ಹೆಬ್ಬಾಲೆ, ಮೇ 6: ಜಿಲ್ಲೆಯ 176 ಬ್ಯಾಂಕ್ ಶಾಖೆಗಳು ಜನಸೇವೆಗೆ ಸಿದ್ಧವಾಗಿದ್ದು ಜನರು ಬ್ಯಾಂಕಿಂಗ್ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಇತರರಿಗೂ ಸಹಾಯ ಮಾಡಲು ಅವಕಾಶ ಮಾಡಿಕೊಡಿ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ ಕರೆ ನೀಡಿದ್ದಾರೆ.
ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಟೋ ಚಾಲಕರಿಗೆ, ವಲಸೆ ಕಾರ್ಮಿಕರಿಗೆ ಬ್ಯಾಂಕ್ ವತಿಯಿಂದ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಜಿಲ್ಲೆಯ 55 ಸಾವಿರ ಖಾತೆಗಳಿಗೆ ಒಟ್ಟು ರೂ. 2.80 ಕೋಟಿ ಬಂದಿದೆ. 2ನೇ ಕಂತು ತಾ. 8 ರಂದು ಬರಲಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕ್ ಮಿತ್ರರು ಅಥವಾ ನಿಮ್ಮೂರಿನ ಅಂಚೆ ಕಛೇರಿಯಲ್ಲಿ ಆಧಾರ್ ಆಧಾರಿತ ವ್ಯವಸ್ಥೆ ಇರುವ ಹಿನ್ನೆಲೆ ಹಣ ಪಡೆಯಬಹುದು ಎಂದು ಅವರು ಮಾಹಿತಿ ನೀಡಿದರು. ಬ್ಯಾಂಕ್ ಬರೋಡಾದ ಮುಖ್ಯ ವ್ಯವಸ್ಥಾಪಕ ಶ್ರೀನಿವಾಸ್ ಮೂರ್ತಿ ಮಾತನಾಡಿ, ನಮ್ಮ ಸಾಮಾಜಿಕ ಹೊಣೆಗಾರಿಕೆ ಲೀಡ್ ಬ್ಯಾಂಕಿನ ಮನವಿಗೆ ಓಗೊಟ್ಟು ಮರಗೋಡು, ಕುಶಾಲನಗರ, ಮಡಿಕೇರಿ ಮತ್ತು ನಂಜರಾಯಪಟ್ಟಣ ಶಾಖೆಗಳಿಂದ ಲೀಡ್ ಬ್ಯಾಂಕ್ ಆದ ಕಾರ್ಪೋರೇಷನ್ ಬ್ಯಾಂಕ್ ಸೇರಿ ರೂ. 40 ಸಾವಿರ ಮೌಲ್ಯದ ಕಿಟ್‍ಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಸತೀಶ್ ಕಾರ್ಯಕ್ರಮ ಆಯೋಜಿಸಿದರು. ಜಿಲ್ಲೆಯಾದ್ಯಂತ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಿದ ಡಾ. ಬಿ.ಸಿ. ನವೀನ್ ಕುಮಾರ್ ಅವರನ್ನು ಹೆಬ್ಬಾಲೆ ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡಾದ ವಿವಿಧ ಶಾಖೆಗಳ ವ್ಯವಸ್ಥಾಪಕರಾದ ಅನು, ಜಯರಾಜ್, ಎಸ್.ಆರ್.ಕೆ. ರೆಡ್ಡಿ, ಪ್ರಕಾಶ್ ಲೀಡ್ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ರಾಮಚಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಒಟ್ಟು 74 ಮಂದಿಗೆ ಆಹಾರ ಕಿಟ್‍ಗಳನ್ನು ಗಣ್ಯರು ವಿತರಿಸಿದರು. ಹೆಬ್ಬಾಲೆ ಶಾಲಾ ಶಿಕ್ಷಕ ಸತೀಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.