ಮಡಿಕೇರಿ, ಮೇ 6: ಪರಸ್ಪರ ಪ್ರೇಮ ಪ್ರಕರಣದೊಂದಿಗೆ ವಿವಾಹವಾಗಿದ್ದ ಜೋಡಿಯ ನಡುವೆ ಅನುಮಾನದ ಶಂಕೆ ನಡುವೆ ಇಂದು ಬೆಳಿಗ್ಗೆ ನವವಿವಾಹಿತೆ ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಪೊಲೀಸರು ಪತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.ಇಲ್ಲಿನ ರೇಸ್ ಕೋರ್ಸ್ ರಸ್ತೆ ಬಳಿಯ ನಿವಾಸಿ ಯಶೋಧ ಅವರ ಪುತ್ರಿ ಭಾಗ್ಯಶ್ರೀ (19) ಮೃತೆ ದುರ್ದೈವಿ. ಈಕೆಯ ಸಾವಿನ ಬಗ್ಗೆ ಇನ್ನಷ್ಟೇ ನಿಖರ ಮಾಹಿತಿ ಲಭಿಸಬೇಕಿದೆ.ಪೊಲೀಸ್ ಮೂಲಗಳ ಪ್ರಕಾರ ಕಳೆದ ಆಗಸ್ಟ್‍ನಲ್ಲಿ ಮಹದೇವಪೇಟೆಯ ಮಾಂಸದಂಗಡಿಯೊಂದರ ಕಾರ್ಮಿಕ ಸಾಹುಲ್ ಹಮೀದ್ (31) ಯುವತಿಯನ್ನು ಪ್ರೇಮಿಸಿ ವಿವಾಹ ಮಾಡಿಕೊಂಡಿದ್ದನೆನ್ನಲಾಗಿದ್ದು, ಹಿಂದಿನ ತಿಂಗಳು ಏ. 29 ರಂದು ಈ ಬಗ್ಗೆ ನೋಂದಾಣಿ ಕಚೇರಿಯಲ್ಲಿ ವಿವಾಹ ದೃಢೀಕರಿಸಿಕೊಂಡಿದ್ದಾಗಿ ಗೊತ್ತಾಗಿದೆ.

ಮಹದೇವಪೇಟೆಯ ಬಾಡಿಗೆ ಮನೆಯೊಂದರಲ್ಲಿ ಈ ಜೋಡಿ ವಾಸವಿದ್ದು, ನಿನ್ನೆ ರಾತ್ರಿ ದಂಪತಿಯ ನಡುವೆ ಕಲಹ ನಡೆದಿರುವುದಾಗಿ ಅಕ್ಕಪಕ್ಕ ಮಂದಿ ಸುಳಿವು ನೀಡಿದ್ದಾರೆ. ಇಂದು ಬೆಳಿಗ್ಗೆ ಯುವತಿಯ ತಾಯಿಗೆ ಮೊಬೈಲ್ ಕರೆಯೊಂದು ನೀಡಿದ ಸುಳಿವಿನ ಮೇರೆಗೆ ಆಕೆ ಮಗಳ ಮನೆಗೆ ದೌಡಾಯಿಸಿದ್ದಾರೆ. ಈ ಸಂದರ್ಭ ಸಾಹುಲ್ ಹಮೀದ್ ಮಾಂಸ ದಂಗಡಿಗೆ ತೆರಳಿದ್ದಾಗಿ ಹೇಳಿ ಕೊಂಡಿದ್ದು, ನವವಿವಾಹಿತೆ ಹಾಸಿಗೆ ಯಲ್ಲಿ ಅಂಗಾತ ಮಲಗಿದ ಸ್ಥಿತಿಯಲ್ಲಿ ಕಾಲುಗಳನ್ನು ನೆಲಕ್ಕೆ ಚಾಚಿಕೊಂಡಿದ್ದ ದೃಶ್ಯ ಗೋಚರಿಸಿದೆ. ತಾಯಿ ಯಶೋಧ ಅವರ ಬೊಬ್ಬೆ ಕೇಳಿ ಅಕ್ಕ ಪಕ್ಕದವರು ಧಾವಿಸಿ ಪೊಲೀಸರಿಗೂ ವಿಷಯ ಮುಟ್ಟಿಸಿದ್ದಾರೆ. ಆ ಮೇರೆಗೆ ಸ್ಥಳ ಮಹಜರು ನಡೆಸಿದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

(ಮೊದಲ ಪುಟದಿಂದ) ಮೇಲ್ವಸ್ತ್ರದಿಂದ ನೇಣು: ಇಂದು ಬೆಳಿಗ್ಗೆ ಭಾಗ್ಯಶ್ರೀ ತನ್ನ ಮೇಲ್ವಸ್ತ್ರದಿಂದ (ವೇಲ್) ಗಂಡನ ದೈಹಿಕ ಹಿಂಸೆ ಹಾಗೂ ಮಾನಸಿಕ ಕಿರುಕುಳದಿಂದ ನೇಣಿಗೆ ಶರಣಾಗಿರುವುದಾಗಿ ಆಕೆಯ ತಾಯಿ ಆರೋಪಿಸಿದ್ದಾರೆ. ಈ ವೇಳೆ ಸಾಹುಲ್ ಹಮೀದ್ ಸೋದರಿ ಹಾಗೂ ಇತರರು ಬಾಗಿಲು ಮುರಿದು ಒಳನುಗ್ಗಿ ಉರುಳನ್ನು ತುಂಡರಿಸಿದ್ದು, ಅಷ್ಟರಲ್ಲಿ ಆಕೆಯ ಉಸಿರಾಟ ನಿಂತು ಹೋದುದಾಗಿ ಹೇಳಿಕೊಂಡಿದ್ದಾರೆ.

ಅಲ್ಲದೆ ತಹಶೀಲ್ದಾರ್ ಸಮ್ಮುಖ ಮರಣೋತ್ತರ ಪರೀಕ್ಷೆ ಬಳಿಕ ಯುವಕನ ಕಡೆಯವರೇ ಅಂತ್ಯಸಂಸ್ಕಾರ ನಡೆಸಿದ್ದಾರೆ. ಭಾಗ್ಯಶ್ರೀ ಹೆಸರನ್ನು ಸುಹಾನ ಎಂದು ಬದಲಾಯಿಸಿದ್ದಾಗಿಯೂ ಸಾಹುಲ್ ಹೇಳಿಕೊಂಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಮೃತಳ ತಾಯಿ ನೀಡಿರುವ ದೂರಿನ ಮೇರೆಗೆ ಸಾಹುಲ್ ಹಮೀದ್‍ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ತಹಶೀಲ್ದಾರ್ ಮಹೇಶ್ ಅವರ ಸಮ್ಮುಖ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸುವುದರೊಂದಿಗೆ ಮುಂದಿನ ಕ್ರಮಕೈಗೊಳ್ಳಲಾಗಿದೆ. ಭಾಗ್ಯಶ್ರೀ ಗರ್ಭವತಿಯೆಂದು ತಿಳಿದು ಬಂದಿದೆ.

ಪೊಲೀಸರ ತನಿಖೆಯಿಂದ ಸಾವಿಗೆ ನಿಖರ ಕಾರಣ ತಿಳಿಯ ಬೇಕಿದೆ. ಡಿವೈಎಸ್‍ಪಿ ಬಿ.ಪಿ. ದಿನೇಶ್ ಕುಮಾರ್ ನೇತೃತ್ವದಲ್ಲಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ, ನಗರ ಠಾಣಾಧಿಕಾರಿ ಅಂತಿಮ ಹಾಗೂ ಸಿಬ್ಬಂದಿ ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದು, ವಾಸ್ತವಾಂಶ ಬಯಲಿಗೆಳೆಯಲು ಸೂಕ್ತ ಕ್ರಮಕ್ಕೆ ಎಸ್ಪಿ ಡಾ. ಸುಮನ್ ಡಿ.ಪಿ. ನಿರ್ದೇಶಿಸಿದ್ದಾರೆ.