ಸೋಮವಾರಪೇಟೆ, ಮೇ 4: ನದಿಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಾಟಗೊಳಿಸಲು ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರ ಪೇಟೆ ಪೊಲೀಸರು, ಸ್ಥಳದಲ್ಲಿದ್ದ ಮರಳು ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡು ಈರ್ವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ತಾಲೂಕಿನ ಮಾದಾಪುರ ಸಮೀಪದ ನಂದಿಮೊಟ್ಟೆ ಎಂಬಲ್ಲಿ ಹರಿಯುವ ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆದು ಕೆ.ಎ. 12- ಎ.1564 ಸಂಖ್ಯೆಯ ಪಿಕ್‍ಅಪ್ ವಾಹನದಲ್ಲಿ ತುಂಬುತ್ತಿದ್ದ ಸಂದರ್ಭ ಪೊಲೀಸರು ಧಾಳಿ ನಡೆಸಿದ್ದಾರೆ.

ಈ ಸಂದರ್ಭ ವಾಹನದಲ್ಲಿದ್ದ ಈರ್ವರು ಸ್ಥಳದಿಂದ ಪರಾರಿಯಾಗಿದ್ದು, ಮರಳು ತುಂಬಿದ್ದ ಪಿಕ್‍ಅಪ್, ಮರಳುಗಾರಿಕೆಗೆ ಬಳಸಿದ್ದ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಅಕ್ರಮ ಮರಳು ಸಾಗಾಟದಲ್ಲಿ ತೊಡಗಿದ್ದ ವಾಹನ ಮಾಲೀಕ, ನಂದಿಮೊಟ್ಟೆ ನಿವಾಸಿ ಬಿ.ಸಿ. ಪೊನ್ನಪ್ಪ ಸೇರಿದಂತೆ ಮತ್ತೋರ್ವನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, ಸಹಾಯಕ ಠಾಣಾಧಿಕಾರಿ ಪೊನ್ನಪ್ಪ, ಮುಖ್ಯಪೇದೆ ಸುರೇಶ್, ಸಿಬ್ಬಂದಿಗಳಾದ ಶಿವಕುಮಾರ್, ಶಿವರಾಜು ಅವರುಗಳು ಭಾಗವಹಿಸಿದ್ದರು.