ಸೋಮವಾರಪೇಟೆ, ಮೇ 9: ಕಳೆದ ಒಂದು ವಾರದ ಹಿಂದೆ ತಾಲೂಕಿನ ಮುಳ್ಳೂರು ಗ್ರಾಮಕ್ಕೆ ಆಗಮಿಸಿದ್ದ ಯುವಕ ಅಸ್ವಸ್ಥಗೊಂಡು ಸೋಮವಾರಪೇಟೆ ಆಸ್ಪತ್ರೆಗೆ ದಾಖಲಾಗಿ, ನಂತರ ಆಂಬ್ಯುಲೆನ್ಸ್ ಮೂಲಕ ಮಡಿಕೇರಿಗೆ ತೆರಳಿದ ಘಟನೆಗೆ ಸಂಬಂಧಿಸಿದಂತೆ ಹಲವಷ್ಟು ಊಹಾಪೋಹಗಳು ಎಲ್ಲೆಡೆ ಹರಿದಾಡಿದವು.
23 ವರ್ಷದ ಯುವಕ ಕಳೆದ ಒಂದು ವಾರದ ಹಿಂದೆ ಬೆಂಗಳೂರಿ ನಿಂದ ಆಗಮಿಸಿದ್ದು, ಮನೆಯಲ್ಲಿದ್ದ ಸಂದರ್ಭ ಅಸ್ವಸ್ಥಗೊಂಡಿದ್ದಾನೆ. ದಿನೇ ದಿನೇ ಕೆಮ್ಮಿನೊಂದಿಗೆ ದೇಹದ ತೂಕದಲ್ಲೂ ಇಳಿಕೆಯಾಗುತ್ತಿದ್ದರಿಂದ ಸ್ಥಳೀಯ ಆಶಾ ಕಾರ್ಯಕರ್ತೆ ಇಂದು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ.
ಇಲ್ಲಿ ಯುವಕನ ಕಫ ಪರೀಕ್ಷೆ ನಡೆಸಿದ ಸಂದರ್ಭ ಕ್ಷಯ ರೋಗದ ಲಕ್ಷಣಗಳು ಕಂಡುಬಂದಿವೆ. ತಕ್ಷಣ ಕೊರೊನಾ ಸೋಂಕು ಪತ್ತೆಗಾಗಿ ಆತನ ಗಂಟಲು ದ್ರವವನ್ನು ಸಂಗ್ರಹಿಸಲಾಗಿದೆ. ಹೆಚ್ಚಿನ ಕೆಮ್ಮು ಇದ್ದುದರಿಂದ ಆತನನ್ನು ಮಡಿಕೇರಿಯ ಆಸ್ಪತ್ರೆಗೆ ಸಿ-ವಿ-ನಾಟ್(ಕ್ಷಯ ರೋಗದ ಪತ್ತೆ) ಪರೀಕ್ಷೆಗಾಗಿ ಆಂಬ್ಯುಲೆನ್ಸ್ ಮೂಲಕ ಕಳುಹಿಸಲಾಗಿದೆ. ಜ್ವರ, ಕೆಮ್ಮಿನೊಂದಿಗೆ ಕಳೆದ ಒಂದು ವಾರದಲ್ಲಿ 10 ಕೆ.ಜಿ. ದೇಹದ ತೂಕ ಇಳಿಕೆಯಾಗಿದ್ದರಿಂದ ಆತಂಕಗೊಂಡಿದ್ದ ಯುವಕನನ್ನು ಸ್ಥಳೀಯ ಆಶಾ ಕಾರ್ಯಕರ್ತೆಯ ಸಹಕಾರದಿಂದ ಮಡಿಕೇರಿಗೆ ಸಾಗಿಸಲಾಗಿದೆ. ಯುವಕನ ಗಂಟಲು ದ್ರವವನ್ನು ಸಂಗ್ರಹಿಸಿ ಮೈಸೂರಿಗೆ ಕಳುಹಿಸಲಾಗಿದ್ದು, ತಾ. 11ರಂದು ವರದಿ ಬರುವ ನಿರೀಕ್ಷೆ ಇದೆ. ಈ ಮಧ್ಯೆ ಸೋಮವಾರಪೇಟೆಯಲ್ಲಿ ಯುವಕನೋರ್ವನಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಸುಳ್ಳು ಮಾಹಿತಿಗಳು ಎಲ್ಲೆಡೆ ಹರಿದಾಡಿದ್ದು, ಹಲವಷ್ಟು ಮಂದಿ ಆತಂಕಕ್ಕೆ ಒಳಗಾಗಿದ್ದರು.
ಯುವಕನಲ್ಲಿ ಜ್ವರ, ಕೆಮ್ಮು ಇದ್ದುದರಿಂದ ಸೋಮವಾರಪೇಟೆ ಆಸ್ಪತ್ರೆಯಲ್ಲಿ ಆತನ ಗಂಟಲು ದ್ರವವನ್ನು ಸಂಗ್ರಹಿಸಿ, ಮೈಸೂರಿಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರವಷ್ಟೇ ನಿಖರ ಮಾಹಿತಿ ಲಭಿಸಲಿದೆ. ಕ್ಷಯ ರೋಗಕ್ಕೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಲಭ್ಯವಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.