100ಕ್ಕೂ ಹೆಚ್ಚು ರೈಲುಗಳ ಸಂಚಾರ

ಬೆಂಗಳೂರು, ಮೇ 7: ವಲಸೆ ಕಾರ್ಮಿಕರು, ಪ್ರತಿಪಕ್ಷ ನಾಯಕರು ಹಾಗೂ ನಾಗರಿಕ ಹೋರಾಟಗಾರರ ತೀವ್ರ ಒತ್ತಡದಿಂದಾಗಿ ಶ್ರಮಿಕ್ ವಿಶೇಷ ರೈಲುಗಳನ್ನು ನಿಲ್ಲಿಸುವ ನಿರ್ಧಾರದಿಂದ ಹಿಂದೆ ಸರಿದಿರುವ ರಾಜ್ಯ ಸರ್ಕಾರ, ನಾಳೆಯಿಂದ ತಾ. 15 ರವರೆಗೂ 9 ರಾಜ್ಯಗಳಿಗೆ 100ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ಇಂದು ನಿರ್ಧರಿಸಿದೆ. ಈ ನಿರ್ಧಾರಕ್ಕೆ ಎರಡು ರಾಜ್ಯಗಳಿಗೆ ಈಗಾಗಲೇ ಸಮ್ಮತಿ ನೀಡಿವೆ. ಶುಕ್ರವಾರದಿಂದ ರೈಲುಗಳ ಓಡಾಟವನ್ನು ಪುನರ್ ಆರಂಭಿಸಬೇಕಾ ಅಥವಾ ಶನಿವಾರದಿಂದ ಆರಂಭಿಸಬೇಕಾ ಎಂಬದನ್ನು ನಿರ್ಧರಿಸಬೇಕಾಗಿದೆ. ಈ ಸಂಬಂಧ ಇಂದು ಬೆಳಿಗ್ಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಹಾಗೂ ರೈಲ್ವೆ ವಿಭಾಗೀಯ ಮಟ್ಟದ ಮ್ಯಾನೇಜರ್‍ಗಳು ಪಾಲ್ಗೊಂಡಿದ್ದರು. ವಿಶೇಷ ರೈಲುಗಳ ಓಡಾಟವನ್ನು ಪುನರ್ ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ವಲಸೆ ಕಾರ್ಮಿಕರಿಗಾಗಿ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿರುವ ಮಂಜುನಾಥ್ ಪ್ರಸಾದ್ ಮಾತನಾಡಿ, ಸರ್ಕಾರದ ನಿರ್ದೇಶನದಂತೆ, ಈ ರೈಲುಗಳ ಓಡಾಟಕ್ಕೆ ಅನುಮತಿ ನೀಡುವಂತೆ ವಿವಿಧ ರಾಜ್ಯಸರ್ಕಾರಗಳಿಗೆ ಪತ್ರ ಬರೆದಿದ್ದೇನೆ. ಜಾರ್ಖಂಡ್, ಬಿಹಾರ, ಒಡಿಶಾ, ಮಣಿಪುರ, ತ್ರಿಪುರಾ, ಪಶ್ಚಿಮ ಬಂಗಾಳ, ರಾಜಸ್ತಾನ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳಿಗೆ ಅಧಿಕೃತ ಮಾಹಿತಿಯನ್ನು ಕಳುಹಿಸಲಾಗಿದೆ. ಲಾಕ್‍ಡೌನ್‍ನಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು ಮತ್ತಿತರರಿಗೆ ಈ ರೈಲುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕೀ ಉತ್ತರಗಳು ವೆಬ್‍ಸೈಟ್‍ನಲ್ಲಿ ಪ್ರಕಟ

ಬೆಂಗಳೂರು, ಮೇ 7: ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಕೀ ಉತ್ತರಗಳನ್ನು (ಇಂಗ್ಲಿಷ್ ಹೊರತುಪಡಿಸಿ) ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ. ಈ ಉತ್ತರಗಳಲ್ಲಿ ಏನಾದರೂ ಲೋಪದೋಷ ಕಂಡುಬಂದಲ್ಲಿ ವಿದ್ಯಾರ್ಥಿಗಳು ಅಥವಾ ಉಪನ್ಯಾಸಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಕೊರೊನಾ ಲಾಕ್‍ಡೌನ್ ಘೋಷಣೆಯಾಗಿದ್ದರಿಂದ ಇಂಗ್ಲಿಷ್ ಪರೀಕ್ಷೆಯನ್ನು ನಡೆಸುವುದು ಸಾಧ್ಯವಾಗಿಲ್ಲ. ಪರೀಕ್ಷೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ವೆಬ್‍ಸೈಟ್ ವಿಳಾಸ: (hಣಣಠಿs;//ಜಠಿue-exಚಿm.ಞಚಿಡಿಟಿಚಿಣಚಿಞಚಿ.gov.iಟಿ/Sಔಗಿ_2020/)

ಶಾಲಾ ಶೈಕ್ಷಣಿಕ ಪಠ್ಯ ಕಡಿತ

ಬೆಂಗಳೂರು, ಮೇ 7: ಕೋವಿಡ್‍ನಿಂದಾಗಿ ನಿಗದಿತ ದಿನಾಂಕಕ್ಕೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಸಾಧ್ಯತೆಗಳು ಕಡಿಮೆ ಇದ್ದು, ಅದಕ್ಕೆ ಸರಿಹೊಂದುವಂತೆ ಶೈಕ್ಷಣಿಕ ವರ್ಷವನ್ನು ಸರಿದೂಗಿಸಬೇಕಾದ ಅಗತ್ಯವಿರುವುದರಿಂದ ಶಾಲಾ ಶೈಕ್ಷಣಿಕ ಪಠ್ಯವನ್ನು ಆ ಅವಧಿಗೆ ತಕ್ಕಂತೆ ರೂಪಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗುರುವಾರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಸಚಿವರು ಈ ಶೈಕ್ಷಣಿಕ ಸಾಲಿನ ಪ್ರಾರಂಭದ ಬಗ್ಗೆ ಈ ಹಂತದಲ್ಲಿ ನಿರ್ಣಯಿಸಲು ಸಾಧ್ಯವಾಗದ ಕಾರಣ 1 ರಿಂದ 10ನೇ ತರಗತಿ ಹಾಗೂ ಪದವಿಪೂರ್ವ ಶಿಕ್ಷಣದ ಪಠ್ಯಕ್ರಮದಲ್ಲಿ ಹೆಚ್ಚುವರಿ ಎನ್ನುವ ಪಠ್ಯವನ್ನು ಗುರುತಿಸುವ ಪ್ರಯತ್ನಕ್ಕೆ ಕೂಡಲೇ ಚಾಲನೆ ನೀಡಬೇಕೆಂದರು. ಶೈಕ್ಷಣಿಕ ವರ್ಷದಲ್ಲಿ ಕಳೆದುಕೊಳ್ಳುವ ಅವಧಿಯ ಆಧಾರದ ಮೇಲೆ ಮಕ್ಕಳ ಕಲಿಕೆಗೆ ಹೊರೆಯಾಗದ ರೀತಿಯಲ್ಲಿ ಅನವಶ್ಯಕ ಪುನರಾವರ್ತಿತವಾದ ಪಠ್ಯವನ್ನು ಕೈಬಿಡಬೇಕು. ಅತ್ಯವಶ್ಯಕವಾದ ಪಠ್ಯವನ್ನು ಉಳಿಸಿಕೊಳ್ಳಲು ಕ್ರಿಯಾ ಯೋಜನೆಯನ್ನು ಕೂಡಲೇ ಸಿದ್ಧಪಡಿಸಬೇಕು. ಕೊರೊನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷದಲ್ಲಿ ಕಡಿತವಾಗಬಹುದಾದ ಅವಧಿಯ ಆಧಾರದಲ್ಲಿ ಪ್ರತಿ ತರಗತಿ ಹಾಗೂ ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ 15 ದಿನಗಳ, 1 ತಿಂಗಳ, ಒಂದುವರೆ ತಿಂಗಳ, 2 ತಿಂಗಳ ಹಂತವಾರು ಹೆಚ್ಚುವರಿಯಾಗಬಹುದಾದ ಪಠ್ಯಗಳನ್ನುಗುರುತಿಸಿ ಅವುಗಳನ್ನು ಕೈಬಿಡುವ ಬಗ್ಗೆ ವಿಸ್ತ್ರತ ವರದಿ ತಯಾರಿಸಬೇಕೆಂದು ಸಚಿವರು ಸೂಚಿಸಿದರು.

ಇಬ್ಬರು ಬಿಎಸ್‍ಎಫ್ ಯೋಧರು ಬಲಿ

ನವದೆಹಲಿ, ಮೇ 7: ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ 50 ಸಾವಿರ ಗಡಿ ದಾಟಿದ್ದು ಮಹಾಮಾರಿಗೆ ಇಬ್ಬರು ಬಿಎಸ್‍ಎಫ್ ಯೋಧರು ಬಲಿಯಾಗಿದ್ದಾರೆ. ಇನ್ನು ಹೊಸದಾಗಿ 41 ಸೋಂಕು ಪತ್ತೆಯಾಗಿದ್ದು ಒಟ್ಟಾರೆ 193 ಬಿಎಸ್‍ಎಫ್ ಯೋಧರು ಸೋಂಕಿಗೆ ತುತ್ತಾಗಿದ್ದಾರೆ. ಇದೇ ವೇಳೆ ಸಿಆರ್ಪಿಎಫ್ ಯೋಧರೂ ಸಹ ಕೊರೊನಾ ಮಹಾಮಾರಿಗೆ ತುತ್ತಾಗಿದ್ದಾರೆ. ಒಟ್ಟಾರೆ 441 ಸಿಆರ್‍ಪಿಎಫ್ ಯೋಧರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧರು ಕೊರೊನಾಗೆ ತುತ್ತಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಇಬ್ಬರು ಕೊರೊನಾಗೆ ಬಲಿಯಾಗಿದ್ದು ಹೊಸದಾಗಿ 41 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ 193 ಬಿಎಸ್‍ಎಫ್ ಯೋಧರು ಕೊರೊನಾಗೆ ತುತ್ತಾಗಿದ್ದಾರೆ.

ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 67

ಕಲಬುರಗಿ, ಮೇ 7: ಮತ್ತೆ ಸೂರ್ಯ ನಗರಿ ಕಲಬುರಗಿಗೆ ಕೊರೊನಾ ಬಿಸಿ ತಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆ ಕಂಡಿದೆ. ಕಲಬುರಗಿ ನಗರದ ಇಬ್ಬರು ಯುವಕರು ಮತ್ತು ಓರ್ವ ಯುವತಿಗೆ ಗುರುವಾರ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ. ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ರೋಗಿ ಸಂಖ್ಯೆ-642 ನೇರ ಸಂಪರ್ಕದಲ್ಲಿ ಬಂದ ಕಲಬುರಗಿ ನಗರದ ಕರೀಂ ನಗರದ 35 ವರ್ಷದ ಯುವಕ ಹಾಗೂ ಕಲಬುರಗಿ ನಗರದ ರೋಗಿ ಸಂಖ್ಯೆ-641ರ ಸಂಪರ್ಕದಲ್ಲಿ ಬಂದ ಇಸ್ಲಾಮಾಬಾದ ಕಾಲೋನಿಯ 36 ವರ್ಷದ ಯುವತಿ ಮತ್ತು 41 ವರ್ಷದ ಪುರುಷ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ ಎಂದರು. ಜಿಲ್ಲೆಯಲ್ಲಿ ಕೊರೊನಾಪೀಡಿತ 67 ರೋಗಿಗಳಲ್ಲಿ 6 ಜನ ನಿಧನರಾಗಿದ್ದು, 29 ರೋಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದಂತೆ 32 ರೋಗಿಗಳಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಹೊಟೇಲ್ ಬಾಡಿಗೆ ದರ ಪರಿಷ್ಕರಣೆ

ಬೆಂಗಳೂರು, ಮೇ 7: ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಸಲುವಾಗಿ ಸೋಂಕಿತರನ್ನು ಕ್ವಾರಂಟೈನಲ್ಲಿ ಇರಿಸಲು ಸಾಮಾನ್ಯ ದರ್ಜೆಯ ಹೊಟೇಲ್‍ಗಳಲ್ಲಿ ಕ್ವಾರಂಟೈನ್ ಕ್ಯಾಂಪ್ಸ್‍ಗಳನ್ನು ತೆರೆಯಲು ಹೊಟೇಲ್ ಬಾಡಿಗೆ ದರವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿ ನಿಗದಿಪಡಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿದಿನ ಊಟ ಸೇರಿದಂತೆ ಗರಿಷ್ಠ ಕೊಠಡಿ ಬಾಡಿಗೆ ರೂ. 1,200 ಇತರ ಮುನ್ಸಿಪಲ್ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ರೂ. 900 ಹಾಗೂ ಪುರಸಭೆ ವ್ಯಾಪ್ತಿಯನ್ನೊಳಗೊಂಡಂತೆ ರಾಜ್ಯದ ಇತರ ಎಲ್ಲಾ ಪ್ರದೇಶಗಳಲ್ಲಿ ರೂ. 750 ನಿಗದಿಪಡಿಸಲಾಗಿದೆ. ಕ್ವಾರಂಟೈನ್ ಕ್ಯಾಂಪ್ಸ್‍ಗಳನ್ನು ತೆರೆಯಲು ಕೆಲವೊಂದು ಷರತ್ತುಗಳು ಅನ್ವಯವಾಗಲಿದೆ. ಹೊಟೇಲ್‍ಗಳ ಸೂಕ್ತತೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಿ ದೃಢೀಕರಿಸಬೇಕು, ಹೊಟೇಲ್ ಮತ್ತು ಅವರ ಉದ್ಯೋಗಿಗಳನ್ನು ಸುರಕ್ಷಿತವಾಗಿರಿಸಲು ಮಾಸ್ಕ್ ಮತ್ತು ನೈರ್ಮಲ್ಯೀಕರಣದ ಸೇವೆಗಳನ್ನು ಒಳಗೊಂಡ ರಕ್ಷಣಾತ್ಮಕ ಸಾಧನಗಳನ್ನು ಒದಗಿಸಬೇಕು.

24 ತಬ್ಲೀಘಿಗಳ ವಿರುದ್ಧ ದೂರು

ಶಾಮ್ಲಿ, ಮೇ 7: ಪೊಲೀಸರಿಗೆ ಯಾವುದೇ ರೀತಿಯ ಮಾಹಿತಿ ನೀಡದೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾ ಪಟ್ಟಣದ ಮಸೀದಿಯೊಂದರಲ್ಲಿ ಉಳಿದುಕೊಂಡಿದ್ದ ಕರ್ನಾಟಕ ಹಾಗೂ ಅಸ್ಸಾಂ ಮೂಲದ 24 ತಬ್ಲೀಘಿ ಜಮಾಅತ್ ಸದಸ್ಯರ ಮೇಲೆ ದೂರು ದಾಖಲಿಸಲಾಗಿದೆ. ಭಾರತೀಯ ಅಪರಾಧ ಕಾಯ್ದೆ ಮತ್ತು ಸಾಂಕ್ರಾಮಿಕ ಕಾಯಿಲೆ ಕಾಯ್ದೆ 1897ರ ಅಡಿಯಲ್ಲಿ 24 ತಬ್ಲೀಘಿಗಳ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಠಾಣಾಧಿಕಾರಿ ಯಶ್ ಪಾಲ್ ಧಾಮ ತಿಳಿಸಿದ್ದಾರೆ. ಆರೋಪಿಗಳು ಏಪ್ರಿಲ್ 23 ರಿಂದ ಕೈರಾನಾ ಪಟ್ಟಣದ ಪತ್ವಾರಿ ಮಸೀದಿಯಲ್ಲಿರುವುದು ಕಂಡುಬಂದಿದೆ. ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಮುಜಫರ್ ನಗರ ಜಿಲ್ಲೆಯ ನ್ಯೂ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಶೆರ್ ನಗರ ಹಳ್ಳಿಯೊಂದರಲ್ಲಿ ಯಾವುದೇ ಮಾಹಿತಿ ನೀಡದೆ ಮಸೀದಿಯೊಂದರಲ್ಲಿ ಉಳಿದಿದ್ದ 10 ತಬ್ಲೀಘಿ ಜಮಾಅತ್ ಸದಸ್ಯರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 188 ಮತ್ತು ಸಾಂಕ್ರಾಮಿಕ ಕಾಯಿಲೆ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.