ಸೋಮವಾರಪೇಟೆ, ಮೇ 9: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 2019-20ನೇ ಸಾಲಿನಲ್ಲಿ ರೈತರಿಗೆ ವಿತರಿಸಲಾದ ಕೆಸಿಸಿ ಬೆಳೆ ಸಾಲ ವಸೂಲಾತಿಗೆ ಸರ್ಕಾರ ಹೊಸ ಮಾನದಂಡ ರೂಪಿಸಿರುವುದು ರೈತ ವಿರೋಧಿ ಕ್ರಮವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಕುಟುಂಬ ಸದಸ್ಯರೊಬ್ಬರು ಮಾತ್ರ ಸರ್ಕಾರದ ಶೂನ್ಯ ಬಡ್ಡಿ ದರದ ಫಲಾನುಭವಿ ಗಳಾಗುತ್ತಾರೆ. ಉಳಿದ ಕುಟುಂಬ ಸದಸ್ಯರು ಸಾಲ ಪಡೆದಿದ್ದರೆ ಆ ಸಾಲದ ಮೊತ್ತಕ್ಕೆ ಶೇ. 7 ಬಡ್ಡಿ ದರದಲ್ಲಿ ಸಾಲ ವಸೂಲಿ ಮಾಡಬೇಕೆಂದು ಸರ್ಕಾರ ಸಹಕಾರ ಸಂಘಗಳ ಉಪನಿಂಬಂಧಕರ ಮೂಲಕ ಎಲ್ಲಾ ಕೃ.ಪ.ಸ. ಸಂಘಗಳಿಗೆ ಸುತ್ತೋಲೆ ಹೊರಡಿಸಿದೆ. ಇದರಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹೇಳಿದರು.
ಹಿಂದಿನ ಸಾಲಿನಂತೆ ಪ್ರತಿ ರೈತರು ಸಹಕಾರ ಸಂಘಗಳಲ್ಲಿ ಪಡೆದಿರುವ ರೂ. 3 ಲಕ್ಷಗಳವರೆಗಿನ ಕೃಷಿ ಸಾಲವನ್ನು ಶೂನ್ಯ ಬಡ್ಡಿದರದಲ್ಲೇ ವಸೂಲಿ ಮಾಡಬೇಕು. ಸಹಕಾರ ಸಂಘಗಳಲ್ಲಿ ರೈತರು ಸಾಲ ಪಡೆಯುವದು ಹಾಗೂ ಮರುಪಾವತಿಯ ನಿಯಮಗಳನ್ನು ಮುಂದುವರಿಸಬೇಕು ತಪ್ಪಿದಲ್ಲಿ ಪಕ್ಷದ ವತಿಯಿಂದ ಜಿಲ್ಲೆಯ ರೈತರುಗಳನ್ನು ಒಗ್ಗೂಡಿಸಿ, ಉಗ್ರ ಹೋರಾಟ ಮಾಡ ಲಾಗುವದು ಎಂದು ಎಚ್ಚರಿಸಿದರು.
ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಕೃಷಿ ಫಸಲನ್ನು ಕಳೆದು ಕೊಂಡಿರುವ ರೈತಾಪಿ ವರ್ಗ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಕೊರೊನಾ ಲಾಕ್‍ಡೌನ್‍ನಿಂದ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭ ದಲ್ಲಿ ಸಾಲ ವಸೂಲಾತಿಗೆ ಸರ್ಕಾರ ನೂತನ ಸುತ್ತೋಲೆ ಹೊರಡಿಸಿರುವದು ರೈತ ವಿರೋಧಿ ನೀತಿಯಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿಗಳಾದ ಕಾಂಗ್ರೆಸ್‍ನ ಸಿದ್ದರಾಮಯ್ಯ ಅವರು 50 ಸಾವಿರ ರೂ.ಗಳು ಹಾಗೂ ಜೆಡಿಎಸ್‍ನ ಹೆಚ್.ಡಿ. ಕುಮಾರಸ್ವಾಮಿ ಅವರು ರೂ. 1 ಲಕ್ಷವರೆಗಿನ ಸಹಕಾರ ಸಂಘಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದ್ದರು. ಆದರೆ ಯಡಿಯೂರಪ್ಪ ಅವರು ರೈತರಿಗೆ ಬಡ್ಡಿರಹಿತ ರಿಯಾಯಿತಿಯನ್ನು ಕಸಿದುಕೊಂಡು, ಬೆಳೆ ಸಾಲಕ್ಕೆ ಶೇ.7ರ ಬಡ್ಡಿಯಂತೆ ವಸೂಲಿಗೆ ಆದೇಶ ನೀಡಿರುವದು, ರೈತರ ಬದುಕಿಗೆ ಕೊಡಲಿಪೆಟ್ಟು ಕೊಟ್ಟಂತಾಗಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ಪ.ಪಂ. ಸದಸ್ಯ ಡಿ.ವಿ. ಉದಯಶಂಕರ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸುನಿಲ್, ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಬಿ.ಎನ್. ಬಸವರಾಜ್ ಇದ್ದರು.