ಶ್ರೀಮಂಗಲ, ಮೇ 6: ಕಾನೂರು ಗ್ರಾ.ಪಂ. ವ್ಯಾಪ್ತಿಯ ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಉಳ್ಳವರ ಲೈನ್ ಮನೆಗೆ ತೆರೆದ ಬಾವಿ ನಿರ್ಮಿಸಲು ಜಾಗ ಗುರುತಿಸಲಾಗಿರುವುದು ತನ್ನ ಗಮನಕ್ಕೆ ಬಂದಿಲ್ಲ. ಇದು ಜಿ.ಪಂ. ಅನುದಾನ ದಲ್ಲಿ ನಿರ್ಮಿಸುತ್ತಿರುವ ಕಾಮಗಾರಿ ಯಾಗಿರುವುದಿಲ್ಲ ಎಂದು ಬಾಳೆಲೆ ಜಿ.ಪಂ. ಕ್ಷೇತ್ರದ ಸದಸ್ಯ ಬಾನಂಡ ಪ್ರಥ್ಯು ಪ್ರತಿಕ್ರಿಯಿಸಿದ್ದಾರೆ.

ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಗೆ ಅವರು ಹೇಳಿಕೆ ನೀಡಿದ್ದು 2018 ರ ಅತಿವೃಷ್ಟಿಗೆ ಸಿಲುಕಿ ಬೆಕ್ಕೆಸೊಡ್ಲೂರು ಗ್ರಾಮದ ತೀತಮಾಡ ಕುಟುಂಬದವರ ಕುಡಿಯುವ ನೀರಿನ ತೆರೆದ ಬಾವಿ ಭೂಕುಸಿತದಿಂದ ಮುಚ್ಚಿಹೋಗಿರುವುದು ನಿಜವಾಗಿದೆ. ಇಲ್ಲಿಗೆ ಹೊಸ ತೆರೆದ ಬಾವಿಯನ್ನು ನಿರ್ಮಿಸಲು ಪ್ರಾಕೃತಿಕ ವಿಕೋಪ ಪರಿಹಾರ ಯೋಜನೆಯ ಪಟ್ಟಿಗೆ ಕಂದಾಯ ಅಧಿಕಾರಿಗಳ ಮೂಲಕ ಮತ್ತು ಜಿಲ್ಲಾ ಪಂಚಾಯತ್ ಇಂಜಿನಿಯರ್ ಅವರಿಂದ ಖುದ್ದಾಗಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಗಳಿಗೆ ವರದಿ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ನಾನು ನಿರಂತರ ಸಂಪರ್ಕದಲ್ಲಿದ್ದು ಅನುದಾನ ಬಂದರೆ ಮಾಡಿಕೊಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಸಮಜಾಯಿಸಿಕೆ ನೀಡಿದರು.

ಆದರೂ ಜಿಲ್ಲಾಡಳಿತ ಹಾಗೂ ಸರಕಾರ ಇಲ್ಲಿಗೆ ಹೊಸ ತೆರೆದ ಬಾವಿ ನಿರ್ಮಿಸಲು ಯಾವುದೇ ಅನುದಾನ ಮಂಜೂರು ಮಾಡಿಲ್ಲ. ಇದಲ್ಲದೆ ಕಳೆದ ಕೆಲವು ವರ್ಷದಿಂದ ಜಿಲ್ಲಾ ಪಂಚಾಯಿತಿಯಿಂದಲೂ ತೆರೆದ ಬಾವಿ ನಿರ್ಮಾಣಕ್ಕೆ ಯಾವುದೇ ಅನುದಾನ ಬಿಡುಗಡೆ ಯಾಗುತ್ತಿಲ್ಲವೆಂದು ಹೇಳಿದರು.

ವಿಶೇಷ ಪ್ರಕರಣದಲ್ಲಿ ತೀತಮಾಡ ಕುಟುಂಬಕ್ಕೆ ಕುಡಿಯುವ ನೀರಿಗೆ ಜಿಲ್ಲಾಡಳಿತ ತುರ್ತು ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದು ಹೇಳಿದರು.