*ಗೋಣಿಕೊಪ್ಪಲು, ಮೇ 3 : ಹಗಲಿನಲ್ಲೇ ಕಾಫಿ ತೋಟದಲ್ಲಿ ಕಾಣಿಸಿಕೊಂಡಿರುವ ಹುಲಿ ಜನತೆಗೆ ಆತಂಕ ಉಂಟುಮಾಡಿದೆ. ನಾಗರಹೊಳೆ ಅರಣ್ಯದಂಚಿನಲ್ಲಿರುವ ರಾಜಾಪುರದ ಪೋಡಮಾಡ ಅಶೋಕ್ ಅವರ ಕಾಫಿ ತೋಟದಲ್ಲಿ ಶನಿವಾರ ಸಂಜೆ 5.30 ರ ವೇಳೆಯಲ್ಲಿ ಕಾಣಿಸಿಕೊಂಡು ಸ್ಥಳೀಯರಿಗೆ ತೀವ್ರ ಭಯ ಮೂಡಿಸಿದೆ.

ಆದೇಂಗಡ ದಿನೇಶ್ ಎಂಬವರು ತಮ್ಮ ಕಾರಿನಲ್ಲಿ ಶನಿವಾರ ಸಂಜೆ 5 ಗಂಟೆ ವೇಳೆಯಲ್ಲಿ ರಾಜಾಪುರದ ಪೋಡಮಾಡ ದಿನು ಅವರ ಮನೆಗೆ ಹೊರಟಿದ್ದಾರೆ. ಈ ಸಂದರ್ಭದಲ್ಲಿ ಪೋಡಮಾಡ ಅಶೋಕ್ ಅವರ ಕಾಫಿ ತೋಟದ ಗೇಟಿನಿಂದ ಸುಮಾರು 100 ಮೀಟರ್ ದೂರದಲ್ಲಿ ಕಾಫಿ ತೋಟದ ನಡುವಿನ ರಸ್ತೆಯಲ್ಲಿ ಹುಲಿ ಅಡ್ಡಾಡುತ್ತಿರುವುದು ಗೋಚರಿಸಿದೆ. ಇದರಿಂದ ಭಯಭೀತರಾದ ದಿನೇಶ್ ತಮ್ಮ ಕಾರಿನ ಕಿಟಕಿ ಗಾಜುಗಳನ್ನು ಏರಿಸಿಕೊಂಡು ತುಸು ಹೊತ್ತು ನಿಂತಿದ್ದಾರೆ.

ಈ ವೇಳೆಯಲ್ಲಿ ಹಿಂದೆ ತಿರುಗಿ ನೀಡಿದ ಹುಲಿ ಸ್ವಲ್ಪ ಹೊತ್ತು ನಿಂತು ಮತ್ತೆ ತೋಟದಲ್ಲಿ ಮರೆಯಾಗಿದೆ. ಇದನ್ನು ದಿನೇಶ್ ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು ಎಲ್ಲ ಕಡೆ ವೈರಲ್ ಆಗಿದೆ. ಹುಲಿ ತೀವ್ರ ದಣಿದಿದ್ದು ಆಹಾರಕ್ಕಾಗಿ ಅಲೆದಾಡುತ್ತಿದೆ ಎನ್ನಲಾಗಿದೆ. ಇದರಿಂದ ಕಾರ್ಮಿಕರು ಕಾಫಿ ತೋಟದಲ್ಲಿ ಕೆಲಸ ಮಾಡಲು ಭಯ ಪಡುತ್ತಿದ್ದಾರೆ. - ಎನ್.ಎನ್. ದಿನೇಶ್