*ಸಿದ್ದಾಪುರ, ಮೇ 7: ಅಭ್ಯತ್‍ಮಂಗಲ ಗ್ರಾಮ ವ್ಯಾಪ್ತಿಯಲ್ಲಿ ಪ್ರತಿದಿನ ಮಳೆಯಾಗುತ್ತಿದ್ದು, ಶ್ರೀಮಂಗಲಕ್ಕೆ ತೆರಳುವ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ.
ಸ್ಥಳೀಯ ಕಾಫಿ ಬೆಳೆಗಾರರೊಬ್ಬರು ಮಣ್ಣಿನ ರಾಶಿಯನ್ನು ರಸ್ತೆ ಬದಿಗೆ ಸುರಿದಿದ್ದು, ಮಳೆ ಬಂದು ಸಂಪೂರ್ಣವಾಗಿ ರಸ್ತೆಯನ್ನು ವ್ಯಾಪಿಸಿ ಕೆಸರುಮಯವಾಗಿದೆ. ಇದು ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯಾಗಿದ್ದು, ನಿಯಮ ಬಾಹಿರವಾಗಿ ಖಾಸಗಿ ವ್ಯಕ್ತಿ ಮಣ್ಣಿನ ರಾಶಿ ಹಾಕಿ ತೊಂದರೆ ನೀಡಿದ್ದಾರೆ ಎಂದು ಗ್ರಾಮಸ್ಥರು ಇಲಾಖಾ ಇಂಜಿನಿಯರ್‍ಗೆ ದೂರು ನೀಡಿದ್ದಾರೆ. ವಾಹನಗಳು ಮತ್ತು ಪಾದಚಾರಿಗಳು ಕೂಡ ನಡೆದಾಡಲು ಸಾಧ್ಯವಾಗದಷ್ಟು ರಸ್ತೆ ಕೆಸರುಮಯವಾಗಿದ್ದು, ಮಳೆಗಾಲಕ್ಕೂ ಮೊದಲು ಅವ್ಯವಸ್ಥೆಯನ್ನು ಸರಿ ಪಡಿಸಬೇಕು ಮತ್ತು ಮಣ್ಣನ್ನು ಸಂಬಂಧಿಸಿದವರಿಂದಲೇ ತೆರವುಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.