ಮಡಿಕೇರಿ, ಮೇ 9: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮೇ 5 ರಿಂದೀಚೆಗೆ ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸಿರುವ ಕೊಡಗಿನ ಮಂದಿಗೆ ಜಿಲ್ಲೆಯ ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿ ಕಡ್ಡಾಯ ಸಾಂಸ್ಥಿಕ ತಡೆ ಮಾಡಲಾಗುತ್ತಿದೆ. ಸರಕಾರದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕ್ರಮಕೈಗೊಂಡಿದ್ದು, ಹೊರ ರಾಜ್ಯಗಳಿಂದ ಕೊಡಗನ್ನು ಆರು ದಿನಗಳಿಂದೀಚೆಗೆ ಪ್ರವೇಶಿಸಿದವರನ್ನು 14 ದಿನಗಳ ಕಾಲ ಸಾಂಸ್ಥಿಕ ತಡೆಗೆ ಒಳಪಡಿಸಲಾಗುತ್ತಿದೆ.
ಮೂಲಗಳಿಂದ ತಿಳಿದುಬಂದಂತೆ ಈಗಾಗಲೇ ಮಡಿಕೇರಿ ತಾಲೂಕಿನಲ್ಲಿ 55 ಮಂದಿ, ಸೋಮವಾರಪೇಟೆ ತಾಲೂಕಿನಲ್ಲಿ 34 ಮಂದಿ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 35 ಮಂದಿಯನ್ನು ಗುರುತಿಸಲಾಗಿದ್ದು, ಸಾಂಸ್ಥಿಕ ತಡೆಗೆ ಒಳಪಡಿಸಲು ಕ್ರಮಕೈಗೊಳ್ಳಲಾಗಿದೆ. ಹೊರ ರಾಜ್ಯದಿಂದ ಬಂದವÀರ ಪತ್ತೆ ಕಾರ್ಯ ಮುಂದುವರೆದಿದೆ.
ಈ ನಡುವೆ ಇಂದಿನವರೆಗೆ ಜಿಲ್ಲೆಯಲ್ಲಿ 144 ಮಂದಿ ಮೇ 5 ರಿಂದೀಚೆಗೆ ಹೊರ ರಾಜ್ಯದಿಂದ ಜಿಲ್ಲೆಯನ್ನು ಪ್ರವೇಶಿಸಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದು, ಅವರೆಲ್ಲರನ್ನು ಸಾಂಸ್ಥಿತ ಸಂಪರ್ಕ ತಡೆಗೆ ಒಳಪಡಿಸುವುದಾಗಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಹಲವೆಡೆ ತಂಗಿದ್ದವರನ್ನು ಸಾಂಸ್ಥಿಕ ಸಂಪರ್ಕ ತಡೆಗೆ ಒಳಪಡಿಸುವ ಕಾರ್ಯವೂ ಮಡಿಕೇರಿ ಸೇರಿದಂತೆ ಹಲವೆಡೆ ಬಿರುಸಿನಿಂದ ಸಾಗುತ್ತಿದೆ.