ಮಡಿಕೇರಿ, ಮೇ 7: ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ನಗರದ ಪೌರ ಕಾರ್ಮಿಕರಿಗೆ ಅಗತ್ಯ ಆಹಾರ ಕಿಟ್ ಹಾಗೂ ಉಚಿತ ಮಾಸ್ಕ್ ವಿತರಿಸುವ ಮೂಲಕ ಬುದ್ಧ ಪೌರ್ಣಿಮೆಯನ್ನು ಅರ್ಥವತ್ತಾಗಿ ಆಚರಿಸಲಾಯಿತು.

ಕೊರೊನಾ ಹಿನ್ನೆಲೆ ಬಡ ಪೌರಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಅಗತ್ಯ ಆಹಾರ ಸಾಮಗ್ರಿಗಳ ಕೊರತೆಯಲ್ಲಿದ್ದು, ಅವರ ಬೆಂಬಲಕ್ಕೆ ನಿಲ್ಲುವ ಸಲುವಾಗಿ ಆರೋಗ್ಯದ ಹಿತದೃಷ್ಟಿಯನ್ನು ಮನಗಂಡು ಆಯೋಜಿಸಿದ್ದ ಕಾರ್ಯಕ್ರಮವನ್ನು, ಜಿಲ್ಲಾಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಸೌಮ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರಪಟಕ್ಕೆ ನಮಿಸುವ ಮೂಲಕ ಉದ್ಘಾಟಿಸಿದರು. ದಲಿತ ಸಂಘರ್ಷ ಸಮಿತಿಯು ಪೌರ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸಹಾಯ ಹಸ್ತ ಚಾಚುತ್ತಿರುವುದು ಅತ್ಯದ್ಭುತ ಕಾರ್ಯ ಎಂದು ಶ್ಲಾಘನೆ ವ್ಯಕ್ತಪಡಿಸಿದರು ಹಾಗೂ ಬುದ್ಧನ ತತ್ವ ಸಿದ್ಧಾಂತಗಳನ್ನು, ಆಶಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ವಕೀಲ ಕೃಷ್ಣಮೂರ್ತಿ ಮಾತನಾಡಿ, ಪೌರ ಕಾರ್ಮಿಕರು ಇಲ್ಲವಾದರೆ ಪ್ರಪಂಚವೇ ಕಸದ ಕೊಂಪೆಯಾಗಿ ಮಾರ್ಪಾಟಾಗಿ ನಾವುಗಳು ವಿವಿಧ ರೋಗಗಳಿಗೆ ತುತ್ತಾಗಿ ಮಾನವ ಕುಲವೇ ಇಲ್ಲದಾಗುತ್ತಿತ್ತೇನೋ. ಮನಸ್ಸಿನ ಶುದ್ಧಿಗಾಗಿ ನಾವುಗಳು ದೇವಾಲಯಕ್ಕೆ ಹೋದರೆ ನಮ್ಮ ಪರಿಸರದ ಶುಚಿತ್ವಕ್ಕಾಗಿ ನಾವುಗಳು ಬೆಳಗೆದ್ದ ಕೂಡಲೇ ಪೌರ ಕಾರ್ಮಿಕರ ಬರುವಿಕೆಯನ್ನು ಎದುರು ನೋಡುತ್ತೇವೆ ನಿಜಕ್ಕೂ ಪೌರ ಕಾರ್ಮಿಕರು ಸಮಾಜದ ಹೀರೊಗಳು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಹೆಚ್.ಎಲ್. ದಿವಾಕರ್ ಮಾತನಾಡಿ, ಸಮಾಜದ ಬಹುಮುಖ್ಯ ಅಂಗವಾಗಿರುವ ಪೌರ ಕಾರ್ಮಿಕರನ್ನು ಸಮಾಜದ ಯಾವುದೇ ಸಂಘ ಸಂಸ್ಥೆಗಳು ಗುರುತಿಸದಿರುವುದು ವಿಷಾದಕರ ಎಂದು ಹೇಳಿದರು.

ಎಲ್.ಐ.ಸಿ. ವಿಮಾ ಅಭಿವೃದ್ಧಿ ಅಧಿಕಾರಿ ಸೋಮೇಶ್, ಮದೆ ಮಹದೇಶ್ವರ ಕಾಲೇಜಿನ ಪ್ರಾಂಶುಪಾಲ ಸಿದ್ಧರಾಜು, ಮಡಿಕೇರಿ ನಗರ ಸಂಚಾಲಕ ಸಿದ್ದೇಶ್ವರ್ ಪಾಲ್ಗೊಂಡಿದ್ದರು. ಮಡಿಕೇರಿ ವಲಯ ಘಟಕದ ಅಧ್ಯಕ್ಷ ದೀಪಕ್ ಎ.ಜಿ. ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

ವರದಿ; ರಂಜಿತ್ ಕವಲಪುg

ಕೊಡ್ಲಿಪೇಟೆಯಲ್ಲಿ ಬುದ್ಧ ಪೂರ್ಣಿಮೆ ಆಚರಣೆ

ಸಮೀಪದ ಕೊಡ್ಲಿಪೇಟೆಯಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ವತಿಯಿಂದ ಬುದ್ಧ ಪೂರ್ಣಿಮೆ ಆಚರಿಸಲಾಯಿತು. ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗಿಸಿದರು.

ಸಮಿತಿಯ ಪದಾಧಿಕಾರಿಗಳಾದ ಜೆ.ಐ. ಜನಾರ್ಧನ್, ಸೋಮಣ್ಣ, ವೀರಭದ್ರ, ಡಿ.ಎಸ್. ವಸಂತ್, ಡಿ.ಜೆ. ವಿಶ್ರುತ್, ಕೆ.ಎನ್. ಇಂದ್ರೇಶ್, ಕಾಳಯ್ಯ, ಹೇಮಂತ್, ನವೀನ್, ಪ್ರಸನ್ನ, ವಿನಯ್, ಯತೀಶ್, ಮುರಳಿ, ಸತ್ಯಪ್ರಕಾಶ್, ಶೇಖರ್ ಹಾಜರಿದ್ದರು.