ಕೂಡಿಗೆ, ಮೇ 7: ಕೂಡಿಗೆ ಗ್ರಾಮ ವ್ಯಾಪ್ತಿಯಲ್ಲಿ ಕಳೆದ 45 ದಿನಗಳಿಂದ ಕೋಳಿ ಮಾಂಸದ ಮಳಿಗೆಯನ್ನು ತೆರೆಯದೆ ಮಾಂಸ ಪ್ರಿಯರು ಪರದಾಡುವಂತೆ ಆಗಿದೆ.

ಕೂಡಿಗೆ ಸರ್ಕಲ್ ಸಮೀಪದಲ್ಲಿ ಕಳೆದ ಒಂದು ವರ್ಷದಿಂದ ಕೋಳಿ ಮಾಂಸದ ಅಂಗಡಿಗೆ ಪರವಾನಗಿ ನೀಡಲಾಗಿತ್ತು. ಅದರ ಅವಧಿ ಮುಗಿದ ನಂತರ ಷರತ್ತುಬದ್ಧವಾಗಿ ನೀಡುವ ವಿಚಾರದಲ್ಲಿ ಸದಸ್ಯರುಗಳಿಂದ ಪರ ವಿರೋಧ ಚರ್ಚೆಗಳು ಆರಂಭವಾದವು. ಶುಚಿತ್ವ ಕಾಪಾಡುತ್ತಿಲ್ಲ ಎಂಬ ಸ್ಥಳೀಯರ ದೂರಿನ ಮೇಲೆ ಬದಲಿ ಜಾಗದಲ್ಲಿ ಗ್ರಾಮ ಪಂಚಾಯಿತಿಯ ಅನುಮತಿ ಪಡೆದು ತೆರೆಯುವಂತೆ ಸೂಚನೆ ನೀಡಲಾಗಿತ್ತು. ಆದರೆ ಸದಸ್ಯರುಗಳ ಕಿತ್ತಾಟದಿಂದ ಕೋಳಿ ಅಂಗಡಿ ತೆರೆಯಲು ಗುತ್ತಿಗೆದಾರರು ಮುಂದೆ ಬಂದಿಲ್ಲ. ಇದರಿಂದಾಗಿ ಮಾಂಸ ಪ್ರಿಯರು ಬೇರೆ ಪಂಚಾಯಿತಿ ಅಥವಾ ಕುಶಾಲನಗರಕ್ಕೆ ಹೋಗುವಂತಹ ಪ್ರಸಂಗ ಎದುರಾಗಿದೆ.

ಗ್ರಾಮ ಪಂಚಾಯಿತಿ ಅಧಿಕಾರಿಯಲ್ಲಿ ಮಾಹಿತಿ ಬಯಸಿದಾಗ ಯಾರೂ ಬಿಡ್‍ದಾರರು ಬಾರದ ಕಾರಣ ತುರ್ತು ಸಭೆಯಲ್ಲಿ ಎರಡು ಕೋಳಿ ಮಾಂಸ ಅಂಗಡಿಗಳನ್ನು ತೆರೆಯಲು ಟೆಂಡರ್ ಮೊತ್ತವನ್ನು ಕಡಿಮೆ ಮಾಡಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.