ಸೋಮವಾರಪೇಟೆ, ಮೇ 7: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೇಕಟ್ಟೆಯಲ್ಲಿ ಚರಂಡಿಯಲ್ಲಿ ಕೊಳಚೆ ನೀರು ನಿಂತು ಅನೈರ್ಮಲ್ಯದ ತಾಣವಾಗಿ ಪರಿಣಮಿಸಿದೆ.

ಆಲೇಕಟ್ಟೆ ರಸ್ತೆಯ ಯೋಗೇಂದ್ರ ಎಂಬವರ ಮನೆಯ ಮುಂಭಾಗ ಸೂಕ್ತ ಚರಂಡಿ ಹಾಗೂ ಮೋರಿ ಇಲ್ಲದೇ ಇರುವದರಿಂದ ಕೊಳಚೆ ನೀರು ರಸ್ತೆಯ ಮೇಲೆಯೇ ಹರಿಯುತ್ತಿದ್ದು, ಚರಂಡಿಯಲ್ಲಿ ಕ್ರಿಮಿಕೀಟಗಳು ಕಂಡುಬರುತ್ತಿವೆ.

ಈ ಬಗ್ಗೆ ಸಂಬಂಧಿಸಿದ ಚೌಡ್ಲು ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ಬದಲಿಗೆ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಚೌಡ್ಲು ಗ್ರಾಮ ಪಂಚಾಯಿತಿಯಿಂದ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಲಾಗಿದ್ದು, ಆ ಚರಂಡಿಯಲ್ಲಿ ಹರಿದು ಬರುವ ನೀರಿಗೆ ಲೋಕೋಪಯೋಗಿ ಇಲಾಖೆಯ ರಸ್ತೆ ತಡೆಯಾಗಿದೆ. ಈ ರಸ್ತೆಗೆ ಸಮರ್ಪಕ ಮೋರಿ ನಿರ್ಮಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಿಲ್ಲದಂತಾಗಿದೆ.

ಗಾಂಧಿನಗರ, ಆಲೇಕಟ್ಟೆ ವ್ಯಾಪ್ತಿಯ ಸುಮಾರು 500 ಏಕರೆಯಷ್ಟು ಜಾಗದಲ್ಲಿರುವ ಮನೆಗಳ ಕೊಳಚೆ ನೀರು, ಈ ಭಾಗದಲ್ಲಿ ಬೀಳುವ ಮಳೆ ನೀರು ಇದೇ ಚರಂಡಿಯ ಮೂಲಕ ಹರಿಯಬೇಕಿದ್ದು, ಸೂಕ್ತ ಮೋರಿಯ ವ್ಯವಸ್ಥೆ ಇಲ್ಲದೇ ಸಮಸ್ಯೆಯಾಗಿದೆ.

ಕೊಳಚೆ ನೀರು ನಿಲುಗಡೆಗೊಳ್ಳುತ್ತಿರುವದರಿಂದ ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಸಂಬಂಧಿಸಿದ ಚೌಡ್ಲು ಗ್ರಾ.ಪಂ. ಮತ್ತು ಲೋಕೋಪಯೋಗಿ ಇಲಾಖಾ ಅಭಿಯಂತರರು ಈ ಬಗ್ಗೆ ಗಮನ ಹರಿಸಿ ರಸ್ತೆಗೆ ಸೂಕ್ತ ಮೋರಿ ನಿರ್ಮಿಸಲು ಕ್ರಮ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.