ಮಡಿಕೇರಿ, ಮೇ 5: ರೈತರಿಗೆ ಯಾವದೇ ರೀತಿಯಲ್ಲೂ ಅನ್ಯಾಯವಾಗದಂತೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ಎಂದು ಕೃಷಿ ಇಲಾಖೆಯ ಅಧಿಕಾರಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕರುಗಳಾದ ಸುನಿಲ್ ಸುಬ್ರಮಣಿ, ಅಪ್ಪಚ್ಚುರಂಜನ್ ಇವರುಗಳು ಕೃಷಿ ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರ ಹಾಕಿದರು. ಮಣ್ಣು ಪರೀಕ್ಷೆ ಸಮರ್ಪಕವಾಗಿ ನಡೆದಿಲ್ಲ, ಕೃಷಿ ಅಭಿಯಾನ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸುತ್ತಿಲ್ಲ, ರೈತರಿಗೆ ಇಲಾಖೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು. ಇದÀಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಧಿಕಾರಿಗಳು ಜನಪರವಾಗಿ ಕೆಲಸ ಮಾಡಬೇಕು, ರೈತ ಸ್ನೇಹಿಗಳಾಗಬೇಕು, ಇದೇ ಕೊನೆ ಇನ್ನೊಮ್ಮೆ ದೂರುಗಳು ಬರಬಾರದು ಎಂದು ಅಧಿಕಾರಿ ರಾಜು ಅವರಿಗೆ ಎಚ್ಚರಿಕೆಯಿತ್ತರು.ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಟ್ರ್ಯಾಕ್ಟರ್, ಟಿಲ್ಲರ್‍ಗಳು ರೈತರಿಗೆ ಅತ್ಯವಶ್ಯಕವಾಗಿದ್ದು, ಅವುಗಳಿಗೆ ಸಬ್ಸಿಡಿ ನೀಡಲು ಕ್ರಮಕೈಗೊಳ್ಳಬೇಕು, ಕೊಡಗಿಗೆ ಈ ಬಾರಿ ಹೆಚ್ಚಿನ ಟಾರ್ಪಲ್‍ಗಳನ್ನು ಒದಗಿಸಬೇಕು, ಭತ್ತ ಖರೀದಿಯನ್ನು ನವೆಂಬರ್‍ನಿಂದ ಆರಂಭಿಸಬೇಕು, ಕೃಷಿ ಹೊಂಡ ಸೌಲಭ್ಯ ಸಣ್ಣ ರೈತರಿಗೂ ಸಿಗುವಂತಾಗಬೇಕು ಎಂದು ಮನವಿ ಮಾಡಿದರು. ಈ ನಿಟ್ಟಿನಲ್ಲಿ ಸೂಕ್ತವಾಗಿ ಸ್ಪಂದಿಸುವದಾಗಿ ಸಚಿವರು ಭರವಸೆಯಿತ್ತರು.

ಶಾಸಕಿ ವೀಣಾ ಅಚ್ಚಯ್ಯ ಮಾತನಾಡಿ, ಜಲಪ್ರಳಯದಿಂದ ಕೊಡಗಿನ ರೈತರ ಗದ್ದೆಗಳಲ್ಲಿ ತುಂಬಿರುವ ಹೂಳನ್ನು ಸರ್ಕಾರದ ವತಿಯಿಂದಲೇ ತೆಗೆಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ಈ ಬಗ್ಗೆ ಕಾರ್ಯಪ್ರವೃತ್ತರಾಗುವದಾಗಿ ಪಾಟೀಲ್ ಆಶ್ವಾಸನೆಯಿತ್ತರು.

ರೈತ ಸಂಘದ ಮುಖಂಡ ಮನು ಸೋಮಯ್ಯ ಮಾತನಾಡಿ, ಜಿಲ್ಲೆಯಲ್ಲಿ ರೈತ ಬೆಳೆದ

(ಮೊದಲ ಪುಟದಿಂದ) ಬೆಳೆಗಳು ಕಾಡುಪ್ರಾಣಿಗಳ ಪಾಲಾಗುತ್ತಿದ್ದು, ಆನೆಗಳ ಹಾವಳಿ ತಡೆಗೆ ರೈಲ್ವೇ ಬ್ಯಾರಿಕೇಡ್ ವ್ಯವಸ್ಥೆ ಮಾಡಿಸಬೇಕು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊಡಗಿನಲ್ಲಿ ಕೃಷಿ ತೋಟಗಾರಿಕಾ ಬೆಳೆಗಳ ಶೀತಲ ಯಂತ್ರವೊಂದನ್ನು ಸ್ಥಾಪಿಸಬೇಕು. ಕೃಷಿ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಬೇಕೆಂದು ಮನವಿ ಮಾಡಿದರು.

ಕಾಡು ಪ್ರಾಣಿಗಳ ಉಪಟಳ ಸಂಬಂಧ ಸದ್ಯದಲ್ಲಿಯೇ ಜಿಲ್ಲೆಯ ಶಾಸಕರನ್ನೊಳಗೊಂಡು ಅರಣ್ಯ ಸಚಿವರ ಭೇಟಿಗೆ ಕ್ರಮಕೈಗೊಳ್ಳ ಲಾಗುವುದು. ಸಾಲ ಮರುಪಾವತಿ ಅವಧಿಯನ್ನು ಈಗಾಗಲೇ ಜೂನ್‍ವರೆಗೆ ವಿಸ್ತರಿಸಲಾಗಿದ್ದು, ಹೆಚ್ಚಿನ ಅವಧಿ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವದು ಎಂದು ಬಿ.ಸಿ. ಪಾಟೀಲ್ ನುಡಿದರು.

ಕೃಷಿ ಸಂಬಂಧಿ ಔಷಧಿಗಳು ಹಾರ್ಡ್‍ವೇರ್ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್‍ಗಣಪತಿ ಸಭೆಯ ಗಮನ ಸೆಳೆದರು. ಇದೊಂದು ದುರದೃಷ್ಟಕರ ಬೆಳವಣಿಗೆ ಎಂದ ಬಿ.ಸಿ. ಪಾಟೀಲ್ ಅಂತಹ ಅಂಗಡಿಗಳನ್ನು ಮುಟ್ಟುಗೋಲು ಹಾಕಿ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗೆ ಸೂಚಿಸಿದರು. ರೈತರು ಬಳಸುವ ಯಾವದೇ ಕೃಷಿ ಉತ್ಪನ್ನಗಳು ಕಳಪೆಯಾಗದಂತೆ ಗಂಭೀರವಾಗಿ ಗಮನ ಹರಿಸುವಂತೆ ನಿರ್ದೇಶನ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್, ಜಿ.ಪಂ. ಸಿಇಓ ಲಕ್ಷ್ಮೀಪ್ರಿಯ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಇದ್ದರು.