ಮಡಿಕೇರಿ, ಮೇ 4: ಬೇರೆ ಬೇರೆ ಜಿಲ್ಲೆಗಳು, ಹೊರ ರಾಜ್ಯಗಳಿಂದ ತಮ್ಮ ಕೊಡಗು ಜಿಲ್ಲೆಗೆ ಬರಲು ಅವಕಾಶ ಕಲ್ಪಿಸಿರುವ ಮೇರೆಗೆ ಇಂದು ಕೊಡಗಿನ ಹೆಬ್ಬಾಗಿಲು ಕುಶಾಲನಗರ ಗಡಿಯ ಕೊಪ್ಪ ಹಾಗೂ ದಕ್ಷಿಣ ಕನ್ನಡ ಗಡಿಯಲ್ಲಿರುವ ಸಂಪಾಜೆ ಗೇಟ್ ಮುಖಾಂತರ ಅನೇಕರು ಇತ್ತ ಬರಲಾರಂಭಿಸಿದ್ದಾರೆ.ಕೊಪ್ಪ ಮೂಲಕ ಕಳೆದ 24 ಗಂಟೆಗಳಲ್ಲಿ ಸುಮಾರು 605ಕ್ಕೂ ಅಧಿಕ ಮಂದಿ ಪ್ರವೇಶಿಸಿ ಆರೋಗ್ಯ ತಪಾಸಣೆಗೊಳಪಟ್ಟು ಹೋಂ ಕ್ವಾರಂಟೈನ್ ಸೇರಿದ್ದರೆ, ಸಂಪಾಜೆ ಮೂಲಕ 59 ಮಂದಿ ಹೋಂ ಕ್ವಾರಂಟೈನ್ ಹಾಗೂ 11 ಮಂದಿ ಕೊಡಗಿನ ಮೂಲಕ ಬೇರೆಡೆಗೆ ತೆರಳಿದ್ದಾರೆ. ಕೊಡಗಿಗೆ ಬರುವವರನ್ನು ಕೊಪ್ಪ ಗೇಟ್‍ನಲ್ಲಿ ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು ನೇತೃತ್ವದಲ್ಲಿ ಬರಮಾಡಿಕೊಂಡು. ಪೊಲೀಸ್ ಭದ್ರತೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಿ, ವೈದ್ಯರು ದೃಢೀಕರಿಸಿದ ಬಳಿಕ ಹೋಂ ಕ್ವಾರಂಟೈನ್‍ಗೆ ಕಳುಹಿಸಲಾಯಿತು. ಈ ಸಂಜೆಯ ಬಳಿಕವೂ ಅನೇಕರು ಬಸ್ ಹಾಗೂ ಇತರ ವಾಹನಗಳಲ್ಲಿ ಜಿಲ್ಲೆಗೆ ಆಗಮಿಸುತ್ತಿರುವ ದೃಶ್ಯ ಕಂಡುಬರುತ್ತಿದೆ. ಸಂಪಾಜೆಯಲ್ಲಿ ಮಡಿಕೇರಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ನೇತೃತ್ವದಲ್ಲಿ ಬರಮಾಡಿಕೊಂಡು ಆರೋಗ್ಯ ಪರಿಶೀಲಿಸಿ ಹೋಂ ಕ್ವಾರಂಟೈನ್‍ಗೆ ಕಳುಹಿಸಿಕೊಡಲಾಯಿತು. ಸಂಪಾಜೆಯಲ್ಲಿ ಕಂಡುಬಂದ ದೃಶ್ಯ ಲಾಕ್‍ಡೌನ್ ಹಿನ್ನೆಲೆ ಹೊರರಾಜ್ಯ, ಹೊರಜಿಲ್ಲೆ ಹಾಗೂ ಇತರೆಡೆಗಳಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು, ಪ್ರವಾಸಿಗರು, ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ‘ಒನ್ ಟೈಮ್ ಪಾಸ್’ ಮೂಲಕ ಅನುಮತಿ ನೀಡಲಾಗಿದೆ. ಅದರಂತೆ ಹೊರ ಜಿಲ್ಲೆ, ರಾಜ್ಯಗಳಲ್ಲಿ ಸಿಲುಕಿದ್ದ ಜಿಲ್ಲೆಯ ನಿವಾಸಿಗಳಿಗೆ ಗಡಿ ಭಾಗ ಸಂಪಾಜೆ ಮೂಲಕ ಜಿಲ್ಲೆಗೆ ಆಗಮಿಸಲು ಅಧಿಕೃತ ಪಾಸ್ ಹೊಂದಿದ್ದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸುಡು ಬಿಸಿಲಿನಲ್ಲಿ ಬಿಗಿ ತಪಾಸಣೆ ಸಿಬ್ಬಂದಿ ಸುಡು ಬಿಸಿಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದೃಶ್ಯ ಇಂದು ಕಂಡು ಬಂತು. ಜಿಲ್ಲೆಗೆ ‘ಒನ್ ಟೈಮ್ ಪಾಸ್’ ಪಡೆದು ಆಗಮಿಸುವವರನ್ನು ಚೆಕ್ ಪೋಸ್ಟ್‍ನಲ್ಲಿ ಗುರುತಿನ ಚೀಟಿ ಹಾಗೂ ಪಾಸ್‍ಗಳನ್ನು ತಪಾಸಣೆ ಮಾಡಿ ನೋಂದಣಿ ಮಾಡಲಾಗುತ್ತಿದೆ. ಬಳಿಕ ಇವರ ಆರೋಗ್ಯ ತಪಾಸಣೆಗೆ ಸಂಪಾಜೆ ಪ್ರಾಥಮಿಕ ಶಾಲೆಗೆ ಕಳಿಸಲಾಗುತ್ತಿದೆ. ಹೊರ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಇತರೆಡೆಗಳಿಂದ ಬೇರೆ ಜಿಲ್ಲೆಗಳಾದ ಮೈಸೂರು, ಬೆಂಗಳೂರಿಗೆ ಕೊಪ್ಪ ಚೆಕ್‍ಪೋಸ್ಟ್ ಮೂಲಕ ಹೋಗಲು ಪಾಸ್ ಪಡೆದವರು ಕೊಡಗು ಜಿಲ್ಲೆಯ ಮಾರ್ಗವಾಗಿ ಹೋಗಲು ಅನುಮತಿ ಇದೆ. ಇವರುಗಳ ವಾಹನದ ಸಂಖ್ಯೆ ಹಾಗೂ ಹೆಸರು ನೋಂದಣಿ ಬಳಿಕ ಜಿಲ್ಲೆಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತ್ತಿದೆ.

ಆದರೆ ಇವರು ಜಿಲ್ಲೆಯಲ್ಲಿ ತಂಗದೆ ಹೊರ ಜಿಲ್ಲೆಗಳಿಗೆ ತೆರಳಬೇಕಾಗುತ್ತದೆ. 24 ಗಂಟೆಯೊಳಗೆ ಕೊಪ್ಪ ಚೆಕ್‍ಪೋಸ್ಟ್‍ನಲ್ಲಿ ಇವರುಗಳ ನೋಂದಣಿ ಆಗದಿದ್ದರೆ (ಅಂದರೆ; ಇವರುಗಳು ಕೊಡಗು ಜಿಲ್ಲೆಯಲ್ಲಿಯೇ ಇದ್ದರೆ) ಇಂತಹವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದರು.

ಶಾಲೆಯಲ್ಲಿ ತಪಾಸಣೆ

ಜಿಲ್ಲೆಗೆ ಆಗಮಿಸುವವರು ಚೆಕ್‍ಪೋಸ್ಟ್ ಬಳಿ ನೋಂದಣಿ ಮಾಡಿದ ನಂತರ ಸಂಪಾಜೆ ಪ್ರಾಥಮಿಕ ಶಾಲೆಗೆ ಆಗಮಿಸುತ್ತಾರೆ. ಇಲ್ಲಿ ಶಾಲಾ ಶಿಕ್ಷಕರು ಜಿಲ್ಲೆಗೆ ಆಗಮಿಸುವವರ ವಿವರ, ವಾಸಸ್ಥಳ ಹಾಗೂ ಇತರ ಮಾಹಿತಿಯನ್ನು ಪಡೆಯುತ್ತಿದ್ದಾರೆ. ನಂತರ ಆರೋಗ್ಯ ಇಲಾಖೆಯವರಿಂದ ಇವರ ಜ್ವರ ತಪಾಸಣೆ, ಆಮ್ಲಜನಕ, ರಕ್ತದೊತ್ತಡಗಳ ಪರೀಕ್ಷೆ ನಡೆಸಲಾಗುತ್ತಿದೆ.

ಪರೀಕ್ಷೆಯ ನಂತರ ಯಾವುದೇ ರೋಗದ ಲಕ್ಷಣಗಳು ಕಂಡು ಬರದಿದ್ದರೆ, ಸೀಲ್ ಹಾಕಿ ‘ಹೋಮ್ ಕ್ವಾರಂಟೈನ್’ ಗೆ ಸೂಚನೆ ನೀಡಲಾಗುತ್ತಿದೆ. ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಆ್ಯಂಬ್ಯೂಲೆನ್ಸ್ ವ್ಯವಸ್ಥೆ ಮಾಡಿ ಸಾಮೂಹಿಕ ಕ್ವಾರಂಟೈನ್‍ಗೆ ಕಳುಹಿಸಲಾಗುವುದು.(ಮೊದಲ ಪುಟದಿಂದ)

ರಾತ್ರಿ 8 ಗಂಟೆಯವರೆಗೆ ಶಾಲೆಯಲ್ಲಿಯೇ ತಪಾಸಣೆ ನಡೆಸಲಾಗುವುದು. ನಂತರ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಮಾಹಿತಿ ನೀಡಿದರು.

ಡಿ.ಸಿ, ಎಸ್.ಪಿ. ಭೇಟಿ

ಪೆರಾಜೆ: ಕೇರಳ-ಕರ್ನಾಟಕದ ಗಡಿ ಹಾಗೂ ನೆರೆಯ ದಕ್ಷಿಣ ಕನ್ನಡದೊಂದಿಗೆ ಗಡಿಭಾಗವನ್ನು ಹೊಂದಿಕೊಂಡಿರುವ ಕೊಡಗಿನ ಸಂಪಾಜೆ ಹಾಗೂ ಪೆರಾಜೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಬೇಟಿ ನೀಡಿ ಗಡಿಯಲ್ಲಿ ಕೈಗೊಂಡಿರುವ ಭದ್ರತೆಯನ್ನು ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು ಸದ್ಯದಮಟ್ಟಿಗೆ ಪೆರಾಜೆಯಿಂದ ಕೇರಳ ಸಂಪರ್ಕಿಸುವ ಅಂತರಾಜ್ಯ ರಸ್ತೆಗಳನ್ನು ತೆರವುಗೊಳಿಸುವುದಿಲ್ಲ. ಮಡಿಕೇರಿ ಮತ್ತು ಸುಳ್ಯ ನಗರಗಳಿಗೆ ದಿನನಿತ್ಯದ ಅಗತ್ಯ ವಸ್ತುಗಳ ಖರೀದಿ ಹಾಗೂ ಆರೋಗ್ಯ ಸೇವೆಗಳಿಗೆ ಪಾಸ್‍ನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ, ತುರ್ತು ಸೇವೆಗಳಿಗೆ ಗ್ರಾಮದಿಂದ ಹೊರಗೆ ಹೋಗುವವರು ಪೆರಾಜೆ ಚೆಕ್ ಪೋಸ್ಟ್ ನಲ್ಲಿ ಹೆಸರು ನೋಂದಾಯಿಸಿ ತೆರಳುವಂತೆ ಸೂಚನೆ ನೀಡಿದರು. ಪ್ರತಿದಿನ ಕೊಡಗಿನಲ್ಲಿ ಜಾರಿಯಲ್ಲಿರುವ ಆದೇಶದಂತೆ ವ್ಯಾಪಾರ ವಹಿವಾಟುಗಳನ್ನು ನಡೆಸುವಂತೆ ಆದೇಶಿಸಿದರು.

ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪಣ್ಣೇಕರ್, ಡಿ.ವೈ.ಎಸ್.ಪಿ ದಿನೇಶ್ ಕುಮಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ, ತಹಶೀಲ್ದಾರ್ ಮಹೇಶ್ ಹಾಜರಿದ್ದರು.

ಅಲ್ಲದೆ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ, ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಗ್ರಾ.ಪಂ.ಸದಸ್ಯ ಉದಯಚಂದ್ರ ಕುಂಬಳಚೇರಿ,ಪ್ರಕಾಶ್ ದೊಡ್ಡಡ್ಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವ ಪ್ರಭು, ಸಂಪಾಜೆ ಹೋಬಳಿ ಕಂದಾಯ ಪರಿವೀಕ್ಷಕ ಸದಾನಂದ, ಕಾರ್ಯದರ್ಶಿ ಕುಮಾರ್, ಗ್ರಾಮಲೆಕ್ಕಿಗ ರಮೇಶ್ ಮೊದ ಲಾದವರು ಉಪಸ್ಥಿತರಿದ್ದರು.

ಕುಶಾಲನಗರ ವರದಿ

ರಾಜ್ಯದ ವಿವಿಧ ಭಾಗಗಳಲ್ಲಿ ಸಿಲುಕಿರುವ ಕೊಡಗು ಜಿಲ್ಲೆಯ ಜನರು ಅವರ ಸ್ವಂತ ಊರುಗಳಿಗೆ ಬರಲು ಮತ್ತು ಕೊಡಗು ಜಿಲ್ಲೆಯಲ್ಲಿ ಸಿಲುಕಿರುವ ಜನರು ತಮ್ಮ ಸ್ವಂತ ಊರುಗಳಿಗೆ ತೆರಳಲು ಒಂದು ಬಾರಿಯ ಪ್ರಯಾಣಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ಕೊಡಗು ಜಿಲ್ಲೆಯ ಗಡಿಭಾಗ ಕುಶಾಲನಗರ ಕೊಪ್ಪ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗಿನಿಂದ ಮಧ್ಯಾಹ್ನದ ತನಕ ನೂರಾರು ವಾಹನಗಳು ಸಂಚರಿಸುತ್ತಿದ್ದ ದೃಶ್ಯ ಕಂಡುಬಂತು.

ಈ ನಡುವೆ ತಪಾಸಣಾ ಕೇಂದ್ರದ ಅಧಿಕಾರಿ, ಸಿಬ್ಬಂದಿಗಳು ಪ್ರತಿ ವಾಹನಗಳನ್ನು ಪರಿಶೀಲಿಸಿ ಅದರಲ್ಲಿದ್ದ ಪ್ರಯಾಣಿಕರ ಮಾಹಿತಿ, ವಿವರ ಸಂಗ್ರಹಿಸುತ್ತಿದ್ದ ಹಿನ್ನೆಲೆಯಲ್ಲಿ ಬೆಳಗಿನಿಂದ ಮಧ್ಯಾಹ್ನದ ತನಕ ವಾಹನಗಳು ಸಾಲುಸಾಲಾಗಿ ನಿಲ್ಲಬೇಕಾದ ಪ್ರಮೇಯ ಸೃಷ್ಟಿಯಾಯಿತು.

ಲಾಕ್‍ಡೌನ್ ಪ್ರಾರಂಭವಾದ ದಿನಗಳ ಪರಿಸ್ಥಿತಿ ಮತ್ತೆ ಮರುಕಳಿಸಿದಂತೆ ಗೋಚರಿಸಿತು. ಹೊರ ಜಿಲ್ಲೆಗಳಿಂದ ಬಂದ ಪ್ರತಿಯೊಬ್ಬರಿಗೂ ಸೀಲ್ ಹಾಕುವ ಮೂಲಕ ಹೋಂ ಕ್ವಾರಂಟೈನ್‍ಗೆ ಒಳಪಡಿಸುವ ಕೆಲಸದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕ್ರಮಕೈ ಗೊಂಡರು. ಕಳೆದ ಎರಡು ದಿನಗಳಲ್ಲಿ ಸುಮಾರು 500ಕ್ಕೂ ಅಧಿಕ ಮಂದಿಯನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸಿ ಅವರ ವೈಯಕ್ತಿಕ ದಾಖಲೆಗಳನ್ನು ಪರಿಶೀಲಿಸಿ ವಿವರಗಳನ್ನು ಪಡೆಯಲಾಯಿತು.

ಬೆಂಗಳೂರು, ಮೈಸೂರು ವ್ಯಾಪ್ತಿಯಿಂದ ಜಿಲ್ಲೆಗೆ ಪ್ರವೇಶಿಸಲು ಕುಶಾಲನಗರ ತಪಾಸಣಾ ಕೇಂದ್ರಕ್ಕೆ ಮಾತ್ರ ಅವಕಾಶ ಇರುವ ಹಿನೆÀ್ನಲೆಯಲ್ಲಿ ವಾಹನಗಳ ಒತ್ತಡ ಅಧಿಕವಾಗಲು ಕಾರಣವಾಯಿತು. ಇನ್ನೊಂದೆಡೆ ನೆರೆಯ ಬೈಲುಕೊಪ್ಪೆ, ಕೊಪ್ಪ ವ್ಯಾಪ್ತಿಯ ಜನತೆ ಕುಶಾಲನಗರ ಪಟ್ಟಣಕ್ಕೆ ಬರಲು ಮತ್ತು ಕುಶಾಲನಗರದಿಂದ ಕೊಪ್ಪ ಕಡೆಗೆ ದಿನನಿತ್ಯ ಓಡಾಡಲು ಅನಾನುಕೂಲವಾಗಿದ್ದು ಈ ಬಗ್ಗೆ ಕೂಡ ಆಕ್ರೋಷ ವ್ಯಕ್ತಗೊಳ್ಳುತ್ತಿದ್ದುದು ಗೋಚರಿಸಿತು.

ಕುಶಾಲನಗರ ಜನತೆಯ ಬಹುತೇಕ ತೋಟ ಮತ್ತಿತರ ಕೃಷಿ ಚಟುವಟಿಕೆ ಕೇಂದ್ರಗಳು ಗಡಿಭಾಗದ ಕೊಪ್ಪದಲ್ಲಿದ್ದು ನಿತ್ಯ ಓಡಾಡಲೇಬೇಕಾಗಿದೆ. ಅತ್ತ ಕೊಪ್ಪ ಗ್ರಾಮ ವ್ಯಾಪ್ತಿಯ ಸಾವಿರಾರು ಜನರ ಬ್ಯಾಂಕ್ ವಹಿವಾಟು ಸೇರಿದಂತೆ ಬಹುತೇಕ ವ್ಯವಹಾರಗಳು ಕುಶಾಲನಗರಕ್ಕೆ ಸೀಮಿತವಾದುದರಿಂದ ಕಳೆದ ಎರಡು ತಿಂಗಳ ಅವಧಿಯಲ್ಲಿ ಇದಕ್ಕೂ ಕೂಡ ಅಡ್ಡಿಯುಂಟಾಗಿದ್ದು ತಕ್ಷಣ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎನ್ನುವ ಒತ್ತಾಯಗಳು ಕೇಳಿಬಂದವು.

ಕುಶಾಲನಗರದ ಗಡಿಭಾಗದ ಕೊಪ್ಪ ಗ್ರಾಮದಲ್ಲಿ ಮೈಸೂರು ಜಿಲ್ಲಾಡಳಿತದ ಮೂಲಕ ಪ್ರಯಾಣಿಕರ ತಪಾಸಣೆ ಕೂಡ ನಡೆಯುತ್ತಿದೆ.

ಬೆಂಗಳೂರು ಕಡೆಯಿಂದ ಬಂದ ಕಾರ್ಮಿಕರನ್ನು ಕರೆದೊಯ್ಯುವ ಬಸ್‍ಗಳು ಕೂಡ ಎರಡೂ ಕೇಂದ್ರಗಳಲ್ಲಿ ಪರಿಶೀಲನೆಗೆ ಒಳಗಾಗುತ್ತಿದ್ದು ಪ್ರತಿ ವಾಹನಗಳು ದಾರಿ ಮಧ್ಯೆ ಎರಡು ಗಂಟೆಗಳಿಗೂ ಅಧಿಕ ಕಾಲ ನಿಲ್ಲಬೇಕಾದ ಸ್ಥಿತಿ ಉಂಟಾಗಿದೆ.

ಈ ನಡುವೆ ಬಿಸಿಲಿನ ಪ್ರಮಾಣ ಅಧಿಕಗೊಂಡ ಕಾರಣ ಪ್ರಯಾಣಿಕರು ಕೂಡ ಬಳಲಿ ಸುಸ್ತಾಗಿದ್ದರು. ಕೊಪ್ಪ ಗಡಿಭಾಗದ ತಪಾಸಣಾ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳು ಸಮರ್ಪಕವಾಗಿ ಕ್ರಮಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಈ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಪ್ರಯಾಣಿಕರ ತಪಾಸಣಾ ಕೇಂದ್ರವೊಂದನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದ್ದು ಇನ್ನೆರಡು ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ತಿಳಿಸಿದ್ದಾರೆ. -ಪ್ರಜ್ವಲ್ ಜಿ.ಆರ್., ಕಿರಣ್, ಚಂದ್ರಮೋಹನ್