ಶ್ರೀಮಂಗಲ, ಮೇ 9 : ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಗರೆ ಗ್ರಾಮದಲ್ಲಿ ಗುರುವಾರ ರಾತ್ರಿ ಚಟ್ಟಂಡ ರಘು ತಿಮ್ಮಯ್ಯರವರ ಕರುವನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿದ ಬೆನ್ನಲ್ಲೇ ಸಮೀಪದ ಟಿ.ಶೆಟ್ಟಿಗೇರಿ ಗ್ರಾಮದ ನಾಲ್ಕೇರಿ ರಸ್ತೆಯಲ್ಲಿರುವ ಲಿಂಗರಾಜು ಅವರ ಪುತ್ರ ಮಂಜು ಅವರ ಮಿಶ್ರತಳಿಯ ಹಸುವನ್ನು ಶನಿವಾರ ಮುಂಜಾನೆ ಹುಲಿ ದಾಳಿ ನಡೆಸಿ ಕೊಂದು ಹಾಕಿರುವ ಮತ್ತೊಂದು ಘಟನೆ ನಡೆದಿದೆ. ಅವರ ಹಸುವನ್ನು ಶನಿವಾರ ಮುಂಜಾನೆ ಐದು ಗಂಟೆ ವೇಳೆಗೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.

ವಗರೆ ಗ್ರಾಮದಲ್ಲಿ ಶುಕ್ರವಾರ ರೈತರ ಪ್ರತಿಭಟನೆಗೆ ಮಣಿದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಅವರು ಸ್ಥಳಕ್ಕೆ ಆಗಮಿಸಿ ಹುಲಿ ಸೆರೆಗೆ ಎಲ್ಲಾ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಸಾಕಾನೆಯಿಂದ ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ಮತ್ತು ಬೋನ್ ಇರಿಸಿ ಹುಲಿ ಸೆರೆಗೆ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದರು. ಅದರಂತೆ ಸಂಜೆ ವೇಳೆಗೆ ಹುಲಿ ಕಾರ್ಯಾಚರಣೆಗೆ ಮತ್ತಿಗೋಡು ಸಾಕಾನೆ ಶಿಬಿರದಿಂದ ಸ್ಥಳಕ್ಕೆ ಲಾರಿ ಮೂಲಕ ಸಾಕಾನೆಗಳನ್ನು ಕರೆತರಲಾಯಿತು.

ಇದೀಗ ಟಿ ಶೆಟ್ಟಿಗೇರಿ ಗ್ರಾಮದ ನಾಲ್ಕೇರಿ ರಸ್ತೆಯಲ್ಲಿ ಹೊಸ ಹುಲಿ ದಾಳಿ ಪ್ರಕರಣ ನಡೆದಿದ್ದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಗುರುವಾರ ರಾತ್ರಿ ನಡೆದ ಹುಲಿ ದಾಳಿ ಪ್ರಕರಣ ಹಾಗೂ ಶನಿವಾರ ಮುಂಜಾನೆ ನಡೆದಿರುವ ಹುಲಿ ದಾಳಿ ಪ್ರಕರಣದ ಸ್ಥಳಕ್ಕೆ ಕೇವಲ ಮೂರು ಕಿ.ಮೀ ಅಂತರವಿದ್ದು, ಈ ಎರಡು ದಾಳಿ ಪ್ರಕರಣದಲ್ಲಿ ಒಂದೇ ಹುಲಿ ದಾಳಿ ನಡೆಸಿರುವ ಸಾಧ್ಯತೆಯಿದೆ ಎಂದು ಅರಣ್ಯಾಧಿಕಾರಿಯವರು ತಿಳಿಸಿದ್ದಾರೆ. ಸ್ಥಳಕ್ಕೆ ಪೆÇನ್ನಂಪೇಟೆ ವಲಯ ಅರಣ್ಯಾಧಿಕಾರಿ ಅರಮಣಮಾಡ ತೀರ್ಥ ಮತ್ತು ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದರು.