ಸೋಮವಾರಪೇಟೆ, ಮೇ 4: ವಿಶ್ವವನ್ನೇ ಆತಂಕಕ್ಕೆ ತಳ್ಳಿರುವ ಕೋವಿಡ್-19 ವೈರಸ್‍ನಿಂದ ರೋಗಿ ಗುಣಮುಖನಾಗುವಲ್ಲಿ ವೆಂಟಿಲೇಟರ್‍ಗಳ ಪಾತ್ರ ಬಹುಮುಖ್ಯ. ಭಾರತದಲ್ಲಿ ಇಂತಹ ವೆಂಟಿಲೇಟರ್‍ಗಳ ಕೊರತೆ ಇರುವ ಬಗ್ಗೆ ಹಲವಷ್ಟು ಮಂದಿ ದನಿಯೆತ್ತಿರುವ ಮಧ್ಯೆ, ಆಸ್ಟ್ರೇಲಿಯಾದಲ್ಲಿರುವ ಕೊಡಗು ಮೂಲದ ವೈದ್ಯರೋರ್ವರು ಕಡಿಮೆ ವೆಚ್ಚದ ವೆಂಟಿಲೇಟರ್ ಆವಿಷ್ಕಾರ ಮಾಡಿ ಗಮನ ಸೆಳೆದಿದ್ದಾರೆ.

ಕೊರೊನಾ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಇಂತಹ ವೆಂಟಿಲೇಟರ್‍ಗಳು ಬಹುಮುಖ್ಯ ಪಾತ್ರ ವಹಿಸುತ್ತಿದ್ದು, ಮೂಲತಃ ಸೋಮವಾರಪೇಟೆ ಪಟ್ಟಣದ ಬಸವೇಶ್ವರ ರಸ್ತೆ ನಿವಾಸಿ ಡಾ. ಕಿರಣ್ ಶೇಖರ್ ಅವರ ನೇತೃತ್ವದ ತಂಡ ಆವಿಷ್ಕರಿಸಿರುವ ಅಗ್ಗದ ವೆಂಟಿಲೇಟರ್‍ಗಳು ಆಸ್ಟ್ರೇಲಿಯಾದಲ್ಲಿ ಕೊರೊನಾ ಪೀಡಿತರ ಜೀವ ಉಳಿಸುವಲ್ಲಿ ನೆರವಾಗುತ್ತಿವೆ.

ಡಾ. ಕಿರಣ್ ಶೇಖರ್ ಅವರು ಪ್ರಸ್ತುತ ಆಸ್ಟ್ರೇಲಿಯಾದ ಪ್ರಿನ್ಸ್ ಚಾರ್ಲಿಸ್ ಆಸ್ಪತ್ರೆಯಲ್ಲಿ ಸಂಶೋಧಕ ಮತ್ತು ತುರ್ತು ನಿಗಾ ಘಟಕ (ಐಸಿಯು)ದಲ್ಲಿ ಹಿರಿಯ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಂಜಿನಿಯರ್‍ಗಳ ತಂಡದೊಂದಿಗೆ ಸೇರಿ ಕಡಿಮೆ ವೆಚ್ಚದಲ್ಲಿ ಕೊರೊನಾ ಸೋಂಕಿತರಿಗೆ ಕೃತಕ ಉಸಿರಾಟಕ್ಕೆ ಅವಕಾಶ ಕಲ್ಪಿಸುವ ವೆಂಟಿಲೇಟರ್ ಅನ್ನು ಆವಿಷ್ಕರಿಸಿದ್ದಾರೆ.

ಓಜಡ್ ವೇಡರ್’ ಹೆಸರಿನ ಈ ವೆಂಟಿಲೇಟರ್ ಹಾಲಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ವೆಂಟಿಲೇಟರ್‍ಗಳ ಬೆಲೆಗಿಂತ 10 ಪಟ್ಟು ಕಡಿಮೆ ದರದಲ್ಲಿ ಸಿಗಲಿದೆ. ಬ್ರಿಸ್ಟೇನ್ ಮೂಲಕ ಕಂಪೆನಿ ‘ಒಲಿಟಿಕ್’ನ ಜತೆಗೆ ಮೆಡಿಕಲ್ ಇಂಜಿನಿಯರಿಂಗ್ ರಿಸರ್ಚ್ ಫ್ಯಾಕಲ್ಟಿ (ಎಂಇಆರ್‍ಎಫ್), ಕ್ಯೂಸ್‍ಲ್ಯಾಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (ಕ್ಯೂಯುಟಿ) ಸಹಯೋಗದೊಂದಿಗೆ ಇದನ್ನು ತಯಾರಿಸಲಾಗಿದೆ.

ಕಡಿಮೆ ವೆಚ್ಚದ ವೆಂಟಿಲೇಟರ್ ನಿರ್ಮಾಣ ಮಾಡುವದರ ಜತೆಗೆ ಹೆಚ್ಚಿನ ಸುರಕ್ಷತೆ ಕಾಯ್ದುಕೊಳ್ಳುವದು ಸವಾಲಿನ ಕೆಲಸ. ಅಭಿವೃದ್ಧಿಶೀಲ ರಾಷ್ಟ್ರಗಳು ಅಗ್ಗದ ಉಪಕರಣವನ್ನು ತ್ವರಿತವಾಗಿ ತಯಾರಿಸುವದರಲ್ಲಿ ಮುಂದಿರುತ್ತವೆ ಎಂಬ ಮಾತಿದೆ. ಇದನ್ನು ಓಜಡ್ ವೇಡರ್ ಮಾಡಿ ತೋರಿಸಿದೆ. ಆ ಮೂಲಕ ದೇಶದಲ್ಲಿರುವ ಲಕ್ಷಾಂತರ ಬಡವರ ಪ್ರಾಣವನ್ನು ಉಳಿಸಲು ಸಹಕಾರಿಯಾಗಿದೆ ಎಂದು ಡಾ. ಕಿರಣ್ ಅಭಿಪ್ರಾಯಿಸಿದ್ದಾರೆ.

ಒಲಿಟಿಕ್ ಕಂಪೆನಿಯ ಎಂ.ಡಿ. ಜೇಮ್ಸ್ ಒಲಿವರ್ ಅವರು ರೋಬ್ಯಾಟಿಕ್ಸ್ ಇಂಜಿನಿಯರಿಂಗ್ ಮತ್ತು ಗಣಿಗಾರಿಕೆ ಉದ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಈಗಾಗಲೇ ಇರುವ ವೈದ್ಯಕೀಯ ಉಪಕರಣಗಳ ಪೂರೈಕೆಯ ದಾರಿಯಲ್ಲಿ ಹೋಗಲು ಇಷ್ಟಪಡುವದಿಲ್ಲ. ಬದಲಾಗಿ ಕೈಗಾರಿಕಾ ಘಟಕಗಳ ಮೂಲ ದಾರಿಯಲ್ಲಿ ಹೋಗಲು ಇಚ್ಚಿಸುತ್ತಾರೆ. ಇದು ಅಗ್ಗದ ವೆಂಟಿಲೇಟರ್‍ಗಳ ತಯಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದು ತಿಳಿಸಿದ್ದಾರೆ.

ಜಾಗತಿಕವಾಗಿ ಕಾಡುತ್ತಿರುವ ಕೊರೊನಾ ವೈರಸ್ ಪೀಡಿತ ರೋಗಿಗಳನ್ನು ಸಂರಕ್ಷಿಸಲು ಈ ವೆಂಟಿಲೇಟರ್‍ಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆ. ರೋಗಿಗಳ ಸಂಖ್ಯೆ ಹೆಚ್ಚಾದಂತೆ ಇವುಗಳ ಮಹತ್ವವೂ ತಿಳಿಯುತ್ತಾ ಹೋಗುತ್ತದೆ. ಇಂತಹ ವೆಂಟಿಲೇಟರ್‍ಗಳ ಉತ್ಪಾದನೆ ಭಾರತದಲ್ಲಿಯೂ ಆಗಬೇಕಿದೆ ಎಂದು ಡಾ. ಕಿರಣ್ ಶೇಖರ್ ಅಭಿಪ್ರಾಯಿಸಿದ್ದಾರೆ.

ಡಾ. ಕಿರಣ್ ಶೇಖರ್ ಅವರು ಸೋಮವಾರಪೇಟೆ ಬಸವೇಶ್ವರ ರಸ್ತೆಯ ನಿವಾಸಿ, ನಿವೃತ್ತ ಮುಖ್ಯೋಪಾಧ್ಯಾಯರುಗಳಾದ ಜೆ.ಸಿ. ಶೇಖರ್ ಮತ್ತು ಜಲಜಾ ದಂಪತಿಗಳ ಪುತ್ರ.