ಶ್ರೀಮಂಗಲ, ಮೇ 8: ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಗರೆ ಗ್ರಾಮದ ನಿವಾಸಿ ಚಟ್ಟಂಡ ರಘು ತಿಮ್ಮಯ್ಯ ಅವರಿಗೆ ಸೇರಿದ 6 ತಿಂಗಳ ಕರುವನ್ನು ಗುರುವಾರ ರಾತ್ರಿ ಹುಲಿ ದಾಳಿ ನಡೆಸಿ ಕೊಂದು ಹಾಕಿದ ಘಟನೆ ನಡೆದಿದೆ.
ಗುರುವಾರ ಮಧ್ಯರಾತ್ರಿ ಎರಡು ಗಂಟೆಗೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ಹುಲಿ ದಾಳಿ ನಡೆಸಿದ್ದು, ಸಮೀಪದಲ್ಲೇ ಕಟ್ಟಿ ಹಾಕಿದ್ದ ಹಸುವಿನ ಕೂಗು ಕೇಳಿ ರಘು ತಿಮ್ಮಯ್ಯನವರು ಕೊಟ್ಟಿಗೆಗೆ ದಾವಿಸಿ ಪರಿಶೀಲಿಸಿದಾಗ ಕರು ಕಾಣೆಯಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಿದರೂ ಕರು ಕಂಡು ಬಂದಿರುವುದಿಲ್ಲ. ಶುಕ್ರವಾರ ಮುಂಜಾನೆ ಹುಡುಕಿದಾಗ ಹುಲಿಯ ಹೆಜ್ಜೆಯ ಗುರುತು ಪತ್ತೆಯಾಗಿದ್ದು, ಕೊಟ್ಟಿಗೆಯಿಂದ ಸುಮಾರು ಒಂದು ಸಾವಿರ ಮೀಟರ್‍ನಷ್ಟು ದೂರದವರೆಗೆ ಹುಲಿ ಕರುವನ್ನು ಎಳೆದೊಯ್ದು ಕೊಂದು ಹಾಕಿ ಭಾಗಶಃ ತಿಂದಿರುವುದು ಕಂಡುಬಂದಿದೆ.
ಅರಣ್ಯ ಇಲಾಖೆಗೆ ರಘು ತಿಮ್ಮಯ್ಯನವರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೆÇನ್ನಂಪೇಟೆ ವಲಯ ಅರಣ್ಯಾಧಿಕಾರಿ ತೀರ್ಥ ತಮ್ಮ ಸಿಬ್ಬಂದಿಗಳೊಂದಿಗೆ ದಾವಿಸಿದ್ದು, ಹುಲಿ ದಾಳಿ ನಡೆಸಿರುವುದನ್ನು ಖಚಿತಪಡಿಸಿಕೊಂಡು ಶ್ರೀಮಂಗಲ ಪಶುವೈದ್ಯಾಧಿಕಾರಿ ಡಾ. ಗಿರೀಶ್, ಎ.ಸಿ.ಎಫ್. ಶ್ರೀಪತಿ ಅವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡಿರುತ್ತಾರೆ. ನಂತರ ಡಿ.ಎಫ್.ಓ. ಶಿವಶಂಕರ್, ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶದ ಡಾ. ಮುಜೀಬ್, ಬಂಡಿಪುರ ಹುಲಿ ಸಂರಕ್ಷಣಾ ಪ್ರದೇಶದ ಡಾ. ನಾಗರಾಜ್, ವೈಲ್ಡ್ ಲೈಫ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾದ ಡಾ. ಸನತ್, ಅರವಳಿಕೆ ತಜ್ಞರಾದ ಪ್ರಶಾಂತ್, ಅಕ್ರಂ, ಹಾಸನ ವೈಲ್ಡ್ ಲೈಫ್ ಸಂಸ್ಥೆಯ ವೆಂಕಟೇಶ್, ಕುಶಾಲನಗರದ ಡಿ.ಆರ್.ಎಫ್.ಓ ರಂಜನ್, ಪೆÇನ್ನಂಪೇಟೆ ವನ್ಯ ಜೀವಿ ಸಂರಕ್ಷಣಾ ಇಲಾಖೆಯ ಸಿಬ್ಬಂದಿಗಳು, ಎಸ್.ಟಿ.ಪಿ.ಎಫ್ ಸಿಬ್ಬಂದಿಗಳು, ಆನೆ ಮಾವುತರು, ತಿತಿಮತಿ ವನ್ಯ ಜೀವಿ ಅರಣ್ಯವಲಯದ ಸಿಬ್ಬಂದಿಗಳು ಸೇರಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ ಮಧ್ಯಾಹ್ನ 12 ಗಂಟೆಯಿಂದ ಹುಲಿ ಹಿಡಿಯಲು ಕಾರ್ಯಾಚರಣೆ ನಡೆಸಲಾಗಿದೆ.
ಕಳೆದ 15 ದಿನಗಳಿಂದ ಹುಲಿ ಹಿಡಿಯುವ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ನಡಿಕೇರಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಹುಲಿ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆಯೇ ದಾಳಿ ಮಾಡಿರುವುದರಿಂದ ಈಗ ಕಾರ್ಯಾಚರಣೆ ಆನೆಯನ್ನು ಬಳಸಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ತೀರ್ಥ ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಕಾರ್ಯದರ್ಶಿ ಚೆಟ್ರುಮಾಡ ಸುಜಯ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬಣ ಕಾರ್ಯಪ್ಪ, ಮುಖಂಡರಾದ ಅಪ್ಪಚಂಗಡ ಮೋಟಯ್ಯ, ಬಿಜೆಪಿ ಅಧ್ಯಕ್ಷ ಕಟ್ಟೇರ ಈಶ್ವರ, ಮತ್ತಿತರ ರೈತ ಸಂಘದ ಸದಸ್ಯರು ಸ್ಥಳಕ್ಕೆ ಆಗಮಿಸಿ ಹಲವು ದಿನಗಳಿಂದ ಹುಲಿ ದಾಳಿ ನಡೆಸಿ ರೈತರ ಹಲವಾರು ಹಸುಗಳನ್ನು ಕೊಂದು ನಷ್ಟಪಡಿಸುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಕಾಡ್ಯಮಾಡ ಮನು ಸೋಮಯ್ಯ 15 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಹೊಸ ಅಧಿಕಾರಿಗಳನ್ನು ಕೊಡಗಿಗೆ ನೇಮಕ ಮಾಡಬೇಕೆಂದು ಒತ್ತಾಯಿಸುವುದರೊಂದಿಗೆ ಈ ದಿನ ಹುಲಿಯನ್ನು ಹಿಡಿಯದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.