ಕೂಡಿಗೆ, ಮೇ 6: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ವತಿಯಿಂದ ಈ ವ್ಯಾಪ್ತಿಗೆ ಒಳಪಡುವ 22 ಗ್ರಾಮಗಳಿಗೆ ಸಹಕಾರ ಸಂಘದ ಮೂಲಕ ಪಡಿತರ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಯಿತು.
ವಿತರಣೆಗೆ ಚಾಲನೆ ನೀಡಿದ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೇಮಂತ್‍ಕುಮಾರ್ ಚಾಲನೆ ನೀಡಿ ಮಾತನಾಡಿ, ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕೆಲ ವಸ್ತುಗಳನ್ನು ರೈತರಿಂದ ಖರೀದಿಸಿ ಮೂರು ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ರಿಯಾಯಿತಿ ದರದಲ್ಲಿ ರೈತರಿಗೆ ದೊರಕುವಂತೆ ಮಾಡಲು ತಿಳಿಸಿದ ಮೇರೆಗೆ ಕೂಡಿಗೆ ಸಹಕಾರದ ಮೂಲಕ ತರಿಸಿ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ರೈತರಿಗೆ ಮತ್ತು ಗ್ರಾಮಸ್ಥರಿಗೆ ವಿತರಣೆ ಮಾಡಲಾಗುತ್ತದೆ ಎಂದರು.
ಕೂಡಿಗೆಯ ಸಹಕಾರ ಸಂಘದ ಆವರಣದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಜೊತೆಗೆ ಸಕ್ಕರೆ ಒಂದು ಕೆ.ಜಿ.ಗೆ ರೂ. 35, ಬೆಳೆಕಾಳು ಕೆ.ಜಿ.ಗೆ ರೂ. 85 ನಂತೆ ನೂರಾರು ಕ್ವಿಂಟಾಲ್ ಪಡಿತರ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಇದರ ಸದುಪಯೋಗವನ್ನು ರೈತರು ಮಾತ್ರವಲ್ಲದೆ ಕೂಡಿಗೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 500ಕ್ಕೂ ಅಧಿಕ ಮಂದಿ ರಿಯಾಯಿತಿ ದರದ ಪಡಿತರ ಸಾಮಗ್ರಿಗಳನ್ನು ಪಡೆದುಕೊಂಡರು.
ಈ ಸಂದರ್ಭ ಸಹಕಾರ ಸಂಘದ ಉಪಾಧ್ಯಕ್ಷ ಟಿ.ಪಿ. ಹಮೀದ್, ಸಂಘದ ನಿರ್ದೇಶಕ ಲಕ್ಷಣ್ಮರಾಜ್ ಅರಸ್, ಕೃಷ್ಣೆಗೌಡ, ಮಾಜಿ ನಿರ್ದೇಶಕ ಸುರೇಶ್, ಚನ್ನೇಗೌಡ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮೀನಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.