ಮಡಿಕೇರಿ, ಮೇ 6: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ನಿಯಮ ಜಾರಿಯಾದ ಬಳಿಕ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ದೊರೆತ ನಂತರ ಜಿಲ್ಲಾಡಳಿತ ಚೇಂಬರ್ ಆಫ್ ಕಾಮರ್ಸ್ ಸಹಕಾರದೊಂದಿಗೆ ಸರಕಾರಿ ಬಸ್ ನಿಲ್ದಾಣದಲ್ಲಿ ಆರಂಭಿಸಿದ್ದ ಸಂತೆ ವ್ಯಾಪಾರವನ್ನು ಇದೀಗ ಅಲ್ಲಿಂದ ವರ್ಗಾಯಿಸ ಲಾಗಿದೆ. ಸರಕಾರಿ ಬಸ್‍ಗಳ ಓಡಾಟ ಆರಂಭವಾದ ಹಿನ್ನೆಲೆಯಲ್ಲಿ ನೂತನ ಖಾಸಗಿ ಬಸ್ ನಿಲ್ದಾಣ ಹಾಗೂ ಆರ್‍ಎಂಸಿ ಪ್ರಾಂಗಣದಲ್ಲಿ ಪ್ರಸ್ತುತ ಸಂತೆ ವ್ಯಾಪಾರಕ್ಕೆ ಅನುವು ಮಾಡಿ ಕೊಡಲಾಗಿದೆ.ಆದರೆ, ಈ ಬದಲಾವಣೆಯಿಂದ ವ್ಯಾಪಾರಿಗಳು ವ್ಯಾಪಾರವಿಲ್ಲದೆ ಆತಂಕಕ್ಕೊಳಗಾಗಿದ್ದಾರೆ. ಲಾಕ್‍ಡೌನ್ ಜಾರಿಯಿರುವ ಹಿನ್ನೆಲೆಯಲ್ಲಿ ಸುಮಾರು 50ಕ್ಕೂ ಅಧಿಕ ವ್ಯಾಪಾರಿಗಳನ್ನೊಳ ಗೊಂಡು ಹಬ್ಬದ ವಾತಾವರಣದಂತೆ ಬಿರುಸಿನ ವ್ಯಾಪಾರ ನಡೆಯುತ್ತಿದ್ದ ಸರಕಾರಿ ಬಸ್ ನಿಲ್ದಾಣದ ಸಾರ್ವಜನಿಕರೂ, ವ್ಯಾಪಾರಿಗಳಿಗೂ ಅನುಕೂಲಕರ ಸ್ಥಳವಾಗಿ ಪರಿವರ್ತನೆ ಗೊಂಡಿತ್ತು.

ಈ ನಡುವೆ ಸಂತೆ ನಡೆಸಲು ಲಾಕ್‍ಡೌನ್ ನಿಯಮದಡಿ ಅವಕಾಶ ವಿಲ್ಲದಿದ್ದರೂ ತಾತ್ಕಾಲಿಕವಾಗಿ ಕೆಎಸ್‍ಆರ್‍ಟಿಸಿ ನಿಲ್ದಾಣದಲ್ಲಿ ನಡೆಯುತಿದ್ದ ವ್ಯಾಪಾರ ವಹಿವಾಟು ಅಲ್ಲಿಂದ ಸ್ಥಳಾಂತರಗೊಂಡ ಬಳಿಕ ಕ್ಷೀಣಿಸಲಾರಂಭಿಸಿದೆ.

ವಾರದಲ್ಲಿ ಮೂರು ದಿನಗಳ ಅವಕಾಶ ಇದ್ದಾಗ ನಡೆಯುತ್ತಿದ್ದ ವ್ಯಾಪಾರ ಇದೀಗ ಪ್ರತಿದಿನ ಅವಕಾಶ ವಿದ್ದರೂ ಅಷ್ಟಾಗಿ ನಡೆಯುತ್ತಿಲ್ಲ. ಗ್ರಾಹಕರು ಆರ್‍ಎಂಸಿ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿನ ಸಂತೆಯತ್ತ ತಲೆ ಹಾಕುತ್ತಿಲ್ಲ. ಅಂತರದ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ ಜನರಿಗೆ ಬದಲಿ ವ್ಯವಸ್ಥೆ ಬಗ್ಗೆ ಸೂಕ್ತ (ಮೊದಲ ಪುಟದಿಂದ) ಮಾಹಿತಿ ಇಲ್ಲ ಎಂಬದು ವ್ಯಾಪಾರಿಗಳ ಅಳಲು.

ಮಾರುಕಟ್ಟೆ ಕಟ್ಟಡದಲ್ಲಿ ಅವಕಾಶ ನೀಡಿ

ಈ ನಡುವೆ ಇಂದು ವ್ಯಾಪಾರಿಗಳು ಮಹದೇವಪೇಟೆಯಲ್ಲಿರುವ ಮಾರುಕಟ್ಟೆ ಕಟ್ಟಡ ವಿಶಾಲವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮದೊಂದಿಗೆ ಅಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕೆಂದು ‘ಶಕ್ತಿ’ ಮೂಲಕ ಒತ್ತಾಯಿಸಿದ್ದಾರೆ.

ತಾತ್ಕಾಲಿಕ ವ್ಯಾಪಾರಿಗಳ ಸಮಿತಿಯು ಚೇಂಬರ್ ಆಫ್ ಕಾಮರ್ಸ್‍ಗೆ ಈ ಸಂಬಂಧ ಮನವಿ ಸಲ್ಲಿಸಲು ತೀರ್ಮಾನಿಸಿದೆ ಎಂದು ಸಮಿತಿಯ ಪ್ರಮುಖ ಹರೀಶ್ ತಿಳಿಸಿದ್ದಾರೆ.

ಸಂತೆ ವ್ಯಾಪಾರಿಗಳ ಹಿತರಕ್ಷಣಾ ಸಮಿತಿಯ ನಿಲುವು ಕೂಡ ಇದೇ ಆಗಿದ್ದು, ಮಾರ್ಕೆಟ್ ಕಟ್ಟಡದಲ್ಲೇ ಅವಕಾಶ ನೀಡುವಂತಾಗಲಿ ಎಂದು ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ‘ಶಕ್ತಿ’ ಮೂಲಕ ಆಗ್ರಹಿಸಿದ್ದಾರೆ. ಸರಕಾರಿ ಬಸ್ ಸಂಚಾರ ಆರಂಭವಾಯಿತೆಂದು ಅಲ್ಲಿಂದ ಖಾಸಗಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಒಂದು ವೇಳೆ ಖಾಸಗಿ ಬಸ್‍ಗಳ ಸಂಚಾರ ಆರಂಭವಾದರೆ ನಮಗಳ ಸ್ಥಿತಿ ಏನು? ಎಂದು ಪ್ರಶ್ನಿಸಿರುವ ವ್ಯಾಪಾರಿಗಳು, ವಾರದಲ್ಲಿ ಎರಡು ಸಂತೆಗೆ ಅನುಮತಿ ನೀಡಿ ನೂತನ ಮಾರ್ಕೆಟ್ ಕಟ್ಟಡದಲ್ಲಿ ಸಂತೆಗೆ ಅವಕಾಶ ನೀಡಬೇಕು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮಡಿಕೇರಿ ನಗರ ಹಾಗೂ ಗ್ರಾಮಾಂತರ ಪ್ರದೇಶದ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಾತುಕತೆ ನಡೆಯುತ್ತಿದೆ

ಸಂತೆ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಮಾರ್ಕೆಟ್ ಕಟ್ಟಡದಲ್ಲಿಯೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ನಗರಸಭಾ ಆಯುಕ್ತರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಒಂದೆರಡು ದಿನಗಳಲ್ಲಿಯೆ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ನಗರ ಚೇಂಬರ್ ಅಧ್ಯಕ್ಷ ಧನಂಜಯ ಶಕ್ತಿ’ಗೆ ತಿಳಿಸಿದ್ದಾರೆ.

ಸಂತೆ ವ್ಯಾಪಾರಿಗಳು ಚೇಂಬರ್ ಸಂಸ್ಥೆಗೆ ಒಳಪಟ್ಟಿಲ್ಲ. ಹೀಗಿದ್ದರೂ ಕೂಡ ಆರಂಭದಲ್ಲಿ ಜಿಲ್ಲಾಡಳಿತದ ಕೋರಿಕೆಗೆ ಮನ್ನಣೆ ನೀಡಿ ಸಂತೆ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಲಾಯಿತು. ಇದೀಗ ಸರಕಾರಿ ಬಸ್‍ಗಳು ಓಡಾಡಬೇಕೆಂಬ ಅನಿವಾರ್ಯತೆಯಿಂದ ಸಂತೆಯನ್ನು ಸ್ಥಳಾಂತರಿಸಲಾಗಿದ್ದರೂ ವ್ಯಾಪಾರಿ ಹಾಗೂ ವ್ಯಾಪಾರಿಗಳ ಹಿತದೃಷ್ಟಿಯಿಂದ ಮಾರ್ಕೆಟ್ ಕಟ್ಟಡದಲ್ಲೇ ವ್ಯಾಪಾರಕ್ಕೆ ಅನುವು ಮಾಡಿಕೊಡುವಂತೆ ಮಾಡಲು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಅವರು ಹೇಳಿದರು.

ಬದಲಿ ವ್ಯವಸ್ಥೆಗೆ ಬದ್ಧ

ಲಾಕ್‍ಡೌನ್ ಆರಂಭದಲ್ಲಿ ಜಿಲ್ಲಾಡಳಿತದ ಕೋರಿಕೆಯಂತೆ ದರ ನಿಗದಿ ಸೇರಿದಂತೆ ಎಲ್ಲಾ ನಿರ್ವಹಣೆಯನ್ನು ಚೇಂಬರ್‍ನಿಂದಲೇ ಮಾಡಲಾಗಿತ್ತು. ಆದರೆ ಪ್ರಸ್ತುತ ಸಂತೆ ವ್ಯಾಪಾರÀ ಜಿಲ್ಲಾಡಳಿತದ ನಿಯಂತ್ರಣದಲ್ಲಿದೆ. ಹೀಗಿದ್ದರೂ ಕೂಡ ಖಾಸಗಿ ಬಸ್ ನಿಲ್ದಾಣದಿಂದ ವ್ಯಾಪಾರಿಗಳು ಸ್ಥಳಾಂತರಗೊಳ್ಳಬೇಕಾದ ಅನಿವಾರ್ಯತೆ ಎದುರಾದರೆ ಸಂಬಂಧಿಸಿದವರೊಂದಿಗೆ ಚರ್ಚಿಸಿ ವ್ಯಾಪಾರಿಗಳಿಗೆ ಸೂಕ್ತ ಬದಲಿ ವ್ಯವಸ್ಥೆ ಕಲ್ಪಿಸಲು ಜಿಲ್ಲಾ ಚೇಂಬರ್ ಬದ್ಧವಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ತಿಳಿಸಿದ್ದಾರೆ.

ಸಂತೆ ವ್ಯಾಪಾರದ ಜವಾಬ್ದಾರಿಯನ್ನು ಚೇಂಬರ್‍ಗೆ ವಹಿಸಿದ್ದ ಸಂದರ್ಭ ಜಿಲ್ಲಾ ವ್ಯಾಪ್ತಿಯಲ್ಲಿ ಅಚ್ಚುಕಟ್ಟಾಗಿ ವ್ಯಾಪಾರ ನಿರ್ವಹಣೆ ಮಾಡಲಾಗಿದೆ. ಪ್ರಸ್ತುತ ವ್ಯಾಪಾರವನ್ನು ಬೇರೆ ಬೇರೆ ಕಡೆ ವಿಂಗಡಣೆ ಮಾಡಿರುವುದರಿಂದ ಅಂಗಡಿ ಮಳಿಗೆಗಳು ಕೂಡ ಕಾರ್ಯಾರಂಭಿಸಿರುವುದರಿಂದ ವ್ಯಾಪಾರದ ಬಿರುಸು ಕಡಿಮೆಯಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.