ಗೋಣಿಕೊಪ್ಪಲು, ಮೇ 8: ಹಿರಿಯ ಸಾಹಿತಿ ನಿಸಾರ್ ಅಹಮದ್ ಅವರಿಗೆ ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಾಹಿತಿ ಡಾ. ಜೆ. ಸೋಮಣ್ಣ ನುಡಿ ನಮನ ಸಲ್ಲಿಸಿದರು. ಗೋಣಿಕೊಪ್ಪಲಿನ ನವಮಿ ಸಭಾಂಗಣದಲ್ಲಿ ನಿಸಾರ್ ಅಹಮದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರನ್ನು ನೆನಪಿಸಿಕೊಂಡರು. ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ನಿಸಾರ್ ಅಹಮದ್ ಕನ್ನಡಕ್ಕಾಗಿ ಮಾಡಿದ ಕೆಲಸವನ್ನು ಸ್ಮರಿಸಿದರು.
ನಂತರ ಗೋಣಿಕೊಪ್ಪಲು ಪ್ರೌಢಶಾಲಾ ಶಿಕ್ಷಕ ಕೃಷ್ಣ ಚೈತನ್ಯ ಮಾತನಾಡಿದರು. ಗೋಣಿಕೊಪ್ಪಲಿನ ಹಿರಿಯ ಕಲಾವಿದ ವಿ.ಟಿ. ಶ್ರೀನಿವಾಸ್, ಗೋಣಿಕೊಪ್ಪಲಿನ ಪತ್ರಕರ್ತ ಜಗದೀಶ್ ಜೋಡುಬೀಟಿ, ಗೋಣಿಕೊಪ್ಪಲಿನ ಚಂದನ್ ಕಾಮತ್, ರವೀಂದ್ರ ಉಪಸ್ಥಿತರಿದ್ದರು.ಶನಿವಾರಸಂತೆ: ಕ.ಸಾ.ಪ. ಹೋಬಳಿ ಘಟಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಗಲಿದ ಸಾಹಿತಿ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮ್ಮದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾಹಿತಿ ನಿಸಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆ ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ನಿಸಾರ್ ಅಹಮ್ಮದ್ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ಘಟಕದ ಅಧ್ಯಕ್ಷ ಬಿ.ಬಿ. ನಾಗರಾಜ್, ಪದಾಧಿಕಾರಿಗಳಾದ ಪ್ರೇಮಕುಮಾರ್, ಹರೀಶ್ ಕುಮಾರ್, ಶಿವಣ್ಣ ಹಾಜರಿದ್ದರು.