ಸಿದ್ದಾಪುರ, ಮೇ 8: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡುಗಳನ್ನು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೇರಿ ಅರಣ್ಯಕ್ಕೆ ಅಟ್ಟಿದರು. ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಮರಿಯಾನೆಗಳು ಸೇರಿದಂತೆ 25ಕ್ಕೂ ಅಧಿಕ ಕಾಡಾನೆಗಳು ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಿದ್ದವು. ಇದಲ್ಲದೆ ಕೃಷಿ ಫಸಲುಗಳು ನಾಶವಾಗುತ್ತಿದ್ದು, ಈ ಹಿನ್ನೆಲೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೇರಿ ಕಾಡಾನೆಗಳನ್ನು ಓಡಿಸಿದರು ನಂತರ ದುಬಾರೆ ಕಾವೇರಿ ನದಿಯ ಮೂಲಕ ಮಾಲ್ದಾರೆ ಅರಣ್ಯಕ್ಕೆ ಓಡಿಸಲಾಯಿತು. ಆದರೆ ಇದೀಗ ಕಾಫಿ ತೋಟಗಳಲ್ಲಿ ಹೇರಳವಾಗಿ ಹಲಸಿನಕಾಯಿ ಇರುವ ಕಾರಣ ಆಹಾರ ಅರಸಿಕೊಂಡು ಕಾಫಿ ತೋಟಗಳಿಗೆ ಮತ್ತೆ ಲಗ್ಗೆ ಇಡುತ್ತಿವೆ. ಸಿದ್ದಾಪುರ ವ್ಯಾಪ್ತಿಯಲ್ಲಿ ಕೂಡ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಶಾಶ್ವತ ಯೋಜನೆಯನ್ನು ರೂಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.