾಸ್ ಹೈಕೋರ್ಟ್ ಮದ್ಯದಂಗಡಿಗಳನ್ನು ಬಂದ್ ಮಾಡಿ ಹೋಮ್ ಡೆಲಿವರಿ, ಆನ್‍ಲೈನ್ ಮಾರಾಟಕ್ಕೆ ಸಲಹೆ ನೀಡಿತ್ತು. ಇದೀಗ ಹೈಕೋರ್ಟ್ ನಿರ್ಧಾರದ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಅಲ್ಲದೆ ಕೂಡಲೇ ತಮ್ಮ ಅರ್ಜಿಯನ್ನು ತುರ್ತು ವಿಚಾರಣೆಗೆ ತಂದು ಪರಿಶೀಲಿಸಬೇಕು ಎಂದು ಮನವಿ ಮಾಡಿರುವ ಸರ್ಕಾರ, ಹೈಕೋರ್ಟ್ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದೆ. ಇನ್ನು ಅರ್ಜಿ ಸ್ವೀಕರಿಸಿರುವ ಸುಪ್ರೀಂ ಕೋರ್ಟ್ ಸೋಮವಾರ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ತಾ. 30 ರೊಳಗೆ ಪದವಿ ಪಠ್ಯ ಪೂರ್ಣ

ಬೆಂಗಳೂರು, ಮೇ 9: ಕೋವಿಡ್-19 ಲಾಕ್‍ಡೌನ್‍ನಿಂದ ಪದವಿ ವಿದ್ಯಾರ್ಥಿಗಳ ಶಿಕ್ಷಣ ಮತ್ತಷ್ಟು ವಿಳಂಬವಾಗದಂತೆ ನೋಡಿಕೊಳ್ಳುವ ಸಲುವಾಗಿ ಪದವಿ ತರಗತಿಗಳ ಪಠ್ಯಕ್ರಮವನ್ನು ಆನ್‍ಲೈನ್‍ನಲ್ಲಿ ಮುಂದುವರಿಸಿ, ತಾ. 30 ರೊಳಗೆ ಪೂರ್ಣಗೊಳಿಸಬೇಕು ಎಂದು ಉನ್ನತ ಶಿಕ್ಷಣ ಸಚಿವರಾಗಿರುವ ಡಿಸಿಎಂ ಡಾ. ಸಿ.ಎನ್. ಅಶ್ವತ್ಥ್‍ನಾರಾಯಣ್ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸೂಚಿಸಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಶನಿವಾರ ವೀಡಿಯೋ ಕಾನ್ಫರೆನ್ಸ್ ನಡೆಸಿದ ಡಿಸಿಎಂ, ಪದವಿ ಪರೀಕ್ಷೆಗಳ ಕುರಿತು ತಾ. 17ರ ನಂತರ ಮತ್ತೊಮ್ಮೆ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಾಲ್ವರು ನಕ್ಸಲರ ಹತ್ಯೆ : ಇನ್ಸ್‍ಪೆಕ್ಟರ್ ಹುತಾತ್ಮ

ರಾಯ್ಪುರ, ಮೇ 9: ಛತ್ತೀಸ್‍ಗಢದ ರಾಜನಂದಗಾಂವ್ ಜಿಲ್ಲೆಯ ಮನ್ಪುರದಲ್ಲಿ ಎನ್‍ಕೌಂಟರ್ ನಡೆದಿದ್ದು, ನಕ್ಸಲರ ಜೊತೆಗೆ ನಡೆದ ಎನ್‍ಕೌಂಟರ್‍ನಲ್ಲಿ ಒಬ್ಬರು ಸಬ್ ಇನ್ಸ್‍ಪೆಕ್ಟರ್ ಹುತಾತ್ಮರಾಗಿದ್ದು, ನಾಲ್ವರು ನಕ್ಸಲರು ಹತ್ಯೆಯಾಗಿದ್ದಾರೆ. ಕಳೆದ ರಾತ್ರಿ ಮನ್ಪುರ ಪೊಲೀಸ್ ಠಾಣೆ ಸರಹದ್ದಿನ ಪರ್ದೊನಿ ಗ್ರಾಮದ ಸಮೀಪ ಎನ್‍ಕೌಂಟರ್ ನಡೆದಿದ್ದು, ಮದನ್ವಾಡ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಎಸ್.ಕೆ. ಶರ್ಮ ಹುತಾತ್ಮ ರಾಗಿದ್ದಾರೆ. ಈ ಪ್ರದೇಶದಲ್ಲಿ ನಕ್ಸಲರು ಇದ್ದಾರೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆ ಜಿಲ್ಲಾ ಪೊಲೀಸರ ತಂಡ ಕಳೆದ ರಾತ್ರಿ ಕಾರ್ಯಾಚರಣೆ ಕೈಗೊಂಡಿದ್ದರು.