ಗೋಣಿಕೊಪ್ಪಲು, ಮೇ 3 : ಹುಲಿ ಸೆರೆ ಕಾರ್ಯಾಚರಣೆಗೆ ನಡಿಕೇರಿ, ಗ್ರಾಮದಲ್ಲಿ ಬೀಡುಬಿಟ್ಟಿರುವ ಅಧಿಕಾರಿಗಳ ತಂಡ ಇದೀಗ ಪಲ್ಲೇರಿ, ಕುಮಟೂರು ಭಾಗಕ್ಕೆ ತೆರಳಿ ಅಭಿಮನ್ಯು, ಗೋಪಾಲಸ್ವಾಮಿ, ಕೃಷ್ಣ, ಭೀಮ ಹಾಗೂ ಗಣೇಶ ಎಂಬ 5 ಸಾಕಾನೆಗಳ ಸಹಾಯ ಪಡೆದು ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆಸುತ್ತಿದೆ.
ಹುಲಿಯು ಈ ಭಾಗದಲ್ಲಿ ಅಡ್ಡಾಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ. ಹೊಸ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇದರಿಂದಾಗಿ ಕೂಂಬಿಂಗ್ ಚುರುಕುಗೊಳಿಸಿದ್ದಾರೆ.
ಸಾರ್ವಜನಿಕರ ನೆಮ್ಮದಿ ಕೆಡಿಸಿರುವ ಈ ಹುಲಿಯನ್ನು ಸೆರೆಹಿಡಿಯಲು ಅರವಳಿಕೆ ತಜ್ಞ ಡಾ. ಮುಜೀಬ್ ಹಾಗೂ ಸಿಬ್ಬಂದಿ ಕಳೆದ 8 ದಿನಗಳಿಂದ ಅನುಭವಿ ಆನೆಗಳ ಸಹಾಯ ಪಡೆದು ಅರಣ್ಯ ಪ್ರದೇಶದಲ್ಲಿ ಹುಲಿ ಸೆರೆಗೆ ಪ್ರಯತ್ನ ಮಾಡುತ್ತಲೇ ಇದ್ದಾರೆ. ನಾಗರಹೊಳೆ ವನ್ಯಜೀವಿ ವಿಭಾಗದ ಶಿವಾನಂದ್, ವೀರಾಜಪೇಟೆಯ ಡಿಎಫ್‍ಓ ಶಿವಶಂಕರ್, ಆರ್‍ಎಫ್‍ಓ ಅರಮಣಮಾಡ ತೀರ್ಥ ಡಿಆರ್‍ಎಫ್‍ಓ ದಿವಾಕರ್ ಹಾಗೂ ಮಂಜುನಾಥ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. - ಹೆಚ್.ಕೆ.ಜಗದೀಶ್