ಮಡಿಕೇರಿ, ಮೇ 9: ಮಡಿಕೇರಿಯ ಎಸ್ಟೇಟ್‍ವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಕೇರಳದ ವ್ಯಕ್ತಿಯೊಬ್ಬರು ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿರುವ ಕುರಿತು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಅಡಕತ್ತೋಡುವಿನ ತನ್ನಿವೆಲಿನ್ ಹೌಸ್‍ನ ಸಬಾಸ್ಟಿನ್ (55) ಎಂಬವರೇ ನಾಪತ್ತೆಯಾದವರು. ಇವರ ಪುತ್ರಿ ಈ-ಮೇಲ್ ಮೂಲಕ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು, ಶ್ರೀಮಂಗಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 2020 ಜ. 24 ರಂದು ಕೊನೆಯ ಮೊಬೈಲ್ ಕರೆ ಮಾಡಿದ್ದು, ನಂತರ ತಂದೆಯವರ ಮೊಬೈಲ್ ಸ್ವಿಚ್‍ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಬಾಸ್ಟಿನ್ ಮಲೆಯಾಳ ಭಾಷೆ ಮಾತನಾಡುವವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಶ್ರೀಮಂಗಲ ಪೊಲೀಸ್ ಠಾಣೆಗೆ ತಿಳಿಸುವಂತೆ ಠಾಣಾಧಿಕಾರಿಗಳು ಮನವಿ ಮಾಡಿದ್ದಾರೆ.